Advertisement
ಪ್ರಿಯ ತಮ್ಮ, ಹೃದಯದ ತುಂಬಾ ಹರಿದಾಡಿದ ಹರುಷದ ಉತ್ಕಟತೆಯನ್ನು ಅಕ್ಷರ ರೂಪಕ್ಕಿಳಿಸಲು ಹೊರಟಿರುವೆ. ಈಗ ನನಗಾಗುತ್ತಿರುವ ಸಂತೋಷಕ್ಕೆ ಪದಗಳೇ ಇಲ್ಲ. ಆದರೂ ಬರೆಯಲೇಬೇಕೆಂಬ ತಹತಹಿಕೆಯಲ್ಲಿ, ಅಮೂರ್ತ ಮನಸ್ಸಿನ ಮೂಕ ಮಾತುಗಳಿಗೆ ಅಕ್ಷರದ ರೂಪಗಳನ್ನು ನೀಡುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ.
ನನ್ನ ತಮ್ಮ ಭೂಮಿ ಕೆಲಸಕ್ಕ ಸಜ್ಜಾಗಿ ನಿಂತ ಅಂದ್ರೆ, ಅವನ ಪಕ್ಕಕ್ಕೆ ಹಾದು ಹೋಗುವುದಕ್ಕೂ ಅನೇಕರಿಗೆ ಭಯ. ಅವನ ಕೆಲಸದ ರಭಸ ಹಾಗಿರುತ್ತಿತ್ತು ಅಂತ ಊರಿನವರ ಬಳಿಯೆಲ್ಲ ಹೇಳಿಕೊಳ್ಳುವ ಸಂಭ್ರಮ ನನ್ನದಾಗಿತ್ತು. ನಮ್ಮದು 13 ಸದಸ್ಯರ ಕೂಡು ಕುಟುಂಬ. ಇರೋ ಪುಟ್ಟ ಮನೇಲಿ, ಕಳೀಬೇಕು. ಪಂಚ ಪಾಂಡವರಂತೆ ಐವರು ಅಣ್ಣತಮ್ಮಂದಿರು ನಾವು. ನೋವು- ನಲಿವುಗಳನ್ನು ಸಮನಾಗಿ ಹಂಚಿಕೊಂಡು ತಂದೆ- ತಾಯಿಯರ ಆದರ್ಶ ಪಾಲನೆಯಲ್ಲಿ ಬದುಕುತ್ತಿದ್ದೆವು.
Related Articles
Advertisement
ಮತ್ತೆ ನಿನ್ನ ಎಂದಿನ ಕೆಲಸದಲ್ಲಿ ಮುಳುಗುತ್ತಿದ್ದಿ. ನಿನ್ನ ಈ ಕನಸನ್ನೇ ಸಮೀಪದಿಂದ ನೋಡುತ್ತಿದ್ದ ಅಪ್ಪ, ನಿನ್ನ ಕನಸಿನ ಗಿಡಕ್ಕೆ ನೀರೆರೆದರು. ಪತ್ರಿಕೆಯಲ್ಲಿನ ಸೇನಾ ಭರ್ತಿ ಸುದ್ದಿಯನ್ನು ತಿಳಿಸಿ, ಅಲ್ಲಿಗೆ ಹೊರಡಲು ಸೂಚಿಸುತ್ತಿದ್ದರು, ಅಪ್ಪಯ್ಯ. ಹಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಲೇ ಇತ್ತು. ನಿನ್ನ ಕಟ್ಟು ಮಸ್ತು ದೇಹ, ಕಣಕ್ಕಿಳಿದಾಗ ನೀ ತೋರುತ್ತಿದ್ದ ದೈಹಿಕ ಪ್ರದರ್ಶನ… ಈ ವಿಚಾರದಲ್ಲಿ ನೀನು ಬಲಭೀಮ.
ಆದರೆ, ಲಿಖೀತ ಪರೀಕ್ಷೆ ಅಂತ ಬಂದಾಗ ನಿನ್ನ ಮೇಲೇಕೋ ಸರಸ್ವತಿ ಮುನಿಸಿಕೊಳ್ಳುತ್ತಿದ್ದಳು. “ಮರಳಿ ಯತ್ನವ ಮಾಡು’ ಎಂಬ ಮಾತಿನಲ್ಲಿ ನೀ ನಂಬಿಕೆಯಿಟ್ಟಿದ್ದಿ. ನಿನ್ನ ಕೈ ಹಿಡಿದಿದ್ದು ಕೂಡ ಅದೇ ನಂಬಿಕೆಯೇ. ಕೊನೆಗೂ ಅಪ್ಪನ ಕನಸಿನ ಕುದುರೆಯನ್ನೇರಿಬಿಟ್ಟೆ. ಕಾಲೇಜು ದಿನಗಳಲ್ಲಿ ಓದುವುದೆಂದರೆ, ಮೂತಿ ಮುರಿಯುತ್ತಿದ್ದ ನೀನು, ಅನುಮಾನ ಹುಟ್ಟುವಂತೆ ಓದಿಬಿಟ್ಟೆ.
