Advertisement

ಭಯ ಬೇಡ, ದೂರುದಾರರ ಹೆಸರನ್ನು ಗೌಪ್ಯವಾಗಿಡುವೆವು…

01:38 AM Nov 25, 2020 | mahesh |

ಶಾಲೆ-ತರಗತಿಗಳಿಂದ ಮಕ್ಕಳು ದೂರವಾಗಿ 9 ತಿಂಗಳುಗಳೇ ಕಳೆದಿದ್ದು, ಮನೆಗಳ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವ ಮಕ್ಕಳನ್ನು ನಿಯಂತ್ರಿಸುವುದೇ ಸವಾಲಾಗಿದೆ. ಮಕ್ಕಳ ವಿಚಾರದಲ್ಲಿ ಪೋಷಕರಲ್ಲಿ ಮೂಡಿರುವ ಆತಂಕ ಹಾಗೂ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆ ಹಾಗೂ ತಜ್ಞರಿಂದ ಪರಿಹಾರ ಒದಗಿಸಲು “ಉದಯವಾಣಿ’ ವೇದಿಕೆ ಕಲ್ಪಿಸಿದೆ.

Advertisement

ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ಪಡೆಯುವುದು ಅಥವಾ ಹೆಚ್ಚುವರಿ ಶುಲ್ಕ ಪಡೆಯುವ ಬಗ್ಗೆ ದೂರು ನೀಡಿದರೆ ಅಂಥ‌ವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆಯೇ? ಹೆಸರು ಗೌಪ್ಯವಾಗಿಟ್ಟರೆ ಪೋಷಕರಿಗೆ ಧೈರ್ಯ ಬರುತ್ತದೆ. ಇಲ್ಲವಾದರೆ ಮುಂದೆ ಮಕ್ಕಳಿಗೂ ಇದರಿಂದ ಸಮಸ್ಯೆ ಆಗಬಹುದಲ್ಲವೇ?
– ಸತೀಶ್‌ ಬಿ ನಾಗಸಂದ್ರ, ಬೆಂಗಳೂರು.

ಉತ್ತರ: ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕದ ಬಗ್ಗೆ ದೂರು ನೀಡಿರುವ ಪಾಲಕ, ಪೋಷಕರು ಯಾವುದೇ ರೀತಿಯಲ್ಲೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ದೂರು ನೀಡಿರುವ ಪಾಲಕ, ಪೋಷಕರ ಹೆಸರನ್ನು ಗೌಪ್ಯವಾಗಿಡಲು ಅವಕಾಶವಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ಸಮಸ್ಯೆ ಆಗದಂತೆ ಪಾಲಕರೇ ಮುನ್ನೆಚ್ಚರಿಕೆ ವಹಿಸಿ, ಹೆಸರು ಗೌಪ್ಯವಾಗಿಡಬೇಕು ಎಂದು ಉಲ್ಲೇಖೀಸಿದರೆ, ಗೌಪ್ಯವಾಗಿಡುತ್ತೇವೆ. ದೂರು ನೀಡಿದರೆ ಆ ಶಾಲೆಯಲ್ಲಿ ಮಕ್ಕಳಿಗೆ ಮುಂದೆ ಸಮಸ್ಯೆಯಾಗಬಹುದು ಎಂಬ ಯಾವುದೇ ಆತಂಕ ಬೇಡ.
– ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

ಮಕ್ಕಳು ಮನೆಯಲ್ಲೆ ಕುಳಿತು ಮಾನಸಿಕ ಖನ್ನತೆಗೆ ಒಳಗಾಗಿದ್ದಾರೆ. ಇವರನ್ನು ಸದಾ ಸಂತೋಷವಾಗಿಡಲು ಏನೇನು ಮಾಡಬೇಕು.?
– ಮಹಾಂತೇಶ ರಾಜಗೋಳಿ, ಬೈಲಹೊಂಗಲ , ಬೆಳಗಾವಿ

ಉತ್ತರ: ಖನ್ನತೆಗೊಳಗಾಗಿರುವ ಮಕ್ಕಳನ್ನು ಒಂಟಿಯಾಗಿರಲು ಬಿಡಬೇಡಿ. ಪೋಷಕರೇ ಸ್ನೇಹಿತರಾಗುವ ಮೂಲಕ ಮುಕ್ತವಾಗಿ ಮಾತನಾಡಿಸಿ. ವೀಡಿಯೊ ಕಾಲ್‌ ಮೂಲಕ ಆತ್ಮೀಯರು, ಸ್ನೇಹಿತರು, ಸಂಬಂಧಿಕರನ್ನು ಮಾತನಾಡಲು ಅವಕಾಶ ಮಾಡಿಕೊಡಿ. ಹೊಸತನ, ಬದಲಾಣೆಯು ಖನ್ನತೆಯನ್ನು ದೂರ ಮಾಡಿ ಸಂತೋಷವನ್ನು ಹೆಚ್ಚಿಸುತ್ತದೆ. ಶಾಲೆ ಮುಚ್ಚಿರುವುದರಿಂದ ಪಠ್ಯೇತರ, ಜೀವನಕ್ಕೆ ಮೌಲ್ಯಯುತವಾದ ಅಂಶಗಳ ಕಲಿಕೆಗೆ ಸಮಯ ಮತ್ತು ಅವಕಾಶಗಳು ಹೆಚ್ಚಿದೆ. ಹೊಸ ವಿಷಯ, ಕೌಶಲ್ಯ, ಕೆಲಸವನ್ನು ಯಶಸ್ವಿಯಾಗಿ ಕಲಿತುಕೊಂಡಾಗ ದೇಹದಲ್ಲಿ ಧನಾತ್ಮಕ ಮತ್ತು ಸಂತೋಷ ನೀಡುವ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ದಿನಚರಿ ಸಿದ್ಧಪಡಿಸಿ, ಯೋಗ ಧ್ಯಾನ, ಒಳಾಂಗಣ ಆಟಗಳಿಗೆ ಆದ್ಯತೆ ಇರಲಿ.
– ಡಾ| ಪಿ. ರಜನಿ,  ಉಪ ನಿರ್ದೇಶಕರು, ಮಾನಸಿಕ ಆರೋಗ್ಯ, ಆರೋಗ್ಯ ಇಲಾಖೆ

Advertisement

ಮಕ್ಕಳು ಆನ್‌ಲೈನ್‌ ತರಗತಿ ನೆಪದಲ್ಲಿ ಆನ್‌ಲೈನ್‌ ಗೇಮ್‌ಗಳ ದಾಸರಾಗುತ್ತಿದ್ದಾರೆ. ಆನ್‌ಲೈನ್‌ ಗೇಮ್‌ ನಿಷೇಧ ಮಾಡಬಾರದೇ?
– ಮುತ್ತುರಾಜ್‌, ದೊಡ್ಡಬಳ್ಳಾಪುರ, ಬೆಂ. ಗ್ರಾಮಾಂತರ.

ಉತ್ತರ: ಹೌದು, ಶಾಲಾ ಮಕ್ಕಳು ಆನ್‌ಲೈನ್‌ ಪಾಠ ಕಲಿಕೆ ಸಂದರ್ಭ ಆನ್‌ಲೈನ್‌ ಗೇಮ್‌ಗಳಿಗೆ ಆಕರ್ಷಿತರಾಗಿ ಆನ್‌ಲೈನ್‌ ಆಟದಲ್ಲಿ ಹೆಚ್ಚು ಮಗ್ನರಾಗುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನ. 27ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರೊಂದಿಗೂ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
– ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next