ರಾಮನಗರ: ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ದೇವರಹೊಸಹಳ್ಳಿ ಗ್ರಾಮದ ದಲಿತ ಮುಖಂಡರು ಗುರುವಾರ (ನ.28) ಚನ್ನಪಟ್ಟಣ ತಾಲೂಕು ಕಚೇರಿ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಿದ್ದಾರೆ.
ದೇವರಹೊಸಹಳ್ಳಿ ಗ್ರಾಮದ ರಾಜೇಶ ಎಂಬ ಯುವಕ ಬುಧವಾರ ನಡೆದ ಬೈಕ್ ಅಪಘಾತದಲ್ಲಿ ಸಾವಿಗೀಡಾಗಿದ್ದ. ಮೃತ ಯುವಕನ ಶವ ಸಂಸ್ಕಾರ ಮಾಡಲು ಕುಟುಂವದವರು ಶವವನ್ನು ಸ್ಮಶಾನಕ್ಕೆತೆಗೆದುಕೊಂಡು ಹೋಗುವಾಗ ಸ್ಥಳೀಯರು ನಮ್ಮ ಜಮೀನಿನ ಮೇಲೆ ಹೋಗಬೇಡಿ ಎಂದು ಅಡ್ಡಿಪಡಿಸಿದ್ದಾರೆ.
ಸ್ಮಶಾನಕ್ಕೆ ಹೋಗಲು ಜಾಗವಿಲ್ಲದ ಕಾರಣ ಕುಪಿತಗೊಂಡ ದೇವರಹೊಸಹಳ್ಳಿ ಗ್ರಾಮದ ದಲಿತರು ಶವವನ್ನು ತಾಲೂಕು ಕಚೇರಿ ಮುಂಭಾಗಕ್ಕೆ ತೆಗೆದುಕೊಂಡು ಬಂದು ನಮಗೆ ಸ್ಮಶಾನ ಕೊಡದೇ ಹೋದರೆ ತಾಲೂಕು ಕಚೇರಿ ಮುಂಭಾಗವೇ ಶವಸಂಸ್ಕಾರ ಮಾಡುವುದಾಗಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿಗೆ ಶವ ಮತ್ತು ಸೌಧೆಯೊಂದಿಗೆ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಸ್ಥಳಕ್ಕೆಆಗಮಿಸಬೇಕು, ದೇವರಹೊಸಹಳ್ಳಿ ಗ್ರಾಮದ ದಲಿತರಿಗೆ ಸ್ಮಶಾನ ಕಲ್ಪಿಸಬೇಕು ಇಲ್ಲದಿದ್ದರೆ ತಾಲೂಕು ಕಚೇರಿ ಆವರಣದಲ್ಲೇ ಶವಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ನರಸಿಂಹ ಮೂರ್ತಿ ದೇವರ ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಮಶಾನಕ್ಕೆ ಜಾಗವಿದ್ದು ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರಾದರೂ, ಸ್ಮಶಾನಕ್ಕೆ ಜಾಗ ನೀಡುವ ವರೆಗೆ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರೆಸಿದ್ದಾರೆ.