Advertisement

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

11:51 PM Nov 15, 2024 | Team Udayavani |

ಬೆಂಗಳೂರು: ವಕ್ಫ್ ವಿವಾದಕ್ಕೆ ಸಂಬಂಧಿಸಿ ಸರಕಾರದ ವಿರುದ್ಧ ಬಿಜೆಪಿ ರಾಜ್ಯ ಘಟಕದ ವತಿಯಿಂದ ಅಧಿಕೃತ ಹೋರಾಟ ಘೋಷಿಸಲಾಗಿದ್ದು, “ನಮ್ಮ ಭೂಮಿ, ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಅಧ್ಯಯನ ತಂಡ ರಚನೆ ಮಾಡಲಾಗಿದೆ. ಜತೆಗೆ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ನಡೆಸುವ ಮೂಲಕ ವಕ್ಫ್ ವಿಷಯವನ್ನು ಕಾಂಗ್ರೆಸ್‌ ವಿರುದ್ಧ ಬ್ರಹ್ಮಾಸ್ತ್ರದ ರೀತಿ ಬಳಸಲು ಮುಂದಾಗಿದೆ.

Advertisement

“ಭಿನ್ನರು’ ಜಾಗೃತಿ ಅಭಿಯಾನ ಘೋಷಣೆ ಮಾಡುತ್ತಿದ್ದಂತೆ ಪಕ್ಷದಿಂದ ಎರಡು ಹಂತಗಳ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನವೇ ಪಟ್ಟಿ ಪ್ರಕಟಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೂರು ತಂಡ ರಚಿಸಿ ಹೋರಾಟಕ್ಕೆ ಇಳಿದಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ವಿಜಯೇಂದ್ರ ಘೋಷಣೆ ಮಾಡಿದ ಪಟ್ಟಿಯಲ್ಲಿ ಭಿನ್ನರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಹಾಗೂ ಅರವಿಂದ ಲಿಂಬಾವಳಿ ಅವರಿಗೆ ಸ್ಥಾನ ನೀಡಲಾಗಿದೆ.

ಈ ಮೂಲಕ ತಾವು ಎಲ್ಲರನ್ನೂ ಒಳಗೊಂಡ ಹೋರಾಟ ನಡೆಸುತ್ತಿದ್ದೇನೆ ಎಂಬ ಸಂದೇಶ ರವಾನೆ ಮಾಡುವುದಕ್ಕೆ ವಿಜಯೇಂದ್ರ ಮುಂದಾಗಿದ್ದಾರೆ. ಜತೆಗೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ವರಿಷ್ಠರಿಗೂ ಮಾಹಿತಿ ನೀಡಲಿದ್ದಾರೆ. ವಕ್ಫ್ ಹೋರಾಟವನ್ನು ಮೈಸೂರು ಚಲೋ ರೀತಿ ಪಕ್ಷದ ವೇದಿಕೆಯಲ್ಲೇ ನಡೆಸಲು ವಿಜಯೇಂದ್ರ ಬಣ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಆದರೆ ಭಿನ್ನ ನಾಯಕರನ್ನು ಒಂದೇ ತಂಡದಲ್ಲಿ ಇರಿಸಿಲ್ಲ. ವಿಜಯೇಂದ್ರ ನೇತೃತ್ವದ ತಂಡದಲ್ಲಿ ಜಾರಕಿಹೊಳಿ, ಅಶೋಕ್‌ ನೇತೃತ್ವದ ತಂಡದಲ್ಲಿ ಯತ್ನಾಳ್‌ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡದಲ್ಲಿ ಅರವಿಂದ ಲಿಂಬಾವಳಿಯವರಿಗೆ ಸ್ಥಾನ ನೀಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಈ ತಂಡ ರೈತರು ಹಾಗೂ ಮಠಮಾನ್ಯಗಳ ಆಸ್ತಿಯನ್ನು ವಕ್ಫ್ ಎಂದು ನಮೂದಿಸಿರುವುದರ ಹಿಂದಿನ ನೈಜ ಮಾಹಿತಿಯನ್ನು ಸಂಗ್ರಹಿಸಲಿದೆ. ಭಿನ್ನರು ಈ ಹೋರಾಟದ ಘೋಷಣೆ ಮಾಡುವುದಕ್ಕೆ ಮುನ್ನವೇ ಪಕ್ಷದಿಂದ ಈ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ ಈ ಮಾಹಿತಿಯನ್ನು ಕೆಲವರು ಭಿನ್ನರಿಗೆ ಸೋರಿಕೆ ಮಾಡಿದ್ದಾರೆ ಎಂದು ವಿಜಯೇಂದ್ರ ಬಣ ಚರ್ಚೆ ನಡೆಸಿದೆ.

