Advertisement
ಸದ್ಯ ಕಂದಾಯ ಇಲಾಖೆಯಲ್ಲಿ 15,000 ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿ 13,000 ಕಡತಗಳು ಬಾಕಿ ಇದ್ದು, ಇವುಗಳ ತ್ವರಿತ ವಿಲೇವಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.ಸಚಿವಾಲಯದಲ್ಲೂ ಕಡತ ವಿಲೇವಾರಿ ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ. ಆ ಹಿನ್ನೆಲೆಯಲ್ಲಿ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ.ವಿಜಯ ಭಾಸ್ಕರ್ ಅವರು ದೈನಂದಿನ ಕಡತ ಬಾಕಿ ಕುರಿತು ಎಸ್‌ಎಂಎಸ್ ರವಾನಿಸುವ ವ್ಯವಸ್ಥೆ ಜಾರಿಗೊಳಿಸಿದ್ದರು. ಅಂದರೆ ಅಧಿಕಾರಿಗಳು ಒಂದು ಕಡತವನ್ನು ಐದು ದಿನದಲ್ಲಿ ವಿಲೇವಾರಿ ಮಾಡಬೇಕಿತ್ತು. ಕಡತ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮೇಲಿನ ಅಧಿಕಾರಿಗಾಗಲಿ ಇಲ್ಲವೇ ಅಧೀನ ಅಧಿಕಾರಿಗಾಗಲಿ ರವಾನಿಸಬೇಕಿತ್ತು. ಅದರಂತೆ 15 ದಿನಗಳ ಕಾಲ ವಿಲೇವಾರಿ ಮಾಡದೆ ಉಳಿಸಿಕೊಂಡಿರುವ ಕಡತಗಳ ವಿವರವನ್ನು ಎಸ್‌ಎಂಎಸ್ ಮೂಲಕ ಕಳುಹಿಸುವಂತೆ ಸೂಚಿಸಿದ್ದರು. ಅದರ ಪ್ರಕಾರ ಆರು ತಿಂಗಳ ಹಿಂದೆ 1.50 ಲಕ್ಷಕ್ಕೂ ಹೆಚ್ಚು ಕಡತಗಳು ಬಾಕಿ ಉಳಿದಿದ್ದವು.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಜಯ ಭಾಸ್ಕರ್ ಅವರು ಕಡತ ವಿಲೇವಾರಿಗೆ ಆದ್ಯತೆ ನೀಡಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾರಂಭಿಸಿದ್ದಾರೆ. ಪರಿಣಾಮವಾಗಿ 41,000ಕ್ಕೂ ಹೆಚ್ಚು ಕಡತಗಳು ಇತ್ಯರ್ಥಗೊಂಡಿವೆ. ಮುಖ್ಯ ಕಾರ್ಯದರ್ಶಿಗಳೇ ಖುದ್ದಾಗಿ ಇದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮಾಸಿಕ 150ಕ್ಕೂ ಹೆಚ್ಚು ಸಭೆ:
ಕಾರ್ಯಾಂಗದ ಮುಖ್ಯಸ್ಥರಾದ ಮುಖ್ಯ ಕಾರ್ಯದರ್ಶಿಗಳು ಮಾಸಿಕ 150ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ತಿಂಗಳ ಮೊದಲ ದಿನ ಕಾರ್ಯದರ್ಶಿಗಳೊಂದಿಗೆ ಬಜೆಟ್ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಾರೆ. ಮೂರನೇ ದಿನ ಹೈಕೋರ್ಟ್, ಮಾನವ ಹಕ್ಕುಗಳ ಆಯೋಗ ಸೇರಿದಂತೆ ಇತರೆ ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚೆ. ನಾಲ್ಕನೇ ದಿನ ಕೆಪಿಎಸ್‌ಸಿಗೆ ಸಂಬಂಧಪಟ್ಟ ವಿಚಾರ ಕುರಿತು ಸಭೆ. 8ನೇ ದಿನ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ. ನಾನಾ ಯೋಜನೆಗೆ ಭೂಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಇತರೆ ಪ್ರಗತಿ ಪರಿಶೀಲಿಸುತ್ತಾರೆ.
