ಯಾದಗಿರಿ: ಪರಿಶಿಷ್ಟ ಪಂಗಡಕ್ಕೆ ಒಳಪಡದ ಜನಾಂಗದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಕರ್ಯ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಪೂಜ್ಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆ ವಿರೋಧಿಸಿ, ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಜಾರಿಗೆ ತರುವುದು, ಪರಿಶಿಷ್ಟ ಪಂಗಡದ ಜನಾಂಗಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗಾಗಿ ಹೋರಾಟದ ರೂಪುರೇಷೆ ತಯಾರಿಸಲು ನಗರದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ವಾಲ್ಮೀಕಿ ಜನಾಂಗದವರು ಶಿಕ್ಷಣದಿಂದ ತೀರಾ ಹಿಂದುಳಿದಿದವರಾಗಿದ್ದಾರೆ. ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುವ ಮೂಲಕ ವಿದ್ಯಾವಂತರನ್ನಾಗಿಸಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ ಮಾತನಾಡಿ, ರಾಜ್ಯದಲ್ಲಿ 45ರಿಂದ 50 ಲಕ್ಷ ವಾಲ್ಮೀಕಿ ಸಮಾಜದ ಜನಸಂಖ್ಯೆ ಇದೆ. ಸಂವಿಧಾನ ಬದ್ಧವಾಗಿ ಸಿಗಬೇಕಾಗ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿದರೂ ಕೇವಲ ಭರವಸೆ ನೀಡುವುದೇ ಆಗಿದೆ ಹೊರತು ನಕಲಿ ಜಾತಿ ಪ್ರಮಾಣ ಪತ್ರ ವಿತರಣೆಗೆ ತಡೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಸಡಿಲು ನೀತಿ ವಿರೋಧಿಸಿ ಹೈದ್ರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಅ.15ರಂದು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ರಮೇಶ ದೊರೆ, ಗೌಡಪ್ಪಗೌಡ, ಬಸವರಾಜ ಕವಾಲ್ದಾರ, ಸುದರ್ಶನ ನಾಯಕ, ಗುರು ಹುಲಕಲ್, ಸಿದ್ದಲಿಂಗಪ್ಪ, ಮಹಾದೇವಪ್ಪ, ಚಂದ್ರಕಾಂತ ಕವಾಲ್ದಾರ, ಶರಣಪ್ಪ ಜಾಕನಳ್ಳಿ, ಅಂಬುರಾಜ ನಾಯಕ, ಹಣಮಂತ ನಾಯಕ,
ಮಾಶೆಪ್ಪ, ಸಾಯಬಗೌಡ, ಗಂಗಾಧರ ನಾಯಕ, ಎಸ್.ಎಸ್. ನಾಯಕ, ಯಮನಪ್ಪ ತನಕೆದಾರ, ರವಿ ಕೊಡ್ಮೋರ, ದೇವರಾಜ ನಾಯಕ್ ವರ್ಕನಳ್ಳಿ ಸೇರಿದಂತೆ ಸುರುಪುರ, ಶಹಾಪುರ, ಗುರುಮಠಕಲ್ ತಾಲೂಕಿನ ಸಮಾಜದ
ಮುಖಂಡರು ಭಾಗವಹಿಸಿದ್ದರು.