ಅಧ್ಯಯನ ತಂಡದಲ್ಲಿ ಯಾರು ಯಾರು?
ತಂಡ 1
ಬಿ.ವೈ. ವಿಜಯೇಂದ್ರ, ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್‌, ಭಗವಂತ ಖೂಬಾ, ಡಾ| ಅಶ್ವತ್ಥನಾರಾಯಣ, ಮುರುಗೇಶ್‌ ನಿರಾಣಿ, ಶ್ರೀರಾಮುಲು, ರಮೇಶ್‌ ಜಾರಕಿಹೊಳಿ, ಈರಣ್ಣ ಕಡಾಡಿ, ಹಾಲಪ್ಪಾಚಾರ್‌, ಸುನೀಲ್‌ ವಲ್ಯಾಪುರೆ, ಎಂ.ಬಿ. ಜಿರಲಿ.
ಪ್ರವಾಸದ ಜಿಲ್ಲೆ: ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟೆ.
ಸಂಚಾಲಕರು : ಪಿ. ರಾಜೀವ್‌, ಸಂಯೋಜಕರು: ಅರುಣ್‌ ಶಹಾಪುರ, ಹರೀಶ್‌ ಪೂಂಜಾ, ಡಾ|ಶೈಲೇಂದ್ರ ಬೆಲ್ದಾಳೆ.

Advertisement

ತಂಡ 2
ಆರ್‌. ಅಶೋಕ್‌, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್‌ ಯತ್ನಾಳ್‌, ರಾಜುಗೌಡ, ಎಂ.ಪಿ.ರೇಣುಕಾಚಾರ್ಯ, ಎನ್‌. ಮಹೇಶ್‌, ದೊಡ್ಡನಗೌಡ ಪಾಟೀಲ್‌, ಭಾರತಿ ಶೆಟ್ಟಿ, ಡಾ.ಬಿ.ಸಿ.ನವೀನ್‌ ಕುಮಾರ್‌, ವಸಂತಕುಮಾರ್‌.
ಪ್ರವಾಸದ ಜಿಲ್ಲೆ : ಚಾಮರಾಜನಗರ, ಮೈಸೂರು ನಗರ ಹಾಗೂ ಗ್ರಾಮಾಂತರ, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ. ಸಂಚಾಲಕರು : ಜೆ. ಪ್ರೀತಂ ಗೌಡ, ಸಂಯೋಜಕರು: ವಿನಯ್‌ ಬಿದರೆ, ಡಿ.ಎಸ್‌. ಅರುಣ್‌, ಲಕ್ಷ್ಮೀ ಅಶ್ವಿ‌ನ್‌ ಗೌಡ.

ತಂಡ 3
ಛಲವಾದಿ ನಾರಾಯಣಸ್ವಾಮಿ, ಡಿ.ವಿ. ಸದಾನಂದ ಗೌಡ, ವಿ. ಸೋಮಣ್ಣ, ಸಿ.ಟಿ. ರವಿ, ನಳೀನ್‌ ಕುಮಾರ್‌ ಕಟೀಲು, ಅರವಿಂದ ಲಿಂಬಾವಳಿ, ಎಸ್‌. ಮುನಿಸ್ವಾಮಿ, ಆರಗ ಜ್ಞಾನೇಂದ್ರ, ಬಿ.ಸಿ. ಪಾಟೀಲ್‌, ವೈ.ಎ. ನಾರಾಯಣಸ್ವಾಮಿ, ವಿವೇಕ ಸುಬ್ಟಾರೆಡ್ಡಿ.
ಸಂಚಾಲಕರು: ವಿ. ಸುನಿಲ್‌ ಕುಮಾರ್‌, ಸಂಯೋಜಕರು: ಅಶ್ವತ್ಥನಾರಾಯಣ, ತಮ್ಮೇಶ ಗೌಡ, ಅಂಬಿಕಾ ಹುಲಿ ನಾಯ್ಕರ್‌.


ಶನಿವಾರ ದಿನಾಂಕ ಘೋಷಣೆ
ಅಧ್ಯಯನ ಪ್ರವಾಸ ಎಂದಿನಿಂದ ಪ್ರಾರಂಭವಾಗುತ್ತದೆ ಎಂಬುದನ್ನು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಪ್ರಕಟಿಸಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಈ ಬಗ್ಗೆ ವಿವರಣೆ ನೀಡುವುದಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದು, ಹೋರಾಟದ ಸ್ವರೂಪವನ್ನು ವಿವರಿಸಲಿದ್ದಾರೆ.

“ರೈತರ ವಿಷಯದಲ್ಲಿ ಬಿಜೆಪಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಹಿರಿಯ ತಂಡ ರಚನೆ ಆಗಿದೆ. ರೈತರ ಪರವಾಗಿ ಯಾರ ಬೇಕಾದರೂ ಹೋರಾಟ ಮಾಡಬಹುದು, ಅದಕ್ಕೆ ನಮ್ಮದೇನೂ ತಕರಾರು ಇಲ್ಲ.” -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next