Advertisement
ಯಾವುದೇ ಒಂದು ದೇಶದ ಸುಸ್ಥಿರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅಲ್ಲಿನ ಜನತೆಯ ರಾಜಕೀಯ ಪಾಲುಗೊಳ್ಳುವಿಕೆ ಅತಿ ಮುಖ್ಯ ಎಂಬುದು ತಿಳಿದ ವಿಷಯ. ರಾಜಕೀಯ ಪಾಲುಗೊಳ್ಳುವಿಕೆ ಒಂದು ಸಂಕೀರ್ಣ ಪ್ರಕ್ರಿಯೆ. ಸಮಾಜದ ಎಲ್ಲ ವರ್ಗದ ಜನ ಈ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುತ್ತಾರೆಂಬುದು ಅನುಮಾನಾಸ್ಪದ. ಇವರು ರಾಜಕೀಯದಲ್ಲಿ ಪಾಲ್ಗೊಳ್ಳದಿರಲು ಹಲವಾರು ಕಾರಣಗಳಿವೆ. ಈ ಕಾರಣಗಳು ಅನಾಸಕ್ತಿಯಿಂದ ಆರಂಭಗೊಂಡು ಅಸಹಾಯಕತೆಯವರೆಗೆ ಹರಡಿಕೊಂಡಿರಲು ಸಾಧ್ಯ.
ಈ ಸಮಸ್ಯೆ ಬಹುಮಟ್ಟಿಗೆ ಲಿಂಗಾಧಾರಿತವಾಗಿದ್ದು, ಮಹಿಳೆ ಯರು ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಹಲವಾರು ಚಾರಿತ್ರಿಕ, ಸಾಮಾಜಿಕ ಕಾರಣಗಳಿಂದಾಗಿ ಮಹಿಳೆಯ ರಾಜಕೀಯ ಪಾಲ್ಗೊಳ್ಳುವಿಕೆ ಸಮಸ್ಯಾತ್ಮಕವಾಗಿದೆ. ಮಹಿಳೆಯ ಕೌಟುಂಬಿಕ ಜವಾಬ್ದಾರಿ ಹಾಗೂ ಕಡಿಮೆ ಓಡಾಟ ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿದೆ. ಹೀಗಿದ್ದಾಗ್ಯೂ, ಮಹಿಳೆಯರ ರಾಜಕೀಯ ಪ್ರವೇಶ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಗಮನದಲ್ಲಿರಿಸಿಕೊಂಡು ಪ್ರಪಂಚದಾದ್ಯಂತ ವಿವಿಧ ಕಾಲಘಟ್ಟಗಳಲ್ಲಿ ಈ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಗಳು ನಡೆಯುತ್ತಿವೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಮೂರು ದಶಮಾನದ ಮಹಿಳಾ ಸಮಾವೇಶಗಳು ಮೆಕ್ಸಿಕೋ (1975), ನೈರೋಬಿ (1985), ಬೀಜಿಂಗ್ (1995)ನಲ್ಲಿ ನಡೆದಿದ್ದು, ಇವು ಭಾರತವನ್ನು ಒಳಗೊಂಡು ವಿವಿಧ ರಾಷ್ಟ್ರಗಳ ಮಹಿಳಾ ಸಬಲೀಕರಣದ ಮೇಲೆ ಪರಿಣಾಮ ಬೀರಿವೆ. ಮಹಿಳಾಪರ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ “ಸೀಡಾ’ ಪ್ರಮುಖವಾದುದು. ಭಾರತೀಯ ಸಂವಿಧಾನ ಸಮಾನತೆಯ ತಳಹದಿಯ ಮೇಲೆ ರೂಪುಗೊಂಡಿದ್ದು, ಕಾನೂನು ರೀತ್ಯಾ ಸಮಾನತೆಯನ್ನು ದೃಢೀಕರಿಸುವ ಜತೆಗೆ ಎಲ್ಲ ಪ್ರಜೆಗಳಿಗೆ ರಕ್ಷಣೆ ಒದಗಿಸುತ್ತದೆ. ಸಂವಿಧಾನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ಜತೆಗೆ ಧರ್ಮ, ಜಾತಿ, ಲಿಂಗ, ಜನ್ಮಸ್ಥಳ ಆಧಾರಿತ ನಿಷೇಧವನ್ನು ವಿರೋಧಿಸುತ್ತದೆ. ದುರಾದೃಷ್ಟವಶಾತ್, ಭಾರತದಲ್ಲಿ ಈ ಹಕ್ಕುಗಳ ಚಲಾವಣೆ ಸರಿಯಾಗಿ ನಡೆಯುತ್ತಿಲ್ಲ. ಮಹಿಳೆಗೆ ದೊರಕಬೇಕಾದ ಹಕ್ಕುಗಳು ದೊರಕುತ್ತಿಲ್ಲ.
