Advertisement

ಅಪ್ಪನ ನೆನಪು: ನಿಮ್ಮ ಪ್ರೀತಿಗೆ, ಅದರ ರೀತಿಗೆ ಎಂದೆಂದೂ ಋಣಿಯಾಗೇ ಇರುತ್ತೇನೆ ಅಪ್ಪಾ…

05:26 PM Jun 21, 2020 | Hari Prasad |

ಪ್ರೀತಿಯ ಅಪ್ಪ,
ನನ್ನನ್ನು ಯಾರಾದರೂ ನನ್ನಲ್ಲಿರುವ ತಾಳ್ಮೆ, ನಿಷ್ಠೆ, ಪ್ರಾಮಾಣಿಕತೆ, ಪ್ರಕೃತಿ ಪ್ರೇಮ, ಪ್ರಾಣಿಗಳಲ್ಲಿನ ಪ್ರೀತಿ, ಪರೋಪಕಾರಗಳನ್ನೆಲ್ಲಾ ಮೆಚ್ಚಿದಾಗಲೆಲ್ಲಾ ನಾನು ನಕ್ಕು ಮನದಲ್ಲೇ ನಿಮಗೆ ಕೃತಜ್ಞತೆಗಳ ಸಲ್ಲಿಸುವುದುಂಟು. ಇವನ್ನೆಲ್ಲಾ ಕಲಿಸಲು ನೀವು ಅದೆಷ್ಟು ಪ್ರಯತ್ನ ಪಡಬೇಕಾಗಿ ಬಂತಲ್ಲವೇ?

Advertisement

ಇನ್ನೂ ನೆನಪಿದೆ, ಚಿಕ್ಕವಳಿದ್ದಾಗ ಮಾತು ಕೇಳದಾದಾಗ ಇದಿಷ್ಟು ಕೆಲಸವನ್ನು ಚಾಚೂ ತಪ್ಪದೇ ಮಾಡಿದರೆ ಎನಾದರೂ ಉಡುಗೊರೆ ಕೊಡುವುದಾಗಿ ಹೇಳುತ್ತಿದ್ದಿರಿ. ಆಗ ಮಾತ್ರ ಕೊಟ್ಟಿಗೆ ಕೆಲಸಗಳನ್ನು, ತೋಟದ ಕೆಲಸಗಳನ್ನು ನಾನು ಕಲಿತು ಮಾಡುತ್ತಿದ್ದೆ, ಸಂತೆಯಲ್ಲಿ ತರಕಾರಿಗಳನ್ನು ಆರಿಸುತ್ತಿದ್ದೆ, ಅಡಿಕೆ ವ್ಯಾಪಾರ ಮಂಡಿಗೆ ನಿಮ್ಮೊಂದಿಗೆ ಬಂದು ವ್ಯವಹಾರಗಳನ್ನು ಅರಿಯುತ್ತಿದ್ದೆ,

ಯಾವುದೇ ಕೆಲಸವನ್ನಾದರೂ ಶೃದ್ಧೆಯಿಂದ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದೆ. ಆಗ ಪಾತಿ ಮಾಡಿ ಗಿಡಗಳನ್ನು ನೆಡುವುದನ್ನು ಕಲಿಯಲು ಅದೆಷ್ಟು ಗೊಣಗುತ್ತಿದ್ದೆ ನಾನು, ಈಗ ನಾನು ನೆಟ್ಟ ಆ ಗಿಡಗಳೆಲ್ಲಾ ಮರವಾಗಿ ನಿಂತಿರುವುದನ್ನು ನೋಡುತ್ತಿದ್ದರೆ ಅರ್ಥವಾಗುತ್ತಿದೆ ನೀವು ಅದೇಕೆ ಇಂತಹ ವಿಷಯಗಳಲ್ಲಿ ನನ್ನ ಆಸಕ್ತಿ ಬೆಳೆಸಲು ಪ್ರಯತ್ನಿಸುತ್ತಿದ್ದಿರೆಂದು.

ಒಂದು ದಿನವೂ ಸಿಟ್ಟಾಗದೇ ತಾಳ್ಮೆಯಿಂದ, ಉಪಾಯವಾಗಿ ಎಲ್ಲಾ ವಿಷಯಗಳನ್ನೂ ತಿಳಿಸುತ್ತಿದ್ದಿರಿ. ಒಂದು ಸ್ವತಂತ್ರ ಜೀವನಕ್ಕೆ ಅವಶ್ಯಕವಾದ ಕೆಲಸಗಳನ್ನು ಕಲಿಸುವುದು ಮುಖ್ಯ ಎಂಬ ನಿಮ್ಮ ನಿರ್ಧಾರವೇ ನಾನು ಇಂದು ನನ್ನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವಷ್ಟು ಸಮರ್ಥಳಾಗಲು ಕಾರಣ.

ನಿಮ್ಮ ಪ್ರೀತಿಗೆ, ಅದರ ರೀತಿಗೆ ಎಂದೆಂದೂ ಋಣಿಯಾಗೇ ಇರುತ್ತೇನೆ ಅಪ್ಪಾ…

Advertisement

ಧನ್ಯವಾದಗಳು

ಇಂತಿ ನಿಮ್ಮ ಪ್ರೀತಿಯ ಮಗಳು

ಮೇಘನಾ ಭಟ್, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next