Advertisement

Kinnigoli: ತುಂಬಿ ತುಳುಕಿದ ಪಂಜ ಅಣೆಕಟ್ಟು

01:26 PM Jan 14, 2025 | Team Udayavani |

ಕಿನ್ನಿಗೋಳಿ: ಕೆಮ್ರಾಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಂಜದಲ್ಲಿ ನಂದಿನಿ ನದಿಗೆ ಕಟ್ಟಿದ ಅಣೆಕಟ್ಟಿಗೆ ಹಲಗೆ ಹಾಕಿದ್ದರಿಂದ ಈ ಭಾಗದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಣೆಯಾಗಿದೆ.

Advertisement

ಪಂಜ ಅಣೆಕಟ್ಟಿನಲ್ಲಿ ನೀರು ಶೇಖರಣೆಗೊಂಡಿದ್ದರಿಂದ ಒಂದು ಭಾಗದಲ್ಲಿ ಕೆಮ್ರಾಲ್‌ ಪಂಚಾಯತ್‌, ಇನ್ನೊಂದು ಭಾಗದಲ್ಲಿ ಚೇಳಾçರು ಗ್ರಾಮ ಪಂಚಾಯತ್‌ನ ನಾಗರಿಕರಿಗೆ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಈ ಅಣೆಕಟ್ಟಿನ ನಿರ್ವಹಣೆ ಉತ್ತಮವಾಗಿರುವುದರಿಂದ ಬಹು ಕಾಲ ನೀರು ಉಳಿಯಲಿದೆ. ಕಳೆದ ವರ್ಷ ಮೇ ತಿಂಗಳ ಕೊನೆಯ ತನಕವೂ ಇಲ್ಲಿ ನೀರು ಇತ್ತು.

ಕೃಷಿ ಚಟುವಟಿಕೆಗೆ ಅನುಕೂಲ
ಅಣೆಕಟ್ಟಿನಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಚೇಳಾçರು, ಮಧ್ಯ, ಪಕ್ಷಿಕೆರೆ, ಪಂಜ ಮತ್ತಿತರ ಹಲವು ಪ್ರದೇಶ ಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಇಲ್ಲಿನ ಕೃಷಿಕರು ಭತ್ತದ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ, ಕೆಲವರಿಗೆ ಅಡಿಕೆ ತೋಟಗಳಿವೆ. ಅಣೆಕಟ್ಟಿನ ಪಾರ್ಶ್ವದಿಂದ ತೋಡಿನ ಮೂಲಕ ನೀರು ಹರಿಯುತ್ತಿದ್ದು, ಇದನ್ನು ನೇರವಾಗಿ ಕೃಷಿಗೆ ಬಳಸಲಾ ಗುತ್ತಿದೆ. ಈ ಭಾಗದ ಕೃಷಿಕರು ತರಕಾರಿ ಗಳನ್ನು ಕೂಡ ಬೆಳೆಯುತ್ತಿದ್ದು, ಕೆಲವು ಕಡೆ ಫೆಬ್ರವರಿಯಲ್ಲಿ ಎಳ್ಳು ಬಿತ್ತನೆ ಮಾಡುತ್ತಾರೆ. ಇದಕ್ಕೆ ಅಣೆಕಟ್ಟಿನ ನೀರೇ ಆಸರೆಯಾಗಿದೆ.

ಕುಡಿಯುವ ನೀರಿನ ಸೆಲೆ
ಈ ಅಣೆಕಟ್ಟು ಈ ಭಾಗದಲ್ಲಿ ಕುಡಿಯುವ ನೀರಿನ ಮೂಲ ಆಸರೆಯಾಗಿದೆ. ಇದು ಹಲವು ಬಾವಿಗಳ ಒರತೆಯನ್ನು ಹೆಚ್ಚಿಸುವುದು ಒಂದು ಕಡೆಯಾದರೆ ಇದರ ನೀರನ್ನೇ ನೇರವಾಗಿ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಪಂಪ್‌ ಮಾಡಿ ಮನೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತದೆ. ನೀರು ತುಂಬಿದ ನದಿ ಭಾಗದ ಪಕ್ಕದಲ್ಲೇ ಒಂದು ಬಾವಿಯನ್ನು ತೋಡಲಾಗಿದ್ದು, ಅದರಿಂದ ಪ್ರಮುಖವಾಗಿ ನೀರನ್ನು ಪಂಪ್‌ ಮಾಡಲಾಗುತ್ತದೆ. ಹೀಗಾಗಿ ಎರಡು ಮೂಲಗಳಿಂದ ನೀರು ದೊರೆಯಲಿದೆ.

