•ಎಚ್.ಕೆ. ನಟರಾಜ
ಹಾವೇರಿ: ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.
ಜನವರಿ ತಿಂಗಳಿಂದಲೇ ಜಿಲ್ಲೆಯಲ್ಲಿ ಹರಿದಿರುವ ತುಂಗಾ, ವರದಾ, ಕುಮದ್ವತಿ ಹಾಗೂ ಧರ್ಮಾ ನದಿಗಳ ಹರಿವು ನಿಂತಿದೆ. ತುಂಗಭದ್ರಾದಲ್ಲಿ ನೀರಿಲ್ಲದೇ ಹಾವೇರಿ ಹಾಗೂ ರಾಣಿಬೆನ್ನೂರು ನಗರಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿತ್ತು. ಈಗ ಭದ್ರಾ ಜಲಾಶಯದಿಂದ ಒಂದಿಷ್ಟು ನೀರು ಬಿಡಲಾಗಿದ್ದರೂ ಪಟ್ಟಣದ ಜನರ ಅಗತ್ಯತೆಗೆ ತಕ್ಕಷ್ಟು ನೀರು ಸಿಗುತ್ತಿಲ್ಲ. ಇನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೀರಿಲ್ಲದೇ ತನ್ನ ಕಾರ್ಯ ಸ್ಥಗಿತಗೊಳಿಸಿವೆ.
ಅಂತರ್ಜಲ ಕುಸಿತ: ಬೇಸಿಗೆ ಆರಂಭದಿಂದ ಅಧಿಕಾರಿಗಳು ಕೊಳವೆಬಾವಿ ಕೊರೆಸಲು ಆರಂಭಿಸಿದ್ದಾರೆ. ಆದರೆ, ಈಗ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಂದು ಗ್ರಾಮಗಳಲ್ಲಿ ಹತ್ತಾರು ಕಡೆ ಕೊಳವೆಬಾವಿ ಕೊರೆದರೂ ನೀರು ಬಾರದೇ ವಿಫಲಗೊಳ್ಳುತ್ತಿವೆ. ಆದ್ದರಿಂದ ಕೃಷಿಗಾಗಿ ರೈತರು ಕೊರೆಸಿಕೊಂಡಿರುವ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಕೆರೆಕಟ್ಟೆಗಳು, ನದಿಗಳು ಈಗಾಗಲೇ ಬರಿದಾಗಿವೆ. ಟ್ಯಾಂಕರ್ ಮೂಲಕ ನೀರು ಪೂರೈಸುವುದು ಕೊನೆಯ ಆಯ್ಕೆಯಾಗಿದೆ.
ಶುದ್ಧನೀರಿನ ಘಟಕಗಳೂ ಬಂದ್: ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ 85, ಹಾನಗಲ್ಲ-126, ಹಾವೇರಿ-108, ಹಿರೇಕೆರೂರು-125, ರಾಣಿಬೆನ್ನೂರು-143, ಸವಣೂರು-63 ಹಾಗೂ ಶಿಗ್ಗಾವಿ ತಾಲೂಕಿನಲ್ಲಿ 82 ಗ್ರಾಮಗಳು ಸೇರಿ 732 ಶುದ್ಧ ನೀರಿನ ಘಟಕಗಳಿದ್ದು ಇದರಲ್ಲಿ ಹಾನಗಲ್ಲ ತಾಲೂಕಿನ ಎರಡು, ಹಾವೇರಿ, ರಾಣಿಬೆನ್ನೂರು ಹಾಗೂ ಸವಣೂರ ತಾಲೂಕಿನ ತಲಾ ಒಂದೊಂದು ಶುದ್ಧ ನೀರಿನ ಘಟಕ ಸೇರಿ ಐದು ಘಟಕಗಳು ದುರಸ್ತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಅಂತರ್ಜಲ ಕುಸಿದು ನೂರಾರು ಶುದ್ಧ ನೀರಿನ ಘಟಕಗಳು ಬಾಗಿಲು ಹಾಕುತ್ತಿದ್ದು, ಬಾಗಿಲು ಹಾಕುವ ಘಟಕಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಇದರ ನಿಖರ ಲೆಕ್ಕ ಇಲಾಖೆಯಲ್ಲಿ ಇಲ್ಲ.
