ದೋಹಾ: ಕಳೆದೊಂದು ವಾರದಿಂದ ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ಫುಟ್ಬಾಲ್ ತಾರೆ ಕ್ರಿಶ್ಟಿಯಾನೊ ರೊನಾಲ್ಡೊ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿದ್ದು ದಾಖಲೆಯ ಗೋಲು ಬಾರಿಸಿ.
ಕತಾರ್ ದೇಶದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ರಲ್ಲಿ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ದೇಶ ತನ್ನ ಅಭಿಯಾನ ಆರಂಭಿಸಿದೆ. ಘಾನಾ ವಿರುದ್ಧ ಸ್ಟೇಡಿಯಂ 974ನಲ್ಲಿ ನಡೆದ ಪಂದ್ಯವನ್ನು ಪೋರ್ಚುಗಲ್ 3-2 ಅಂತರದಿಂದ ಗೆದ್ದುಕೊಂಡಿತು.
ಪಂದ್ಯದ 65ನೇ ನಿಮಿಷದಲ್ಲಿ ರೊನಾಲ್ಡೊ ಗೋಲು ಗಳಿಸಿ ಪೋರ್ಚುಗಲ್ ನ ಗೋಲಿನ ಖಾತೆ ತೆರೆದರು. ಈ ಗೋಲಿನ ಮೂಲಕ ರೊನಾಲ್ಡೊ ಐದು ವಿಭಿನ್ನ ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಇತಿಹಾಸದಲ್ಲಿ ಮೊದಲ ಪುರುಷ ಫುಟ್ಬಾಲ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ಈ ವೇಳೆ ರೊನಾಲ್ಡೊ ಅವರು ಪೀಲೆ, ಜರ್ಮನಿಯ ಉವೆ ಸೀಲರ್ ಮತ್ತು ಮಿರೊಸ್ಲಾವ್ ಕ್ಲೋಸ್ ಅವರನ್ನು ಹಿಂದಿಕ್ಕಿದರು. ಈ ಮೂವರು ದಿಗ್ಗಜರು ನಾಲ್ಕು ವಿಶ್ವಕಪ್ ಗಳಲ್ಲಿ ಗೋಲು ಬಾರಿಸಿದ ಸಾಧನೆ ಮಾಡಿದ್ದರು.
ಇದನ್ನೂ ಓದಿ:ಸ್ಟೈಲಿಶ್ ಹುಡುಗನ ಲವ್ ಸ್ಟೋರಿ ‘ರೇಮೋ’ ಇಂದು ತೆರೆಗೆ
ಇದೇ ವೇಳೆ ರೊನಾಲ್ಡೊ ಅಂತಾರಾಷ್ಟ್ರೀಯ ಗೋಲುಗಳ ತನ್ನದೇ ಆದ ವಿಶ್ವ ದಾಖಲೆಯ ಸಂಖ್ಯೆಯನ್ನು 118 ಕ್ಕೆ ವಿಸ್ತರಿಸಿದರು.
ಪೋರ್ಚುಗಲ್ ಪರ ಜೋವೊ ಫೆಲಿಕ್ಸ್ ಮತ್ತು ರಾಫೆಲ್ ಲಿಯೊ ಮತ್ತೆರಡು ಗೋಲು ಹೊಡೆದರು. ಘಾನಾ ಪರ ಆಂದ್ರೆ ಏವ್ ಮತ್ತು ಒಸ್ಮಾನ್ ಬುಕಾರಿ ತಲಾ ಒಂದು ಗೋಲು ಹೊಡೆದರು.