Related Articles
ಭಾರತದಲ್ಲಿ ಮಹಿಳೆಯರ ರಾಜಕೀಯ ಪ್ರವೇಶದ ಬೇರು ಗಳನ್ನು 19ನೆಯ ಶತಮಾನದ ಸುಧಾರಣಾ ಚಳುವಳಿಯಲ್ಲಿ ಗುರುತಿಸಬಹುದು. ಜಾತಿ ಪದ್ಧತಿ, ಮೂರ್ತಿಪೂಜೆ, ಸತಿಸಹಗಮನ, ಬಾಲ್ಯವಿವಾಹ, ಪರದಾ ಇನ್ನಿತರ ಅನಿಷ್ಟ ಪದ್ಧತಿಗಳ ವಿರುದ್ಧ ಈ ಚಳುವಳಿ ತಲೆ ಎತ್ತಿತ್ತು. ಈ ಚಳುವಳಿಯ ಮುಖ್ಯಸ್ಥ ರಾಜಾರಾಮ ಮೋಹನರಾಯ್ ಎರಡು ಪ್ರಮುಖ ವಿಚಾರಗಳನ್ನು ಕೈಗೆತ್ತಿಕೊಂಡರು. ಅವು-ಮಹಿಳೆಯರಿಗೆ ಶಿಕ್ಷಣ ಹಾಗೂ ಸತಿ ಪದ್ಧತಿಯ ನಿರ್ಮೂಲನ. 1850ನೇ ದಶಕದ ಆರಂಭದಲ್ಲಿ ರೂಪುಗೊಂಡ ಈ ಚಳುವಳಿಯ ಫಲವಾಗಿ 1856ರಲ್ಲಿ ವಿಧವಾ ವಿವಾಹ ನ್ಯಾಯಸಮ್ಮತವೆಂಬ ಮಸೂದೆ ಅಸ್ತಿತ್ವಕ್ಕೆ ಬಂತು. ಈ ಮಸೂದೆ ವಿಧವೆಯರ ರಕ್ಷಣೆಗೆ ಮುಂದಾದರೂ, ಅವರ ಆಸ್ತಿ ಹಕ್ಕಿನ ವಿರುದ್ಧ ತೀರ್ಪು ನೀಡಿತು.
Advertisement
ಪ್ರಖ್ಯಾತ ಮಹಿಳೆಯರು ಈ ಚಳುವಳಿ ಹಾಗೂ ಧಾರ್ಮಿಕ ಸುಧಾರಣಾ ಚಳುವಳಿಗಳಲ್ಲಿ ಪಾಲ್ಗೊಂಡರು. ಈ ಚಳುವಳಿಗಳು ಮಹಿಳೆಯರಿಗೆ ಪೌರಸ್ತರಗಳಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟುದಲ್ಲದೇ ಮುಂದೆ ಮಹಿಳೆಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾದುವು.
