ಕಲಬುರಗಿ: ಅನಿಷ್ಟ ಪದ್ಧತಿಗಳ ವಿರುದ್ಧ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ್ದು ನಾಡಿನ ಇಂಚಿಗೇರಿಮಠ ಎಂದು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಹೇಳಿದರು.
ನಗರದ ಆಳಂದ ರಸ್ತೆಯ ಇಂಚಗೇರಿ ಶಾಖಾ ಮಠದಲ್ಲಿ 48ನೇ ರಾಷ್ಟ್ರೀಯ ಭಾವೈಕ್ಯತೆ-ಕೋಮು ಸೌಹಾರ್ದತೆ ಕಾರ್ಯಕ್ರಮ ಹಾಗೂ ಸದ್ಗುರು ಸಮರ್ಥ ಮಾಧವಾನಂದ ಪ್ರಭುಗಳ ಸ್ಮರಣಾರ್ಥ, ಸದ್ಗುರು ರೇವಣಸಿದ್ಧೇಶ್ವರ ಮಹಾರಾಜ ಇಂಚಗೇರಿ ಮಠದ ಪೀಠ ಅಲಂಕರಿಸಿದ ದಶಮಾನೊತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂಚಗೇರಿ ಮಠದ ಮಾಧವಾನಂದ ಪ್ರಭುಗಳ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಬಾರಿ ಜೈಲುವಾಸ ಅನುಭವಿಸಿ ನಂತರ ಕರ್ನಾಟಕ ಏಕೀಕರಣಕ್ಕಾಗಿ ಗೋವಾ ವಿಮೋಚನೆಗಾಗಿ ಹೋರಾಡಿ ನಾಡಿನಾದ್ಯಂತ ಹೆಸರುವಾಸಿಯಾಗಿದ್ದರು. ಜತೆಗೆ ಸಾಮಾಜಿಕವಾಗಿ ನಿರಂತರ ಹೋರಾಟ ಮಾಡಿ ವಿಧವೆಯರ ಪುನರ್ ವಿವಾಹ, ದೇವದಾಸಿಯರಿಗೆ ವಿಮುಕ್ತಿ, ಮಠದ ವತಿಯಿಂದ ಅಂತರ್ಜಾತಿ ವಿವಾಹ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಪೂಜ್ಯರು ಬಸವೇಶ್ವರ, ಅಂಬೇಡ್ಕರ್ ವಿಚಾರಧಾರೆ ಮೇಲೆ ಎಲ್ಲ ಜಾತಿಯವರಿಗೂ ಮಠದಲ್ಲಿ ಸಮಾನವಕಾಶ ಕೊಟ್ಟಿದ್ದರು ಎಂದು ಹೇಳಿದರು.
ಮಾಜಿ ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ಮಾತನಾಡಿ, ಮಠದ ಶ್ರೇಯೋಭಿವೃದ್ಧಿಗಾಗಿ ಕ್ಷೇತ್ರದ ದಿ. ಶಾಸಕ ಚಂದ್ರಶೇಖರ ಪಾಟೀಲ, ಶಾಸಕ ದತ್ತಾತ್ರೇಯ ಪಾಟೀಲ ಸಮುದಾಯ ಭವನ, ಆಳಂದ ಮುಖ್ಯರಸ್ತೆಯಿಂದ ರಾಣಸಪೀರ್ ದರ್ಗಾ ವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ರೇವಣಸಿದ್ಧ ಮಹಾರಾಜರು ಆಶೀರ್ವಾದ ನೀಡಿ ಸಕಲ ಮಾನವ ಕುಲ ಒಂದೇ ಎಂಬ ಭಾವನೆಯಿಂದ ಮಠದ ಪರಂಪರೆ ನಡೆಯುತ್ತಿದೆ. ಮಠದ ವತಿಯಿಂದ ನಿರಂತರವಾಗಿ ಸಾಮಾಜಿಕ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ಡಾ| ಶಂಭುಲಿಂಗ ಬಳಬಟ್ಟಿ, ವಿಶಾಲ ದರ್ಗಿ, ಶೋಭಾ ದೇಸಾಯಿ, ರಾಮರೆಡ್ಡಿ ಗುಮ್ಮಟ್, ರಾಜು ದೇವದುರ್ಗ, ಮಾಜಿ ಸದಸ್ಯ ಸೂರಜ ತಿವಾರಿ, ಎಇಇ ಕಂಟೆಪ್ಪ ಬಾವಗಿ, ಎಇ ಮದನಿಕಾಂತ ಶ್ರೀಂಗೇರಿ ಇದ್ದರು. ಮಠದ ಖಜಾಂಚಿ ಜಯದ್ರಥ ಶೃಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ಅಧ್ಯಕ್ಷ ದತ್ತಾತ್ರೇಯ ಹಾಸಿಲ್‌ಕರ್ ಸ್ವಾಗತಿಸಿದರು,ಕಾರ್ಯದರ್ಶಿ ಮಹಾದೇವ ಸಿಂಧೆ ನಿರೂಪಿಸಿದರು.