Advertisement

ಗ್ರಾಪಂ ಎದುರು ಆಹಾರವಿಟ್ಟು ಪ್ರತಿಭಟನೆ

06:07 PM Jan 03, 2022 | Team Udayavani |

ಬಾದಾಮಿ: ಸರಿಯಾಗಿ ರುಚಿಯಾದ ಊಟ, ಉಪಹಾರ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಹೊಸೂರ ಗ್ರಾಮದ ಮೆಟ್ರಿಕ್‌ ಪೂರ್ವ ಎಸ್ಸಿ-ಎಸ್ಟಿ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯದ ಸಿಬ್ಬಂದಿ ವಿರುದ್ಧ ಗ್ರಾಪಂ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹೊಸೂರ ಗ್ರಾಮದ ಎಸ್ಸಿ-ಎಸ್ಟಿ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ 40 ಮಕ್ಕಳಿದ್ದು, ಸರಿಯಾಗಿ ಉಪಹಾರ, ಊಟ ನೀಡದೇ ಪರದಾಡುತ್ತಿದ್ದಾರೆ. ಬೆಳಗ್ಗೆ ಉಪಹಾರಕ್ಕಾಗಿ ಅವಲಕ್ಕಿ ಮಾಡಿದ್ದು, ಉಪ್ಪು-ಖಾರ ಇಲ್ಲದಾಗಿದೆ. ಉಪಹಾರ ರುಚಿ ಇಲ್ಲದ್ದರಿಂದ ಅದನ್ನು ತಿನ್ನದೇ ಗ್ರಾಪಂ ಎದುರು ಪಾತ್ರೆ ಸಮೇತ ಆಹಾರವಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಅಧಿಕಾರಿಗಳು ಬರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅಡಿಗೆಯವರು ಸರಿಯಾಗಿ ಅಡುಗೆ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ರುಚಿಯಾದ ಊಟ, ಉಪಹಾರ ನೀಡುವುದಿಲ್ಲ. ಪ್ರತಿ ದಿನ ಚಪಾತಿ, ರೊಟ್ಟಿ ನೀಡುವುದಿಲ್ಲ. ಬರೀ ಅನ್ನ-ಸಾಂಬಾರ ಮಾಡುತ್ತಾರೆ. ಊಟದ ಮೆನುವಿನ ಪ್ರಕಾರ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸಮಸ್ಯೆಗಳ ಆಗರ: ಹೊಸೂರ ಗ್ರಾಮದ ಎಸ್ಸಿ-ಎಸ್ಟಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಸ್ನಾನಕ್ಕೆ ಬಿಸಿ ನೀರಿಲ್ಲ. ಕುಡಿವ ನೀರಿನ ವ್ಯವಸ್ಥೆ ಇಲ್ಲ. ಮೂಲ ಸೌಕರ್ಯಗಳಿಲ್ಲ. ಫ್ಯಾನ್‌ ಇಲ್ಲ. ವಿದ್ಯುತ್‌ ಸಂಪರ್ಕ ಸರಿಯಾಗಿಲ್ಲ. ಕತ್ತಲಲ್ಲಿ ಜೀವನ ನಡೆಸುವಂತಾಗಿದೆ. ಪ್ರತಿ ವಿದ್ಯಾರ್ಥಿಗೆ ಊಟ, ಉಪಹಾರಕ್ಕಾಗಿ 1500 ರೂ. ಮಾಸಿಕ ಹಣ ಇದೆ. ಆದರೆ ಸರಿಯಾದ ಊಟ ಕೊಡದೇ ಸತಾಯಿಸುತ್ತಿದ್ದಾರೆ. ಮೆನುವಿನ ಪ್ರಕಾರ ಬಾಳೆಹಣ್ಣು, ತತ್ತಿ, ಸಿಹಿಯೂಟ ಕೊಡಬೇಕಿದೆ. ಆದರೆ ಮೆನುವಿನ ಪ್ರಕಾರ ಊಟ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಪಿ.ಪಾಟೀಲ ಭೇಟಿ ನೀಡಿ ಸಮಸ್ಯೆ ಆಲಿಸಿ ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಈ ವೇಳೆ ವಸತಿ ನಿಲಯದ ವಾರ್ಡನ್‌ ಪಿಂಜಾರ, ಸಿಬ್ಬಂದಿ ಇದ್ದರು.

Advertisement

ಬಾದಾಮಿ ತಾಲೂಕಿನ ಹೊಸೂರ ಗ್ರಾಮದ ಎಸ್ಸಿ-ಎಸ್ಟಿ ಮೆಟ್ರಿಕ್‌ ಬಾಲಕರ ವಸತಿ ನಿಲಯದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಮೆನುವಿನ ಪ್ರಕಾರ ಮಕ್ಕಳಿಗೆ ಊಟ, ಉಪಹಾರ ನೀಡಬೇಕು. ಮೂಲಭೂತ ಸೌಕರ್ಯ ಒದಗಿಸಬೇಕು. ಹೆಸರು ಹೇಳಲಿಚ್ಛಿಸದ ಹೊಸೂರ ಗ್ರಾಮದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next