Advertisement

ಅಪ್ಪನ ನೆನಪು 2020: ನೀನು ನನ್ನನ್ನು ಪ್ರೀತಿಸುವಷ್ಟು ಯಾರು ನನ್ನ ಪ್ರೀತಿಸಲ್ಲ…

08:38 AM Jun 21, 2020 | Nagendra Trasi |

ಇಂದ,
ನಿನ್ನ ಹಠಮಾರಿ ಮಗಳು…

Advertisement

ಗೇ,
ಮೈ ಡಿಯರ್‌ ಅಪ್ಪಾ…

ವಿಷಯ: ನಿನಗಾಗಿ ಬರೆದ ನನ್ನ ಮೊದಲ ಪತ್ರ ಅಪ್ಪಾ…..

ಎಲ್ಲರೂ ಹೇಳ್ತಾರೆ ಅಪ್ಪಾ ಅಂದ್ರೆ ಆಕಾಶ, ಅಮ್ಮಾ ಅಂದ್ರೆ ಭೂಮಿ ಅಂತ. ಆದ್ರೆ ನನ್ನ ಪ್ರಪಂಚ ನೀನೇನಪ್ಪಾ. ತಮ್ಮ ತಂಗಿಯರಿಗಿಂತ ಹೆಚ್ಚಾಗಿ ಸಿಟ್ಟು ಮಾಡಿಕೊಂಡಿದ್ದು, ಜಗಳವಾಡಿದ್ದು ಬಹುಷಃ ನಿನ್ನೊಟ್ಟಿಗೆ ಅನಿಸುತ್ತೆ. ಅಲ್ಲೂ ತಪ್ಪು ನನ್ನದೇ ಇದ್ದರೂ ನೀನು ಬಂದು ಸಾರಿ ಮಗ.. ಬಾ ಊಟಾ ಮಾಡು ಅನ್ನುವವರೆಗೂ ಮುಗಿಯುತ್ತಿರಲಿಲ್ಲಾ ನನ್ನ ಸ್ಟ್ರೈಕ್‌.

ಇನ್ನೂ ಕಲಿಕೆಯ ವಿಷಯದಲ್ಲಿ ನೀನು ಯಾವತ್ತು ನನ್ನನ್ನು ತಡೆದಿಲ್ಲ. ಎಂ.ಎ ಪತ್ರಿಕೋದ್ಯಮ ಮಾಡುವ ಬಯಕೆ ತೋರಿದಾಗ ಎಲ್ಲರೂ ಅಡ್ಡಗಾಲು ಹಾಕಿದರೂ, ಆದರೇ ನೀನು ಮಾತ್ರ ನನ್ನ ಊರುಗೋಲಾದೆ. ನನ್ನ ಜೀವನದಲ್ಲಿ ನಾನು ಕೇಳೋಕಿಂತ ಮುಂಚೆಯೇ ನೀನು ಎಲ್ಲವನ್ನು ನನ್ನ ಕೈ ಸೇರುವಂತೆ ಮಾಡಿದ್ದೀಯಾ. ಮಳೆಗಾಲ ಬಂದಾಗಲೆಲ್ಲ ನಾನು ಛತ್ರಿಯನ್ನು ಮನೆಯಲ್ಲೇ ಬಿಟ್ಟುಹೋಗುತ್ತಿದ್ದೆ. ನೀನು ನಾನು ನೆನೆದುಕೊಂಡು ಬರಬಾರದು ಅಂತ ಛತ್ರಿ ಹಿಡಿದು ಆಟೋ ಸ್ಟ್ಯಾಂಡ್‌ಗೆ ಬರುತ್ತಿದ್ದೆ.