ಸೇನಾ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿ ಅಂಕ ತೆಗೆದು, ಕೊನೆಗೂ ಪರೀಕ್ಷೆ ಎಂಬ ಯುದ್ಧದಲ್ಲಿ ಗೆದ್ದುಬಿಟ್ಟೆ. ಅಪ್ಪಯ್ಯನ ಆಸೆ ಕೊನೆಗೂ ಸಾಕಾರವಾಯಿತು. ಅಪ್ಪಯ್ಯ ಅಕ್ಷರಶಃ ಮಗುವಿನಂತೆ ಕೇಕೆ ಹಾಕಿ ಕುಣಿದಿದ್ದ. ನೀನು ಸೇನೆಗೆ ಸೇರಿದ್ದಾಗಿನಿಂದ ಊರಿನಲ್ಲಿ ಅಪ್ಪಯ್ಯನ ಠೀವಿಯೇ ಬದಲಾಗಿ ಹೋಗಿದೆ. ಅವನೇ ಮೇಜರ್ ರೀತಿ ಓಡಾಡುತ್ತಿದ್ದಾನೆ!
ಭಾರತಾಂಬೆ ಸೇವೆಗೆ ಸನ್ನದ್ಧನಾಗಿ, ಆಯ್ಕೆ ಪತ್ರ ಹಿಡಿದು ಸೇನೆ ಸೇರಲು ಸಜ್ಜಾಗಿ ನಿಂತಿರುವ ಮಗನನ್ನು ಕಣ್ತುಂಬಿಕೊಳ್ಳುತ್ತಾ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ’ ಎಂಬ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಅಭಿಮಾನದಿಂದ ಎದೆಯುಬ್ಬಿಸಿ ನಡೆಯುತ್ತಿದ್ದಾನೆ ನಮ್ಮಪ್ಪ. ಈ ಹಿಂದೆ ಕಾರ್ಗಿಲ್ ಯುದ್ಧದ ವೇಳೆ ದೊಡ್ಡಪ್ಪ ಸೇನೆಗೆ ಆಯ್ಕೆಯಾಗಿ ತರಬೇತಿಗೆ ಹೊರಟಾಗ, ಅಜ್ಜ ರೈಲ್ವೆ ನಿಲ್ದಾಣದವರೆಗೆ ಬೆನ್ನು ಹತ್ತಿ,
ಕಾಡಿ ಬೇಡಿ ಗೋಗರೆದು, ಬಲವಂತವಾಗಿ ವಾಪಸ್ ಮನೆಗೆ ಎಳೆದೊಯ್ದಿದ್ದನಂತೆ. ಇದನ್ನು ನೆನಪಿಸಿಕೊಂಡು ನೀರಾಗುತ್ತಿದ್ದ ದೇಶಭಕ್ತ ಅಪ್ಪಯ್ಯನ ನೋವಿನ ಗಾಯಕ್ಕೆ ಅವರ ಮುದ್ದು ಮಗನೀಗ ಶಾಶ್ವತವಾಗಿ ವಾಸಿಯಾಗುವಂಥ ಮುಲಾಮು ಹಚ್ಚಿದ್ದಾನೆ ಎಂಬ ಸಮಾಧಾನ ನನ್ನದು. ಮಗನನ್ನೂ ಸೈನಿಕನನ್ನಾಗಿಸುವ ಅಪ್ಪನ ಹಂಬಲ ಕೊನೆಗೂ ಈಡೇರಿದೆ.
ತನ್ನ ಜನುಮ ಸಾರ್ಥಕವಾಯಿತೆಂದು ತನ್ನ ಬತ್ತಿದ ಕಣ್ಣುಗಳಲ್ಲೂ ಕಾಂತಿ ಬೀರುತ್ತಾ, ಅದರೊಂದಿಗೆ ಆತ ಕಣ್ಣ ಹನಿ ಉದುರಿಸಿದ್ದೇ ನನಗೆ ಗೊತ್ತಾಗಲಿಲ್ಲ. ಅಪ್ಪಯ್ಯನ ಪ್ರಾರ್ಥನೆ ಈಗ ಜೋರಾಗಿದೆ. ದೇಶ ಕಾಯಲು ಹೊರಟ ಮಗನ ಕುರಿತೇ ಆ ಪ್ರಾರ್ಥನೆ ದೇವರಿಗೆ ಸಂದಾಯ. ಶಾನ್ ತೇರಿ ಕಭೀ ಕಮ್ ನ ಹೋ. ಹೇ ವತನ್ ಮೇರೇ ವತನ್ ಮೇರೆ ವತನ್…ನಿನ್ನ ಪ್ರೀತಿಯ ಅಣ್ಣ * ಅನಿಲಕುಮಾರ ಚಲವಾದಿ