ನವದೆಹಲಿ/ತಿರುವನಂತಪುರ: ಕಳೆದ ವರ್ಷದ ಮಾರ್ಚ್‌ನಲ್ಲಿ ಯೆಮೆನ್‌ನಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದ ಬೆಂಗಳೂರಿನ ಕ್ರೈಸ್ತ ಧರ್ಮ ಗುರು, ಕೇರಳ ಮೂಲದ ಥಾಮಸ್ ಉಳುನ್ನಲಿಲ್ ಬಿಡುಗಡೆ ಯಾಗಿದ್ದಾರೆ. ಈ ಬಗ್ಗೆ ಮಂಗಳವಾರ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಸ ವ್ಯಕ್ತಪಡಿಸಿದ್ದಾರೆ.
2016ರ ಮಾರ್ಚ್‌ನಲ್ಲಿ ಆಡೆನ್ ನಗರದಲ್ಲಿರುವ ಮದರ್ ಥೆರೇಸಾ ಸ್ಥಾಪನೆ ಮಾಡಿದ್ದ ಆಶ್ರಮದ ಮೇಲೆ ದಾಳಿ ನಡೆಸಿದ್ದ ಐಸಿಸ್ ಉಗ್ರರು ಹನ್ನೊಂದು ಮಂದಿಯನ್ನು ಹತ್ಯೆ ಮಾಡಿದ್ದರು. ಬಳಿಕ ಫಾದರ್ ಥಾಮಸ್ ಉಳುನ್ನಲಿಲ್‌ರನ್ನು ಅಲ್ಲಿಂದಲೇ ಅಪಹರಿಸಿದ್ದರು.
ಒಮನ್ ನೆರವು: ಅವರು ಹೇಗೆ ಬಿಡುಗಡೆಯಾಗಿದ್ದಾರೆ ಎಂಬ ಬಗ್ಗೆ ಸದ್ಯ ಮಾಹಿತಿ ತಿಳಿಯದಿದ್ದರೂ, ಯೆಮೆನ್‌ನ ರಾಜಕೀಯ ಪಕ್ಷಗಳ ಮೂಲಕ ಮಾತು ಕತೆ ನಡೆಸಿ ಈ ಪ್ರಯತ್ನ ನಡೆಸಲಾಗಿದೆ. ಘಟನೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹರ್ಷ ವ್ಯಕ್ತಪಡಿಸಿದ್ದು, ಅವರು ಅಸ್ವಸ್ಥರಾಗಿದ್ದು, ಒಮನ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಂತೆ ಕೇರಳಕ್ಕೆ ಕರೆತರಲು ಅಗತ್ಯವಿರುವ ನೆರವು ನೀಡುವುದಾಗಿ ಹೇಳಿದ್ದಾರೆ.
“ಫಾದರ್ ಸುರಕ್ಷಿತ ಬಿಡುಗಡೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಶ್ರಮವೇ ಕಾರಣ,’ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮಾನಂ ರಾಜಶೇಖರನ್ ಹೇಳಿದ್ದಾರೆ. ಇದೇ ವೇಳೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಒಮನ್ ಸರ್ಕಾರವನ್ನು ಅಭಿನಂದಿಸಿದ್ದಾರೆ.