ಭಾಲ್ಕಿ: ತಾಂಡಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ವಿದ್ಯುತ್ ಕಂಬ, ಬೀದಿ ದೀಪ ಅಳವಡಿಕೆಗೆ 55 ಲಕ್ಷ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಮಂಜೂರಾದ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಈಶ್ವರ ಖಂಡ್ರೆ ಭರವಸೆ ನೀಡಿದರು.
ಪಟ್ಟಣದ ಹೊರವಲಯದ ಖಂಡ್ರೆ ತಾಂಡಾದಲ್ಲಿ ಸಂತ ಸೇವಾಲಾಲ್ ಮಂದಿರದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಂಡಾದಲ್ಲಿ ಅಗತ್ಯವಿರುವೆಡೆ ಈಗಾಗಲೇ ರಸ್ತೆ, ಚರಂಡಿ ವ್ಯವಸ್ಥೆ ಮಾಡಲಾಗಿದೆ. ಬರುವ ದಿನಗಳಲ್ಲಿ ಬಾಕಿ ಉಳಿದ ರಸ್ತೆ, ಚರಂಡಿ, ವಿದ್ಯುತ್ ದೀಪ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಉಳಿದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇಲ್ಲಿನ ತಾಂಡಾ ನಿವಾಸಿಗಳ ಬೇಡಿಕೆಗೆ ಸದಾ ಸ್ಪಂದಿಸುತ್ತ ಬಂದಿದ್ದೇನೆ. ವಸತಿ, ನೇರ ಸಾಲ, ಸರ್ಕಾರದ ವಿವಿಧ ಸೌಲಭ್ಯ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬರುವ ದಿನಗಳಲ್ಲಿ ಇಲ್ಲಿನ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು 24×7 ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಂತ ಸೇವಾಲಾಲ್ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಸದಸ್ಯೆ ಲಲಿತಾಬಾಯಿ ಬಾಬುರಾವ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ, ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಬಿರಾದಾರ, ಪ್ರಶಾಂತ ಕೊಟಗೀರಾ, ಜಾರ್ಜ್ ನೇಳಗೆ, ಮಹೇಶ ಚವ್ಹಾಣ, ಪುಟ್ಟರಾಜ ನೇಳಗೆ ಇತರರಿದ್ದರು. ಮಾರುತಿ ರಾಠೊಡ ನಿರೂಪಿಸಿದರು.