ಸ್ವಾತಂತ್ರ್ಯ ಚಳುವಳಿಬಂಗಾಳದ ಸ್ವದೇಶೀ ಚಳುವಳಿ (1905-08)ಯ ಮುಖೇನ, ರಾಷ್ಟ್ರೀಯ ಚಳುವಳಿಗಳಲ್ಲಿ ಭಾರತೀಯ ಮಹಿಳೆಯರ ಪಾತ್ರ ಆರಂಭವಾಯ್ತು. ಆಗಲೇ ರಾಷ್ಟ್ರೀಯ ರಾಜಕಾರಣದಲ್ಲಿದ್ದ ಬಹ್ವಂಶ ಕುಟುಂಬಗಳ ಮಹಿಳೆಯರು ಈ ಚಳುವಳಿಗಳಲ್ಲಿ ಸಕ್ರಿಯವಾಗಿದ್ದರು. ಸೋದರಿ ನಿವೇದಿತಾ ಮಹಿಳೆಯರನ್ನು ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ
ದರು. ಆಗ್ಯಾವತಿ ಹಾಗೂ ಮೇಡಂ ಕಾಮಾ ಅವರನ್ನು ಬ್ರಿಟಿಷ್ ಸರಕಾರ, ಕ್ರಾಂತಿಕಾರಿ ಮುಂದಾಳುಗಳೆಂದು ಘೋಷಿಸಿತು. ಕುಮುದಿನಿ ಮಿತ್ರ ಅವರು ಸುಪ್ರಭಾತ ಎಂಬ ಪತ್ರಿಕೆಯ ಮುಖೇನ ಮಹಿಳಾ ಸಶಕ್ತೀಕರಣ ರಾಷ್ಟ್ರೀಯ ರಾಜಕೀಯಕ್ಕೆ ಅಗತ್ಯ ಎಂಬುದನ್ನು ಬಿಂಬಿಸಿದರು. ಭಾರತೀಯ ಸ್ವಾತಂತ್ರ್ಯ ಚಳುವಳಿ ಮಹಿಳೆಯರ ಸ್ಥಾನಮಾನದ ಬಗೆಗೆ ಹಾಗೂ ಅವರ ಸಂಕಟಗಳ ಬಗೆಗೆ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತು. ಅನಿಬೆಸೆಂಟ್ ಹಾಗೂ ಇನ್ನೂ ಕೆಲ ಮಹಿಳೆಯರು ಮಾಂಟೆಗ್ಯೂ ಅವರನ್ನು ಭೇಟಿ ಮಾಡಿ, ಭಾರತೀಯ ಮಹಿಳೆಗೆ ಮತದಾನದ ಹಕ್ಕನ್ನು ಮನದಟ್ಟು ಮಾಡಿದರು. ಅದೇ ಸಂದರ್ಭ ದಲ್ಲಿ ಹಲವಾರು ರಾಷ್ಟ್ರೀಯ ಮಟ್ಟದ ಮಹಿಳಾ ಸಂಘಟನೆಗಳು
ತಲೆ ಎತ್ತಿದವು. 1917ರಲ್ಲಿ ಅನಿಬೆಸೆಂಟ್, ಡೊರೊತಿ ಜಿನರಾಜ ದಾಸ, ಮಾಲತಿ ಪಟವರ್ಧನ, ಅಮ್ಮು ಸ್ವಾಮಿನಾಥನ್, ದಾದಾಬಾಯಿ ಹಾಗೂ ಅಂಬುಜಾಮಾಲರು ಒಟ್ಟಾಗಿ ಭಾರ ತೀಯ ಮಹಿಳಾ ಅಸೋಸಿಯೇಷನ್ ಸ್ಥಾಪಿಸಿದರು. ಭಾರತೀಯ ಮೊದಲ ಮಹಿಳಾ ಸಂಘಟನೆಯೆಂದು ಹೆಸರು ಪಡೆದ ಈ ಸಂಸ್ಥೆ, ಹೋಂ ರೂಲ್ ಚಳುವಳಿಗೆ ಸಹಕಾರ ಕೊಟ್ಟಿತು. 1926ರಲ್ಲಿ ಅಖೀಲ ಭಾರತ ಮಹಿಳಾ ಸಮಾವೇಶ ಏರ್ಪಟ್ಟು, ಮಹಿಳೆಯರ ಸಮಸ್ಯೆಗಳು, ಮಹಿಳಾ ಕಾರ್ಮಿಕ ವಿಚಾರಗಳು, ರಾಷ್ಟ್ರೀಯ ಚಟುವಟಿಕೆಗಳ ಬಗೆಗೆ ಚರ್ಚೆ ಆರಂಭಗೊಂಡಿತು. 