ಪೊಳಲಿಯ ಗೋಪಾಲ ದೇವಾಡಿಗ ಅವರ ಪುತ್ರ ತನ್ವಿತ್ ಅವರು ಗರುಡ ಫ್ರೆಂಡ್ಸ್ ಪೊಳಲಿ ಎಂಬ ಹೆಸರಿನಲ್ಲಿ ಹುಲಿ ತಂಡವನ್ನು ಮುನ್ನಡೆಸುತ್ತಿದ್ದಾನೆ. ಕಳೆದ ವರ್ಷ 2 ದಿನಗಳ ಯಶಸ್ವಿ ಹುಲಿ ಕುಣಿತ ನಡೆದಿದ್ದು, ಈ ಬಾರಿಯೂ ಅ. 10 ಹಾಗೂ 11ರಂದು ತಮ್ಮ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಪೊಳಲಿ ದೇವಾಲಯದಲ್ಲಿ ಪ್ರಾರ್ಥಿಸಿ ಅ. 9ರಂದು ರಾತ್ರಿ ಊದು ಪೂಜೆ ನಡೆದು 11ರ ರಾತ್ರಿ ಪೊಳಲಿಯಲ್ಲಿ ಸ್ಟೇಜ್ ಪ್ರದರ್ಶನ ನೀಡಲಿದ್ದಾರೆ.
Advertisement
ಈ ಬಾರಿ ಡಬಲ್ ಹುಲಿಗಳು.!ಕಳೆದ ವರ್ಷ ಸುಮಾರು 15 ಮಂದಿ ಹುಲಿ ವೇಷ ಹಾಕಿದ್ದು, ತನ್ವಿತ್‌ನ ತಮ್ಮ ಮನ್ವಿತ್ ಸೇರಿ ಇಬ್ಬರು ಪಲ್ಟಿ ಹೊಡೆಯುವ ಸಾಹಸಿಗಳಿದ್ದರು. ಆದರೆ ಈ ಬಾರಿ 30 ಮಂದಿ ಹುಲಿ ವೇಷಧಾರಿಗಳಿದ್ದು, 10 ಮಂದಿ ಪಲ್ಟಿ ಹೊಡೆಯುವವರಿದ್ದಾರೆ! ಈಗಾಗಲೇ ಮೂರು ರವಿವಾರಗಳಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿ ಮುಂದೆ ನವರಾತ್ರಿ ಎರಡು ದಿನಗಳಲ್ಲಿ ಸುಮಾರು 100 ಮನೆಗಳನ್ನು ಸಂಪರ್ಕಿಸುವ ಟಾರ್ಗೆಟ್ ಹೊಂದಿದ್ದಾರೆ.
ಸಾಮಾನ್ಯವಾಗಿ ಹುಲಿ ತಂಡದವರು ಹುಲಿಯ ತಲೆಯನ್ನು ಬಾಡಿಗೆಗೆ ಪಡೆದು ಪ್ರದರ್ಶನ ನೀಡುತ್ತಾರೆ. ಇದಕ್ಕೆ 15 ಸಾವಿರದಷ್ಟು ಬಾಡಿಗೆ ಇರುತ್ತದೆ. ಈ ಮಕ್ಕಳ ಟೀಮ್‌ನಲ್ಲಿ ಅಷ್ಟು ಹಣವಿಲ್ಲದೆ ಇರುವುದರಿಂದ ತನ್ವಿತ್ ತಾನೇ ತಲೆಗಳನ್ನು ತಯಾರಿಸಿದ್ದಾನೆ. ಒಂದು ತಲೆ ಸಿದ್ಧಗೊಳ್ಳಬೇಕಾದರೆ ಮೂರ್ನಾಲ್ಕು ದಿನಗಳ ಕೆಲಸವಿದೆ. ಈಗಾಗಲೇ ಬೇಕಾದಷ್ಟು ಹುಲಿಗಳ ತಲೆಗಳು ಸಿದ್ಧಗೊಂಡಿವೆ!
Related Articles
ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ತನ್ವಿತ್‌ಗೆ ಬಾಲ್ಯದಿಂದಲೂ ಏನಾದರೂ ಸಾಧಿಸಬೇಕೆಂಬ ಛಲ. ಹಲವು ವರ್ಷಗಳಿಂದ ಪೊಳಲಿ ಜಾತ್ರೆಯ ಸಂದರ್ಭ ಅಂಗಡಿ ಹಾಕಿ ಒಂದಷ್ಟು ಹಣ ಸಂಪಾದಿಸುತ್ತಿದ್ದ. ಜತೆಗೆ ಕೃಷಿಕರಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಈ ಸಂಪಾದನೆಯ ಹಣವನ್ನು ಹುಲಿ ಕುಣಿತಕ್ಕೆ ಬಳಸಿದ್ದಾನೆ.
Advertisement
2022ರಲ್ಲಿ ಕರಡಿ ತಂಡ ಕಟ್ಟಿದ್ದ ತನ್ವಿತ್.ಕಳೆದ ಪೊಳಲಿ ಜಾತ್ರೆಯಲ್ಲಿ ಅಂಗಡಿ ಹಾಕಿ ಅದರಲ್ಲಿ ಬಂದ ಸುಮಾರು 20 ಸಾವಿರ ರೂ. ಆದಾಯವನ್ನು ಬಳಸಿಕೊಂಡು ಮೊದಲ ವರ್ಷ ಹುಲಿ ತಂಡದ ಪ್ರದರ್ಶನ ನೀಡಿದ್ದ. ಕಳೆದ ವರ್ಷ ಒಟ್ಟು 1.50 ಲಕ್ಷ ರೂ. ನಷ್ಟು ಖರ್ಚಾಗಿದ್ದು, ಸಂಪಾದನೆ ಬರೀ 1.40 ಲಕ್ಷ ರೂ. ಅಂದರೆ ಸುಮಾರು 10 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿತ್ತು. ಆದರೂ ಈ ಬಾರಿ ಮತ್ತೆ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಸುಮಾರು 100 ಮನೆಗೆ ಹೋಗುತ್ತೇವೆ
ಸುಮಾರು 30 ಮಂದಿ ಹುಲಿ ವೇಷಧಾರಿಗಳ ತಂಡ ಈ ಬಾರಿ 2 ದಿನಗಳ ಹುಲಿ ಕುಣಿತ ಪ್ರದರ್ಶನ ನೀಡಲಿದ್ದು, ಈಗಾಗಲೇ ಪ್ರಾಕ್ಟಿಸ್ ಪೂರ್ತಿಗೊಳಿಸಿದ್ದೇವೆ. ಪೊಳಲಿ ಸುತ್ತಮುತ್ತಲ ಸುಮಾರು 100 ಮನೆಗಳಿಗೆ ಭೇಟಿ ನೀಡಿ ಅ. 11ರಂದು ರಾತ್ರಿ ಪೊಳಲಿಯಲ್ಲಿ ಸ್ಟೇಜ್ ಪ್ರದರ್ಶನ ನೀಡಲಿದ್ದೇವೆ. ಇದು 2ನೇ ವರ್ಷದ ಹುಲಿ ಹುಣಿತವಾಗಿದ್ದು, 2022ರಲ್ಲಿ ಕರಡಿ ವೇಷದ ತಂಡವನ್ನು ಇಳಿಸಿದ್ದೆ.
– ತನ್ವಿತ್, ಗರುಡ ಫ್ರೆಂಡ್ಸ್ ಹುಲಿ ತಂಡದ ಮುಖ್ಯಸ್ಥ -ಕಿರಣ್ ಸರಪಾಡಿ