ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಪಾಳ್ಯದ ಹಿಂದೂ ರುದ್ರಭೂಮಿ ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಕಾಳಿಮಠದ ರಿಷಿಕುಮಾರ ಅವರು ಎಚ್ಚರಿಕೆ ನೀಡಿದ್ದಾರೆ.
ಗೋರಿಪಾಳ್ಯ ಹಿಂದೂ ರುದ್ರಭೂಮಿ ತೆರವುಗೊಳಿಸಿ ಮೈದಾನ ಮಾಡಲಾಗುತ್ತಿದೆ ಎಂಬ ವದಂತಿ ಹರದಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ರುದ್ರಭೂಮಿಯಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು.
ಸಚಿವ ಜಮೀರ್ ಅಹಮದ್ ಹಾಗೂ ಪಾಲಿಕೆ ಸದಸ್ಯೆ ಪತಿ ಅಲ್ತಾಫ್ಖಾನ್ ಗೌರಿಪಾಳ್ಯದ ಹಿಂದೂ ರುದ್ರಭೂಮಿ ತೆರವುಗೊಳಿಸಿ ಮೈದಾನ ಮಾಡಲು ಮುಂದಾಗಿದ್ದಾರೆ ಎಂಬ ಫೋಸ್ಟ್‌ಗಳು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಾಗಿ ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು, ಇದು ಮುಂದುವರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸದಸ್ಯೆ ಸೀಮಾ ಅವರ ಪತಿ ಅಲ್ತಾಫ್ ಖಾನ್, ರುದ್ರಭೂಮಿಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವ ಕಾರ್ಯಕ್ಕೆ ನಾವು ಮುಂದಾಗಿಲ್ಲ. ನಾವು ಹಿಂದೂಪರವಾಗಿದ್ದು, ನಾವು ರುದ್ರಭೂಮಿ ತೆರವುಗೊಳಿಸಲು ಮುಂದಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದರೆ, ತಮ್ಮ ಪತ್ನಿಯಿಂದ ಪಾಲಿಕೆ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದಾಗಿ ಸವಾಲು ಹಾಕಿದರು.
ಆಗ ರಿಷಿಕುಮಾರ ಅವರು ರುದ್ರಭೂಮಿಯಲ್ಲಿ ಗೋರಿ ಕಲ್ಲುಗಳನ್ನು ತೆರವುಗೊಳಿಸಿರುವ ಜಾಗವನ್ನು ತೋರಿಸಿದಾಗ, ಇದು ರಾಜಕೀಯವಾಗಿ ತಮಗೆ ಆಗದವರು ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.