1920ರ ದಶಕದಲ್ಲಿ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಪಾಲ್ಗೊಳ್ಳುವಿಕೆಗೆ ಶ್ರಮವಹಿಸಿದ ಎರಡನೇ ಪೀಳಿಗೆಯ ಮಹಿಳಾ ಮುಂದಾಳುಗಳನ್ನು ಕಾಣಬಹುದು. ಅವರಲ್ಲಿ ರಾಜಕುಮಾರಿ ಅಮೃತಾ ಕೌರ್, ಲೇಡಿ ಪಿರೋಜ್ ಬಾಯಿ ಮೆಹ್ತಾ, ಸೇನ್‌ಗುಪ್ತಾ ಪ್ರಮುಖ ಹೆಸರುಗಳು. ಸ್ವಾತಂತ್ರ್ಯ ಚಳುವಳಿಗೆ ಹೊರತಾಗಿ ಕೆಲಸ ಮಾಡಿದ ಮಹಿಳಾ ಮುಂದಾಳುಗಳು ಹಲವರಿದ್ದಾರೆ. ಅವರಲ್ಲಿ ಪ್ರಮುಖರೆಂದರೆ, ಪ್ರಭಾವತಿ ಮಿರ್ಜಾ, ಕಾಮಿನಿರಾಯ್, ಅಘೋರ ಕಾಮಿನಿರಾಯ್. ಈ ಕ್ರಾಂತಿಕಾರೀ ಸಮಾಜ ಸುಧಾರಕಿಯರಲ್ಲಿ ಹಲವರು ಉತ್ತಮ ಲೇಖಕಿಯರೂ ಇದ್ದರು. ಇವರು ಮಹಿಳಾ ಸಬಲೀಕರಣಗಳ ಬಗೆಗೆ ಸಾಕಷ್ಟು ಬರವಣಿಗೆಯಲ್ಲಿ ತೊಡಗಿದರು. ಸ್ವಾತಂತ್ರ ಸಂಗ್ರಾಮ ಚಳುವಳಿಯ ಪ್ರಸಿದ್ಧ ಮಹಿಳಾ ನೇತಾರ ರಲ್ಲಿ ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ಅರುಣಾ ಅಸಫ್ ಆಲಿ, ಬಸಂತಿದೇವಿ ಅತಿ ಪ್ರಮುಖರು. ಮಹಿಳಾ ಸಬಲೀಕರಣದ ಪ್ರಭಾವೀ ವಕ್ತಾರರಾದ ಸರೋಜಿನಿ ನಾಯ್ಡು, ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಜತೆಗೆ ಕೆಲಸ ಮಾಡಿದರು. ಮಹಿಳೆಯ ಮತದಾನದ ಹಕ್ಕಿಗಾಗಿ ಹೋರಾಡಿದ ಸರೋಜಿನಿ ನಾಯ್ಡು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ ಪ್ರಥಮ ಮಹಿಳೆ. ಕಮಲಾದೇವಿ ಚಟ್ಟೋಪಾಧ್ಯಾಯ 1930ರ ಸತ್ಯಾಗ್ರಹ ಚಳುವಳಿಯಲ್ಲಿ ಪಾಲ್ಗೊಂಡವರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಅರುಣಾ ಅಸಫ್ ಆಲಿಯವರನ್ನು ಸ್ವಾತಂತ್ರ್ಯ ಚಳು ವಳಿಯ ಶ್ರೇಷ್ಠ ಹಿರಿಯ ಮಹಿಳೆಯೆಂದೂ 1942 ಚಳುವಳಿಯ ನಾಯಕಿಯೆಂದೂ ಬಣ್ಣಿಸಲಾಗಿದೆ. ಬ್ರಿಟಿಷ್ ವಿರೋಧಿ ಚಟುವಟಿಕೆಗಳಿಗೆ ಪ್ರಖ್ಯಾತರಾದ ಬಸಂತಿದೇವಿಯವರನ್ನು ಬ್ರಿಟಿಷ್ ವಸ್ತುಗಳನ್ನು ಬಹಿಸ್ಕರಿಸುತ್ತಿದ್ದಾಗ ಬಂಧಿಸಲಾಗಿತ್ತು. ಅವರು 1922ರಲ್ಲಿ ಬಂಗಾಳದ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ಭಾರತೀಯ ಮಹಿಳೆಯರು ಪ್ರಥಮ ಭಾರಿಗೆ ದೊಡ್ಡ ಗುಂಪುಗಳಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡುದು ಇಂದು ಚರಿತ್ರೆ. ಮೆರವಣಿಗೆ, ತಡೆ, ನೂಲುವಿಕೆ ಮುಂತಾದ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಹಿಳೆಯರ ಮನವೊಲಿಸಲು ಹಲವಾರು ಸಂಸ್ಥೆಗಳು ಜನ್ಮತಾಳಿದವು. ಈ ಎಲ್ಲ ಮಹಿಳಾ ಪಾಲ್ಗೊಳ್ಳುವಿಕೆಯ ಫಲಶ್ರುತಿಯೆಂಬಂತೆ, ಸಂವಿಧಾನ ರಚನೆಯ ಸಂದರ್ಭದಲ್ಲಿ ಸಮಾನತೆ ಹಾಗೂ ಮಹಿಳೆಯರಿಗೆ ಸಮಾನ ಹಕ್ಕಿನ ವಿಚಾರಗಳನ್ನು ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಯ್ತು. ಸ್ವತಂತ್ರ ಭಾರತದಲ್ಲಿ
ಸ್ವಾತಂತ್ರ್ಯ ಚಳುವಳಿಯ ಮುಖೇನ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಅಸ್ತಿವಾರ ಹಾಕಿದ್ದರೂ ಮುಂದೆ ಕ್ರಮಬದ್ಧ ಪ್ರಯತ್ನಗಳ ಕೊರತೆಯಿಂದಾಗಿ ಸ್ವಾತಂತ್ರೋತ್ತರ ಭಾರತದಲ್ಲಿ ಮಹಿಳಾ ರಾಜಕೀಯ ಪ್ರವೇಶ ಹಾಗೂ ಪಾಲ್ಗೊಳ್ಳುವಿಕೆ ಕುಂಠಿತಗೊಂಡಿತು. ರಾಜಕೀಯ ಸ್ಥರದಲ್ಲಿ ಭಾರತೀಯ ಮಹಿಳೆಗೆ ಸಿಗಬೇಕಾದ ಅವಕಾಶ ಸಿಗದೇ ಹೋಯಿತು. ಮಹಿಳೆಯರ ಪಾಲ್ಗೊಳ್ಳುವಿಕೆ ಕುಟುಂಬಗಳಿಗೆ ಸೀಮಿತಗೊಂಡು, ರಾಜಕೀಯದಲ್ಲಿ ಪಾಲ್ಗೊ ಳ್ಳಲು ಅಗತ್ಯವಿರುವ ಬದ್ಧತೆ ಹಾಗೂ ಇಚ್ಛಾಶಕ್ತಿಯ ಕೊರತೆ ಗೋಚರವಾಯ್ತು. ಸಂವಿಧಾನ ಕತೃìಗಳು ಕಾನೂನು, ಸಾಮಾಜಿಕ ಬದಲಾವಣೆಯನ್ನು ತರುತ್ತದೆ ಹಾಗೂ ಮಹಿಳೆಯರನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತದೆಂದು ಭಾವಿಸಿದರು. ಈ ಆಶಯ ಸುಳ್ಳಾಯ್ತು. ಮಹಿಳೆಯರನ್ನು ರಾಜಕೀಯ ರಂಗ ಅಥವಾ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಗಳಿಂದ ಸ್ವಾತಂತ್ರೊತ್ತರ ಭಾರತದಲ್ಲಿ ದೂರ ಇಡಲಾಯ್ತು. ಪುರುಷರಿಲ್ಲದ ಸಂದರ್ಭಗಳಲ್ಲಷ್ಟೇ, ಸಂಬಂಧಿತ ಕುಟುಂಬಗಳ ಮಹಿಳೆಯರಿಗೆ ರಾಜಕೀಯದ ಗದ್ದುಗೆ ಕೊಡಲಾಯ್ತು ಮತ್ತು ಅಂತಿಮ ಹತೋಟಿಯನ್ನು ಪುರುಷರೇ ಪಡೆಯಲು ಪ್ರಯತ್ನಿಸಿದರು. ಡಾ. ಕೃಷ್ಣ ಕೋತಾಯ