ಪಂಜ ಅಣೆಕಟ್ಟಿನ ಬಳಿಕ ಚೇಳ್ಯಾರಿನಲ್ಲಿ ಒಂದು ಕಿಂಡಿ ಅಣೆಕಟ್ಟು ಇದೆ. ಅಲ್ಲಿಯೂ ಹಲಗೆ ಹಾಕಿರುವುದರಿಂದ ಎರಡು ಅಣೆಕಟ್ಟುಗಳ ನಡುವೆಯೂ ನೀರು ತುಂಬಿದೆ. ಇದು ಕೂಡ ಜನರಿಗೆ ಅನುಕೂಲವಾಗಿದೆ. ಚೇಳ್ಯಾರು ಅಣೆಕಟ್ಟು ಉಪ್ಪು ನೀರಿನ ತಡೆಗೋಡೆಯಾಗಿದೆ. ನಂದಿನಿ ನದಿಯ ಮೂಲಕ ಸಮುದ್ರದ ನೀರು ಮೇಲೆ ಬಂದಾಗ ಶುದ್ಧ ನೀರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಚೇಳ್ಯಾರು ಅಣೆಕಟ್ಟೆ ಕಟ್ಟಲಾಗಿದೆ.

Advertisement

ಸವಾಲುಗಳೇನು?
-ನಂದಿನಿ ನದಿಗೆ ಮೇ ತಿಂಗಳ ವೇಳೆ ಕೆಲವೊಂದು ಕೈಗಾರಿಕೆಗಳು ಮಲಿನಗೊಂಡ ನೀರನ್ನು ಬಿಡುತ್ತವೆ. ಇದರಿಂದ ಗದ್ದೆಗೆ ಹರಿಯುವ ನೀರು ಮಲಿನವಾಗುತ್ತದೆ, ಕುಡಿಯುವ ನೀರೂ ಕಲುಷಿತವಾಗುತ್ತದೆ ಎಂಬ ಆಪಾದನೆ ಇದೆ. ಇದರ ಬಗ್ಗೆ ಜಾಗೃತೆ ವಹಿಸಬೇಕಾಗಿದೆ.
-ಈ ಭಾಗದಲ್ಲಿ ಇನ್ನೂ ಹಲವು ಭಾಗದಲ್ಲಿ ಕಟ್ಟ ಹಾಕಲು ಬಾಕಿ ಇದ್ದು, ಅವುಗಳ ಕೆಲಸಗಳನ್ನು ಮಾಡಬೇಕಾಗಿದೆ.

ಸ್ಥಳೀಯ ಸಮಿತಿಯಿಂದ ಉಸ್ತುವಾರಿ: ಅನುಕೂಲ
ಅಣೆಕಟ್ಟು ನಿರ್ವಹಣೆ ಹಲಗೆ ಹಾಕು ವುದು ಹಾಗೂ ಹಲಗೆ ತೆಗೆಯುವುದು ಮೊದಲಾದ ಚಟುವಟಿಕೆಗಳ ಉಸ್ತುವಾರಿ ಯನ್ನು ಸ್ಥಳೀಯ ರೈತರ ಸಮಿತಿ ನೋಡಿ ಕೊಳ್ಳುತ್ತಿದೆ. ಹೀಗಾಗಿ ಕಾಲಕಾಲಕ್ಕೆ ನಿರ್ವ ಹಣೆ ನಡೆದು ಅಣೆಕಟ್ಟು ಉತ್ತಮ ಸ್ಥಿತಿ ಯಲ್ಲಿದೆ. ತಂಡವು ಹಲವು ವರ್ಷಗಳಿಂದ ಮೇಲ್ವಿಚಾರಣೆ ಮಾಡುತ್ತಿದ್ದು ಅವರ ಕಾಳಜಿಯಿಂದ ನೀರಿನ ಸಂಗ್ರಹ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಕೃಷಿಕರಿಗೆ ಸಹಕಾರಿಯಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯತ್‌ ಸದಸ್ಯರಾದ ಸುರೇಶ್‌ ದೇವಾಡಿಗ ಪಂಜ.

ಈ ಅಣೆಕಟ್ಟಿನಿಂದ ಕೃಷಿ ಕಾರ್ಯಕ್ಕೆ ನೆರವಾಗುವದರ ಜತೆಗೆ ಪರಿಸರದ ಹಲವಾರು ಬಾವಿಗಳಲ್ಲಿ ನೀರಿನ ಒರೆತ ಹೆಚ್ಚಾಗಲಿದೆ. ಹಾಗೂ ಕೃಷಿ ಕಾರ್ಯಕ್ಕೂ ಅನುಕೂಲವಾಗಲಿದೆ ಎಂದು ಕೃಷಿಕ ಬೈಲ ಗುತ್ತು ಸತೀಶ್‌ ಶೆಟ್ಟಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.