ಒಂದು ಲೋಟಕ್ಕೆ ನೀರು ತುಂಬಿಸೋಕೆ ಏನು ಮಾಡ್ಬೇಕು? ತುಂಬಾ ಸಿಂಪಲ್, ಇನ್ನೊಂದು ಲೋಟವನ್ನು ಎತ್ತಿ ಹಿಡಿದು ಮೇಲಿನಿಂದ ಸುರಿಯಬೇಕು, ಅಲ್ವಾ? ಅದು ಸರಳವಾದ ಉತ್ತರ. ಆದರೆ, ಮ್ಯಾಜಿಕ್ ಮೂಲಕ ನೀರು ತುಂಬಿಸುವ ವಿಧಾನ ನಿಮಗೆ ಗೊತ್ತಾ?
ಬೇಕಾಗುವ ವಸ್ತು: 2 ಪ್ಲಾಸ್ಟಿಕ್ ಲೋಟ, ಬಣ್ಣದ ನೀರು
ಪ್ರದರ್ಶನ: ಟೇಬಲ್ ಮೇಲೆ ಬಣ್ಣದ ನೀರಿನಿಂದ ಅರ್ಧ ತುಂಬಿದ ಪ್ಲಾಸ್ಟಿಕ್ ಲೋಟವಿದೆ. ಜಾದೂಗಾರನ ಕೈಯಲ್ಲಿ ಇನ್ನೊಂದು ಪ್ಲಾಸ್ಟಿಕ್ ಲೋಟವಿದ್ದು, ಅದರ ತಳದಲ್ಲಿ ಸ್ವಲ್ಪ ಬಣ್ಣದ ನೀರಿದೆ. ಆತ ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅರ್ಧ ತುಂಬಿದ್ದ ಲೋಟದೊಳಗೆ ಮೇಲಿನಿಂದ ಎತ್ತಿ ಹಾಕುತ್ತಾನೆ (ಮುಳುಗಿಸುತ್ತಾನೆ) ನಂತರ ಆ ಲೋಟವನ್ನೆತ್ತಿ ನೋಡಿದರೆ, ಅದು ಖಾಲಿಯಾಗಿರುತ್ತದೆ. ಅದರಲ್ಲಿದ್ದ ಬಣ್ಣದ ನೀರು ಟೇಬಲ್ ಮೇಲಿನ ಲೋಟಕ್ಕೆ ಸೇರಿದ್ದು ಹೇಗೆ?
ತಯಾರಿ: ಈ ಜಾದೂವಿಗೆ ಪೂರ್ವ ತಯಾರಿ ಅಗತ್ಯ. ಅದೇನೆಂದರೆ, ಮೊದಲು ಒಂದು ಪ್ಲಾಸ್ಟಿಕ್ ಲೋಟದ ತಳವನ್ನು ಕತ್ತರಿಸಿ, ಅದರಲ್ಲಿ ಬಣ್ಣದ ನೀರನ್ನು ತುಂಬಿ. ಆಮೇಲೆ ಇನ್ನೊಂದು ಖಾಲಿ ಪ್ಲಾಸ್ಟಿಕ್ ಲೋಟವನ್ನು ಅದರ ಮೇಲೆ ಇಡಿ. ಅದರ ತಳ ಭಾಗವನ್ನು ಹಿಡಿದು ಪ್ರೇಕ್ಷಕರಿಗೆ ಎತ್ತಿ ತೋರಿಸಿ. ನೋಡುವವರಿಗೆ ಅದರಲ್ಲಿ ಎರಡು ಲೋಟ ಇರುವುದು ತಿಳಿಯುವುದಿಲ್ಲ. ಆಮೇಲೆ ಆ ಲೋಟವನ್ನೆತ್ತಿ, ಟೇಬಲ್ ಮೇಲಿಟ್ಟಿರುವ ಲೋಟದೊಳಕ್ಕೆ ಹಾಕಿ. ನೀರು ತುಂಬಿದ ತಳಭಾಗ ಲೋಟದೊಳಕ್ಕೆ ಉಳಿದುಕೊಳ್ಳುತ್ತದೆ. ಮೇಲಿನ ಖಾಲಿ ಲೋಟವನ್ನು ಎತ್ತಿ ತೋರಿಸಿದಾಗ ನೋಡುಗರು ಅಚ್ಚರಿಪಡುತ್ತಾರೆ.