Advertisement
ಜಿಲ್ಲೆಯಲ್ಲಿ ಈ ವರೆಗೆ 205 ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಬ್ಯಾಡಗಿ ತಾಲೂಕಿನ 34, ಹಾನಗಲ್ಲ 21, ಹಾವೇರಿ 21, ಹಿರೇಕೆರೂರ 72, ರಾಣಿಬೆನ್ನೂರ 18, ಸವಣೂರ 21, ಶಿಗ್ಗಾವಿ ತಾಲೂಕಿನ 18 ಗ್ರಾಮಗಳು ಸೇರಿ ಒಟ್ಟು 205 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಹಲವೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ.
Related Articles
Advertisement
ಬಾಡಿಗೆ ನೀರು: 57 ಗ್ರಾಮಗಳಲ್ಲಿ 116 ಖಾಸಗಿ ಕೊಳವೆಬಾವಿಗಳನ್ನು ಒಪ್ಪಂದದ ಆಧಾರದ ಮೇಲೆ ಪಡೆಯಲಾಗಿದೆ.
ಹಿರೇಕೆರೂರು ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಅತಿಹೆಚ್ಚು ಸಂಖ್ಯೆಯ ಖಾಸಗಿ ಕೊಳವೆಬಾವಿಗಳ ಮೊರೆ ಹೋಗಲಾಗಿದೆ. ಹಿರೇಕೆರೂರ ತಾಲೂಕಿನ 21 ಗ್ರಾಮಗಳಿಗೆ 45 ಖಾಸಗಿ ಕೊಳವೆಬಾವಿ ಬಳಕೆ ಮಾಡಲಾಗುತ್ತಿದೆ. ಬ್ಯಾಡಗಿ ತಾಲೂಕಿನ 23ಗ್ರಾಮಗಳಿಗೆ 44 ಖಾಸಗಿ ಕೊಳವೆಬಾವಿ, ಹಾವೇರಿ ತಾಲೂಕಿನ 10ಗ್ರಾಮಗಳಿಗೆ 12, ರಾಣಿಬೆನ್ನೂರ ತಾಲೂಕಿನ ಮೂರು ಗ್ರಾಮಗಳಿಗೆ 11, ಶಿಗ್ಗಾವಿ ತಾಲೂಕಿನ 4 ಗ್ರಾಮಗಳಿಗೆ 6, ಹಾನಗಲ್ಲ ತಾಲೂಕಿನ ಡಮ್ಮನಾಳ ಗ್ರಾಮಕ್ಕೆ 3 ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಸವಣೂರ ತಾಲೂಕಿನ ಯಾವುದೇ ಗ್ರಾಮಕ್ಕೆ ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸುತ್ತಿಲ್ಲ. ನೀರಿನ ಇಳುವರಿ ಆಧಾರದಲ್ಲಿ ಮಾಸಿಕ 10ಸಾವಿರ ರೂ.ಗಳವರೆಗೆ ಬಾಡಿಗೆ ನೀಡಲಾಗುತ್ತಿದೆ.
ನಗರ, ಪಟ್ಟಣ ಪ್ರದೇಶಗಳಲ್ಲಿ 2018-19ನೇ ಸಾಲಿನಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ 180 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 54 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಒಟ್ಟಾರೆ ಕುಡಿಯುವ ನೀರಿನ ತುಟಾಗ್ರತೆ ಜಿಲ್ಲೆಯಲ್ಲಿ ತೀವ್ರವಾಗಿದ್ದು ಜನರು ಕುಡಿಯುವ ನೀರಿಗಾಗಿ ಹತ್ತಾರು ಕಿಮೀ ನಡೆಯುವುದು, ನೀರಿಗಾಗಿ ನಲ್ಲಿ ಮುಂದೆ ತಾಸುಗಟ್ಟಲೆ ಸರದಿಯಲ್ಲಿ ನಿಲ್ಲುವುದು. ಬೈಕ್, ಎತ್ತಿನಗಾಡಿಯಲ್ಲಿ ನೀರು ತುಂಬಿಕೊಂಡು ಬರುವುದು ಮಾಮೂಲು ಆಗಿದೆ.