ಬೆಂಗಳೂರು: ಬ್ಯಾಂಕಿನಲ್ಲಿ 5 ಕೋಟಿ ರೂ. ಸಾಲ ಕೊಡಿಸಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 37.5 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಬಿ.ಹೂಗಾರ್ ವಂಚನೆಗೊಳಗಾದವರು. ಅವರು ನೀಡಿದ ದೂರಿನ ಮೇರೆಗೆ ಸುಕೀರ್ತಿ ಮತ್ತು ಹಿದಾಯತುಲ್ಲಾ ಖಾನ್ ಎಂಬುವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಆರೋಪ ದಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಏನಿದು ಪ್ರಕರಣ?: ಉದ್ಯಮಿ ಪ್ರವೀಣ್ ಕುಮಾರ್ ಶೇಷಾದ್ರಿಪುರದಲ್ಲಿ ಮಾಯಾಂಕ್ ಕನ್‌ಸ್ಟ್ರಕ್ಷನ್ ಆ್ಯಂಡ್ ಸಪ್ಲೈಯರ್ ಹೆಸರಿನ ಕಚೇರಿ ಹೊಂದಿದ್ದಾರೆ. ಇತ್ತೀಚೆಗೆ ನಾಗರಾಜ್ ಎಂಬ ಸ್ನೇಹಿತನ ಮೂಲಕ ಸುಕೀರ್ತಿ ಮತ್ತು ಹಿದಾಯ ತುಲ್ಲಾ ಖಾನ್ ಪರಿಚಯವಾಗಿದೆ. ಈ ಇಬ್ಬರು ವರ್ಲ್ಡ್ ಫೋಕಸ್ ಈವೆಂಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಎಂಬ ಕಂಪನಿ ನಡೆಸುತ್ತಿದ್ದಾರೆ. ಪ್ರವೀಣ್ ಕುಮಾರ್ ವ್ಯವಹಾರ ಸಂಬಂಧ ಸಾಲ ಮಾಡಿಕೊಂಡಿರುವ ವಿಚಾರ ತಿಳಿದ ಆರೋಪಿಗಳು, ತಾವು ಹೇಳಿದಂತೆ ಕೇಳಿದರೆ, ನಿಮ್ಮ ಸಾಲ ತೀರಿಸಬಹುದು. ಕೋಲ್ಕತಾ ಬ್ಯಾಂಕಿನಲ್ಲಿ ರಾಜು ಎಂಬುವರು ತಮಗೆ ಪರಿಚಯ ವಿದ್ದಾರೆ. ಅವರ ಮೂಲಕ ನಿಮಗೆ 5 ಕೋಟಿ ರೂ. ಸಾಲ ಕೊಡಿಸುವುದಾಗಿ ಹೇಳಿದ್ದಾರೆ. ಲೋನ್ ಕೊಡಿಸಲು 25 ಲಕ್ಷ ರೂ. ಖರ್ಚಾಗಲಿದೆ ಎಂದಿದ್ದಾರೆ. ಇವರ ಮಾತು ನಂಬಿದ ಪ್ರವೀಣ್ ಕುಮಾರ್, ಹಂತ ಹಂತವಾಗಿ ಆರೋಪಿಗಳ ಖಾತೆಗೆ 17.5 ಲಕ್ಷ ರೂ. ವರ್ಗಾಯಿಸಿದ್ದಾರೆ. ಬಳಿಕ ಬೇರೆ ಸಬೂಬು ಹೇಳಿ 20 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆದರೆ, ಸಾಲ ಕೊಡಿಸಿಲ್ಲ. ಅಲ್ಲದೆ ಕೊಟ್ಟಿರುವ ಹಣ ವಾಪಸ್ ಕೇಳಿದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.