Advertisement

ಏಮ್ಸ್ ಗಾಗಿ  ಹೋರಾಟ; ಜನಪ್ರತಿನಿಧಿಗಳ ಪ್ರತಿಕೃತಿ ದಹನ

05:11 PM Mar 25, 2022 | Team Udayavani |

ರಾಯಚೂರು: ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ಆಗ್ರಹಿಸಿ ರಾಯಚೂರು ಏಮ್ಸ್‌ ಹೋರಾಟ ಸಮಿತಿಯಿಂದ ಗುರುವಾರ ಜಿಲ್ಲೆಯ ಜನಪ್ರತಿನಿಧಿಗಳ ಪ್ರತಿಕೃತಿ ದಹಿಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಏಮ್ಸ್‌ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ ಜಿಲ್ಲೆಯ ಸಂಸದ, ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಡಾ| ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ಶಿಫಾರಸು ಮಾಡಲಾಗಿತ್ತು. ಆದರೆ, ಅಂದಿನ ಸಿಎಂ ಸಿದ್ದರಾಮಯ್ಯ ರಾಯಚೂರಿನ ಜತೆಗೆ ಧಾರವಾಡ, ಮೈಸೂರು ಹೆಸರು ಶಿಫಾರಸು ಮಾಡಿ ಜಿಲ್ಲೆಗೆ ದ್ರೋಹ ಬಗೆದರು.

ಕೇಂದ್ರ ಸರ್ಕಾರ ಈಚೆಗೆ ಕರ್ನಾಟಕಕ್ಕೆ ಏಮ್ಸ್‌ ಮಂಜೂರು ಮಾಡುವ ನಿರ್ಧಾರ ಪ್ರಕಟಿಸಿತ್ತು. ರಾಯಚೂರು ಏಮ್ಸ್‌ ಹೋರಾಟ ಸಮಿತಿ ನಿಯೋಗವು ಅಂದಿನ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಏಮ್ಸ್‌ ಸ್ಥಾಪಿಸುವಂತೆ ಒತ್ತಾಯಿಸಲಾಗಿತ್ತು. ಅದಕ್ಕೆ ಸ್ಪಂದಿಸಿದ ಬಿಎಸ್‌ವೈ ನಮ್ಮ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು ಎಂದು ವಿವರಿಸಿದರು.

ಈಗ ಧಾರವಾಡದಲ್ಲಿ ಸ್ಥಳ ಪರಿಶೀಲಿಸಿರುವುದಾಗಿ ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವರು ಹೇಳಿದ್ದಾರೆ. ನಮ್ಮ ನಿರಂತರ ಹೋರಾಟದ ಹೊರತಾಗಿಯೂ ರಾಜ್ಯ ಸರ್ಕಾರ ಧಾರವಾಡದ ಪರ ನಿಂತಿರುವುದು ಖಂಡನೀಯ. ಇದು ರಾಯಚೂರಿಗೆ ಮತ್ತೂಮ್ಮೆ ಮಾಡಿದ ಮಹಾದ್ರೋಹ ಎಂದು ದೂರಿದರು.

Advertisement

ಏಮ್ಸ್‌ ಸ್ಥಾಪಿಸಲು ರಾಯಚೂರು ಜಿಲ್ಲೆ ಸೂಕ್ತವಾಗಿದೆ. ಸಮೃದ್ಧ ನೀರು, ವಿಶಾಲ ಭೂ ಪ್ರದೇಶ, ವಿದ್ಯುತ್‌ ಸೌಲಭ್ಯ, ರಸ್ತೆ, ರೈಲು ಸೌಲಭ್ಯ, ಬೆಳವಣಿಗೆಗೆ ಪೂರಕವಾಗಿ ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಚಾಲನೆ ದೊರೆತಿದೆ. ಹೀಗಾಗಿ ಧಾರವಾಡದಲ್ಲಿ ಏಮ್ಸ್‌ ಸ್ಥಾಪಿಸುವ ಪ್ರಕ್ರಿಯೆ ಕೈ ಬಿಟ್ಟು ರಾಯಚೂರು ಹೆಸರನ್ನು ಶಿಫಾರಸು ಮಾಡಬೇಕು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಶೀಘ್ರ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದರು.

ಈ ವೇಳೆ ಜಿಲ್ಲಾ ಏಮ್ಸ್‌ ಸಮಿತಿ ಪ್ರಧಾನ ಸಂಚಾಲಕ ಡಾ| ಬಸವರಾಜ ಕಳಸ, ಅಂಬಣ್ಣ ಅರೋಲಿ, ಎಂ.ಆರ್‌. ಭೇರಿ, ರಾಮನಗೌಡ ಏಗನೂರು, ವೆಂಕಟ ರೆಡ್ಡಿ, ಶರಣಪ್ಪ ಅಸ್ಕಿಹಾಳ, ಮುನಿರೆಡ್ಡಿ, ಡಿ. ವೀರೇಶ, ಮಲ್ಲೇಶ ಗಧಾರ, ಖಾಜಾ ಅಸ್ಲಾಂ, ವಿನೋದ ರೆಡ್ಡಿ, ಮಿಮಿಕ್ರಿ ಬಸವರಾಜ, ಸಿರಾಜ್‌ ಜಾಫಿರಿ, ಪ್ರಸಾದ್‌, ಭರತ್‌ ಕುಮಾರ, ಹನುಮಂತು ಅತ್ರಿಕಿ, ಬಸವರಾಜ ತಳವಾರ, ಬಾಬುರಾವ್‌ ಶೇಗುಣಸಿ, ಎನ್‌. ಮಹಾವೀರ, ಮೈತ್ರಿಕರ, ರಾಜಶೇಖರ, ಪದ್ಮಾ, ವೀರೇಶ ಸೇರಿದಂತೆ ವಿವಿಧ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next