Advertisement
ಕೃಷಿ ಭೂಮಿ ಇದ್ದವರು ಅಂದರಿಂದ ಏನೂ ಲಾಭವಿಲ್ಲವೆಂದು ಯೋಚಿಸಿ ಜಮೀನನ್ನೇ ಮಾರಿ ನಗರಗಳಿಗೆ ಸೇರುವುದು ಸಾಮಾನ್ಯವಾಗಿದೆ. ಹಾಗೆಯೇ, ಕೃಷಿಯೇ ಒಳ್ಳೆಯದು ಎಂದು ಭೂಮಿ ರಹಿತರು ಕ್ರಯದ ಆಧಾರದಲ್ಲಿ ಭೂಮಿ ಪಡೆದು ಕೃಷಿ ಆರಂಭಿಸಿ ಗೆಲುವು ಸಾಧಿಸಿರುವುದು ಕೂಡ ಅಲ್ಲಲ್ಲಿ ಕಂಡುಬರುತ್ತದೆ. ತಮ್ಮದೇ ಭೂಮಿ ಇಲ್ಲದಿದ್ದರೂ ಕೃಷಿ ಮಾಡಬೇಕೆಂಬ ಉತ್ಕಟ ಆಸೆಯಿಂದ ಕೃಷಿ ಭೂಮಿಗಿಳಿದು ಯಶಸ್ವಿಯಾಗಿದ್ದಾರೆ ಸುವರ್ಣಾ ಮಾರುತಿ ಜಾಡರ್.
ಸುವರ್ಣಾ ಮಾರುತಿ ಜಾಡರ್ ಹುಬ್ಬಳ್ಳಿಯ ನೂಲ್ವಿ ಗ್ರಾಮದವರು. ಪತಿ, ಜೀವನ ನಿರ್ವಹಣೆಗಾಗಿ ಕೂಲಿ ಅವಲಂಬಿಸಿದ್ದರು. ಬೆಳಗಿನಿಂದ ಸಂಜೆಯವರೆಗೆ ದುಡಿದರೂ ಉಳಿತಾಯ ಅಷ್ಟಕ್ಕಷ್ಟೇ. ಕೂಲಿಗೆ ಪರ್ಯಾಯ ಆಲೋಚನೆಯಲ್ಲಿದ್ದರು. ಹೈನುಗಾರಿಕೆ ಆರಂಭಿಸಿದರೆ ಒಳಿತು ಎನ್ನುವ ಅಭಿಪ್ರಾಯ ಇವರ ಆಪ್ತ ವಲಯದಲ್ಲಿ ಕೇಳಿ ಬಂದಿದ್ದರಿಂದ 25,000 ವೆಚ್ಚ ಮಾಡಿ ಒಂದು ಎಚ್.ಎಫ್ ಹಸು ಖರೀದಿಸಿದರು. ದಿನಕ್ಕೆ ಹದಿನಾರು ಲೀಟರ್ ಹಾಲು ಕೊಡುವ ಹಸು ಅದು. ಒಳ್ಳೆಯ ಗಳಿಕೆ ತಂದುಕೊಟ್ಟಿತ್ತು. ಒಂದು ಆಕಳಲ್ಲಿಯೇ ಹೈನುಗಾರಿಕೆ ಮೂಡಿಸಿದ ಭರವಸೆ ಇವರಿಗೆ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಆರಂಭಿಸುವಂತೆ ಪ್ರೇರೇಪಿಸಿತು. ವರ್ಷ ಕಳೆಯುವುದರೊಳಗೆ ಪುನಃ 40,000 ವೆಚ್ಚ ಮಾಡಿ ಇನ್ನೊಂದು ಆಕಳು ಖರೀದಿಸಿದರು. ದಿನಕ್ಕೆ ಹದಿನೈದು ಲೀಟರ್ ಹಾಲು ಹಿಂಡುವ ಆಕಳದು. ಎರಡು ಆಕಳಿನಿಂದ ಭರ್ತಿ ಆದಾಯ ಕೈ ಸೇರುತ್ತಿತ್ತು. ಜಮೀನು ರಹಿತರಾದ ಇವರಿಗೆ ಆಕಳಿಗೆ ಹಸಿರು ಮೇವು ಒದಗಿಸುವುದೇ ದೊಡ್ಡ ಸಮಸ್ಯೆಯಾಯಿತು. ಕ್ರಯದ ಆಧಾರದಲ್ಲಿ ಭೂಮಿಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಯಿತು. ರೈತರೊಬ್ಬರಿಂದ ಒಂದು ಎಕರೆ ಭೂಮಿಯನ್ನು ಲಾವಣಿಗೆ ಪಡೆದರು.
