ಅದೆಷ್ಟು ಕಠಿಣವಾಗಿದ್ದರೂ ಸರಳತೆಯ ಸಾಕಾರ ಮೂರ್ತಿ ಆಗಿದ್ದೆ. ಅಪ್ಪಾ, ನೀನು ಬಡತನಕ್ಕೆ ಬೇಸತ್ತೋ ಇಲ್ಲಾ ನಿನ್ನನ್ನು ನೀನು ದಂಡಿಸಿಕೊಳ್ಳುವುದಕ್ಕೊ ಮನೆಯಲ್ಲಿ ಅನ್ನ ಆಹಾರಕ್ಕೆ ಕೊರತೆ ಇದ್ದರೂ ಇದ್ದ ದುಡ್ಡಿನಲ್ಲಿಯೇ ಕುಡಿದು ಮರುಗುತ್ತಾ ನಿನ್ನ ಆರೋಗ್ಯ ನೀನೇ ಹಾಳು ಮಾಡಿಕೊಳ್ಳುತ್ತಿದ್ದೆ. ಅಪ್ಪಾ, ಒಂದು ದಿನ ಹೀಗೆಯೇ ಕುಡಿಯುತ್ತಲೆ ಕಣ್ಮುಚ್ಚಿಕೊಂಡುಬಿಟ್ಟೆ. ಇಂದಿಗೆ ನೀನಿಲ್ಲದೆ ಹೋಗಿ ಏಳು ವರ್ಷಗಳೇ ಗತಿಸಿಹೋಗಿವೆ ಅಪ್ಪಾ.
ಅದೋ ಆ ಹೊತ್ತು: ಕಿತ್ತು ತಿನ್ನುವ ಬಡತನ, ಅನ್ನದ ಹುಡುಕಾಟದಲ್ಲಿ ನಿನ್ನ ಗಾರೆ ಕೆಲಸ. ಒಡಲಿಗೆ ತುತ್ತನೂಡಲು ರಾತ್ರಿ ನೀ ಬರುವುದನ್ನು ಕಾತರಿಸಿ ಕಾಯುತ್ತಾ ಕುಳಿತುಕೊಳ್ಳುವ ನಮ್ಮ ಕಣ್ಣುಗಳು ಕುಡಿದು ಜೋಲಿ ಹೊಡೆಯುತ್ತಾ ಬರುವ ನಿನ್ನ ಕೈಗಳನ್ನೇ ಕಳವಳಗೊಂಡು ದಿಟ್ಟಿಸುತ್ತಿದ್ದವು.
ನಿನ್ನ ಕೈಯಲ್ಲಿಯ ಅನ್ನದ ಮೂಲ ಕಂಡರೆ ಕಣ್ಣುಗಳು ಅರಳುತ್ತಿದ್ದವು. ಆ ಹೊತ್ತಲ್ಲಿ ಅಪ್ಪಾ ನೀನು ಹಸಿವೆಂಬ ರಕ್ಕಸನನ್ನು ಹತ್ತಿಕ್ಕಲು ಏಕೈಕ ಶಕ್ತಿ ಅಸ್ತ್ರವಾಗಿದ್ದೆ ನಮ್ಮನ್ನು ರಕ್ಷಿಸಲು. ಜೀವ ತುಂಬುವ ಚೈತನ್ಯ ಚಿಲುಮೆಯಾಗಿದ್ದೆ. ಬೆಲೆ ಕಟ್ಟಲಾಗದ ಒಲುಮೆಯಾಗಿದ್ದೆ. ಅಪ್ಪಾ ಇಂದು ಅಪ್ಪಂದಿರ ದಿನವಂತೆ. ನೀನಿಲ್ಲದೆ ಇಂದು ಮೋಡವಿಲ್ಲದ ಮಳೆಗಾಲದಂತೆ, ಚಂದ್ರ- ತಾರೆಗಳಿಲ್ಲದ ಇರುಳು ಆಕಾಶದಂತೆ ಈ ನಮ್ಮ ಬದುಕು ಭಾಸವಾಗುತ್ತದೆ.
ಅಪ್ಪಾ ಐ ಮಿಸ್ ಯು… ಅಪ್ಪಾ ಐ ಲವ್ ಯು…
– ಕಾಸಿಂ ನದಾಫ್ ಭೈರಾಪುರ (ಕೊಪ್ಪಳ)