Advertisement

ಕೋವಿಡ್ ಲಾಕ್‌ ಡೌನ್‌ನಿಂದಾಗಿ ಊರಿಗೆ ಬಂದಾಗ ಅಕ್ಕನ ಹುಟ್ಟುಹಬ್ಬಕ್ಕೆ ಕೇಕ್‌ ತರಲು ಹೋದಾಗಲೂ ನೀನು ನನ್ನ ಕೈ ಹಿಡಿದು ರಸ್ತೆ ದಾಟಿಸಿದೆ. ಇಲ್ಲಿ ನಾನು ದಿನಾ ಅದೆಷ್ಟು ಟ್ರಾಫಿಕ್‌ನಲ್ಲಿ ಒಬ್ಬಳೆ ರಸ್ತೆ ದಾಟುತ್ತೇನೆ. ಆದರೇ ಅಲ್ಲಿ ಗಾಡಿಗಳು ತುಂಬಾ ಕಡಿಮೆ ಇದ್ದರೂ ನೀನು ಮಾತ್ರ ಕೈ ಹಿಡಿದು ರಸ್ತೆ ದಾಟಿಸುವುದನ್ನು ಮರೆಯಲಿಲ್ಲ. ನಾ ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಒಂದು ಬಾರಿನೂ ನನ್ನ ಮೇಲೆ ಕೈ ಮಾಡಿರುವ ನೆನೆಪು ಸಹ ನನಗಿಲ್ಲ. ಆದರೇ ನಿನ್ನ ಹೆಂಡತಿ, ಅಮ್ಮಾ ಮಾತ್ರ ಇದಕ್ಕೆ ಪಕ್ಕಾ ವಿರುದ್ದವಾಗಿದ್ದಾಳಲ್ಲ. ಹೇ ಅಪ್ಪಾ ಇದನ್ನ ಮಾತ್ರ ಅವಳ ಮುಂದೆ ಹೇಳ ಬೇಡಾ. ಇಲ್ಲಾ ಅಂದ್ರೆ ಕಾಲ್‌ ಮಾಡಿ ಬೈತಾಳೆ. ಏನೇ ನಾನ್‌ ಯಾವಾಗ ನಿನಗ್‌ ಹೊಡೆದಿದ್ದೆ ಅಂತಾ…..

ನಿನಗೂ ಗೊತ್ತು ನಾನು ಎಷ್ಟು ಹಠಮಾರಿ ಅಂತ… ಆ 5ನೇ ಕ್ಲಾಸ್‌ನಲ್ಲೇ ಇದ್ದಾಗ ರಾತ್ರಿ 10 ಗಂಟೆಗೆ ಮುಚ್ಚಿರುವ ಬಟ್ಟೆ ಅಂಗಡಿ ತೆರೆಸಿ ಬಟ್ಟೆ ತಗೆದುಕೊಂಡವಳು ನಾನು. ಬಹುಷ: ಇದನ್ನು ನೀನು ಮರೆತಿಲ್ಲಾ ಅಂದುಕೊಳ್ಳುತ್ತೇನೆ. ಇನ್ನೂವರೆಗೂ ಈ ಹಠಮಾರಿತನ ಕಡಿಮೇನೇ ಅಗಿಲ್ಲ. ನೀನು ಎಷ್ಟೇ ಬೇಡಾ ಅಂದರೂ ಕೆಲಸದ ನಿಮಿತ್ತ ನಾನು ಬೆಂಗಳೂರಿಗೆ ಬಂದಿದ್ದು, ನಿನಗೆ ತುಂಬಾ ಬೇಜಾರಾಗಿದೆ ಅಂತಾ ನನಗೆ ಗೊತ್ತು. ಆದರೂ ಒಂದು ದಿನದಲ್ಲಿ ನಿನ್ನದು 10 ಕಾಲ್‌ ಬರುತ್ತವಲ್ಲಾ ಅಷ್ಟು ಸಾಕು ಬಿಡು… ನೀನು ನನ್ನನ್ನು ಪ್ರೀತಿಸುವಷ್ಟು ಯಾರು ನನ್ನ ಪ್ರೀತಿಸಲ್ಲ, ನನ್ನಿಂದಾನೂ ಅದು ಸಾಧ್ಯ ಇಲ್ಲ ಅನಿಸುತ್ತೆ. ಆದಷ್ಟು ಬೇಗಾ ಮತ್ತೆ ಊರಿಗೆ ಬರ್ತಿನಿ. ಜಗಳಾ.. ಪ್ರೀತಿ ಮುಂದುವರೆಸೋಣಾ… ಹಾ..ಹಾ ಕೊನೆಯದಾಗಿ ಒಂದು ಮಾತು.. ಇದೇ ಮೊದಲು ಅನಿಸುತ್ತೆ
ನಿನಗಾಗಿ ನಾನು ಪತ್ರ ಬರೆಯುತ್ತಿರುವುದು. ಹೇಗೆ ಬರೆಯೋದು ಗೊತ್ತಾಗಲಿಲ್ಲ. ನನಗೆ ದೋಚಿದ್ದು ಬರೆದು ಕಳುಸಿದ್ದೇನೆ. ಇದನ್ನು ನೋಡಿ ನೀನು ಸಂತೋಷ ಪಡುತ್ತೀಯಾ ಅಂದುಕೊಂಡಿದ್ದೇನೆ.. ಲವ್‌ ಯು ಪಾ….

ಇಂತಿ ನಿನ್ನ ಹಠಮಾರಿ ಮಗಳು..
ಐಶ್ವರ್ಯ ಬ ಚಿಮ್ಮಲಗಿ

Advertisement

Udayavani is now on Telegram. Click here to join our channel and stay updated with the latest news.

Next