Related Articles
Advertisement
ಎರಡು ಆಕಳಿಂದ ಶುರುಎರಡು ಆಕಳಿನಿಂದ ದೊರೆಯುವ ಆದಾಯದೊಂದಿಗೆ ತರಕಾರಿ ಕೃಷಿಯಿಂದ ಗಳಿಸುವ ಮೊತ್ತ ಜೊತೆಯಾದಾಗ ಆರ್ಥಿಕ ಸ್ಥಿರತೆ ಇವರಲ್ಲಿ ಭದ್ರವಾಯಿತು. ಹೊಸ ಕನಸುಗಳು ಚಿಗುರೊಡೆದು ನಿಂತವು. ಹೈನುಗಾರಿಕೆ ವಿಸ್ತರಿಸಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಮುಂದಾಗಿ ಒಮ್ಮೆಲೇ ಇನ್ನೆರಡು ಆಕಳನ್ನು ಖರೀದಿಸಿದ್ದರು. ಆಕಳ ಸಂಖ್ಯೆ ನಾಲ್ಕಕ್ಕೇರಿತು. ಈಗ ಹೈನುಗಾರಿಕೆ ಆರಂಭಿಸಿ ನಾಲ್ಕು ವರ್ಷಗಳಾಗಿವೆ. ಒಂಭತ್ತು ಆಕಳುಗಳು ಇವರಲ್ಲಿವೆ. ದಿನ ನಿತ್ಯ ಮೂವತ್ತು ಲೀಟರ್ ಗಳಷ್ಟು ಹಾಲನ್ನು ಡೈರಿಗೆ ತಲುಪಿಸುತ್ತಿದ್ದಾರೆ. ಇಪ್ಪತ್ತು ಲೀಟರ್‌ಗಳಷ್ಟು ಹಾಲನ್ನು ಮನೆ ಬಾಗಿಲಲ್ಲೇ ಮಾರಾಟ ಮಾಡುತ್ತಾರೆ. ಹತ್ತಕ್ಕೂ ಅಧಿಕ ಖಾಯಂ ಗ್ರಾಹಕರು ಹಾಲನ್ನು ಒಯ್ಯತ್ತಾರೆ. ಡೈರಿಗೆ ಹಾಕುತ್ತಿರುವ ಹಾಲಿಗೆ ಲೀಟರ್ ವೊಂದಕ್ಕೆ 26 ರೂ. ದೊರೆಯುತ್ತದೆ. ಮನೆ ಬಾಗಿಲಿಗೆ ಬಂದು ಒಯ್ಯುವ ಗ್ರಾಹಕರಿಗೆ ಲೀಟರ್‌ಗೆ 30 ರೂ.ನಂತೆ ಮಾರುತ್ತಾರೆ. ಮನೆ ಪಕ್ಕದಲ್ಲಿಯೇ ಚಿಕ್ಕದಾದ ಕೊಟ್ಟಿಗೆ ಇದೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಪಶು ಆಹಾರ, ನೀರು ಕುಡಿಸುವುದು, ಹಸಿರು ಮೇವಿನ ಪೂರೈಕೆಯನ್ನು ಕ್ಲುಪ್ತ ಸಮಯಕ್ಕೆ ಪೂರೈಸುತ್ತಾರೆ. ಪರಿಣಾಮ, ಹೈನುಗಾರಿಕೆಯಲ್ಲಿ ಲಾಭದಾಯಕ ಹಾದಿ ಕ್ರಮಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಸುವರ್ಣಾ. ಒಂದು ಕಾಲದಲ್ಲಿ ಕೂಲಿಗೆ ತೆರಳಿ ಕಷ್ಟ ಪಡುತ್ತಿದ್ದ ಇವರ ಪತಿ ಮಾರುತಿ ಜಾಡರ್ ಇದೀಗ ಪೂರ್ಣಕಾಲಿಕವಾಗಿ ಹೈನುಗಾರಿಕೆ ಹಾಗೂ ಕೃಷಿಗೆ ಇಳಿದಿದ್ದಾರೆ. ಇವರಿಗೀಗ ಆದಾಯದ ಭದ್ರತೆ ಇದೆ. ತಿಂಗಳಿಗೆ 30,000 ರೂ. ಗಳಿಸುತ್ತಿದ್ದಾರೆ. – ಕೋಡಕಣಿ ಜೈವಂತ ಪಟಗಾರ