Related Articles
Advertisement
ರಾಜಧಾನಿಯ ಅಭಿವೃದ್ಧಿ ಕಾರ್ಯಗಳಿಗೂ ಗಮನ ನೀಡಿರುವ ಮುಖ್ಯ ಕಾರ್ಯದರ್ಶಿಗಳು ತಿಂಗಳ ಮೊದಲ ಶುಕ್ರವಾರ ಸಬ್‌ಅರ್ಬನ್ ರೈಲ್ವೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಪ್ರಗತಿ ಪರಿಶೀಲನೆ ನಡೆಸುತ್ತಾರೆ. ಎರಡನೇ ಶುಕ್ರವಾರ ಬಿಬಿಎಂಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ನಿತ್ಯ ಮಧ್ಯಾಹ್ನ 3.30ರಿಂದ 4.30ರವರೆಗೆ ಸಾರ್ವಜನಿಕರನ್ನು ಭೇಟಿಯಾಗುತ್ತಾರೆ.
ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತುಕಾರ್ಯಾಂಗದ ಸುಗಮ ಕಾರ್ಯ ನಿರ್ವಹಣೆಗೆ ಒತ್ತು ನೀಡಲಾಗಿದ್ದು, ಅದಕ್ಕೆ ಪೂರಕವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಇಲಾಖೆಗಳ ನಡುವೆ ಸಮನ್ವಯಕ್ಕೂ ಒತ್ತು ನೀಡಲಾಗಿದೆ. ನಿತ್ಯ ಕನಿಷ್ಠ ಐದು ಸಭೆಗಳಿರುತ್ತವೆ. ತಿಂಗಳಿಗೆ 125ರಿಂದ 150 ಸಭೆ ನಡೆಸುತ್ತೇನೆ. ಕಡತ ವಿಲೇವಾರಿಗೂ ಆದ್ಯತೆ ನೀಡಲಾಗಿದ್ದು, ವಿಲೇವಾರಿಯಾಗದ ಕಡತಗಳ ಸಂಖ್ಯೆ 1.50 ಲಕ್ಷದಿಂದ 1.09 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ “ಉದಯವಾಣಿ’ಗೆ ತಿಳಿಸಿದರು. ನಿಯಮಿತ ಸಭೆಗಳಿಂದಾಗಿ ಯೋಜನೆಗಳ ಅನುಷ್ಠಾನವೂ ವೇಗ ಪಡೆಯುತ್ತದೆ. ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಕುರಿತಂತೆ ಪವರ್ ಗ್ರಿಡ್ ಕಾರ್ಪೊರೇಷನ್ ಯೋಜನೆಯೊಂದು ಮೂರ್‍ನಾಲ್ಕು ವರ್ಷದಿಂದ ಬಾಕಿ ಇತ್ತು. ತಮಿಳುನಾಡು, ಆಂಧ ಪ್ರದೇಶದಲ್ಲಿ ಈ ಯೋಜನೆ ಕಾರ್ಯಗತವಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ 10 ದಿನಕ್ಕೊಮ್ಮೆ ಪ್ರಗತಿ ಪರಿಶೀಲಿಸಲಾಗುತ್ತಿದ್ದು, ಇದೀಗ ವೇಗ ಪಡೆದುಕೊಂಡಿದೆ. ರೈಲ್ವೆ, ಹೆದ್ದಾರಿ, ಹಾಸ್ಟೆಲ್, ವಸತಿ ಶಾಲೆ, ನಿವೇಶನರಹಿತರಿಗೆ ಮನೆ ನಿರ್ಮಾಣ ಯೋಜನೆಗಳಿಗೆ ಆದ್ಯತೆ ಮೇರೆಗೆ ಭೂಸ್ವಾಧೀನಕ್ಕೆ ಒತ್ತು ನೀಡಲಾಗಿದೆ. ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ ಜನರಿಗೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು. – ಎಂ. ಕೀರ್ತಿಪ್ರಸಾದ್