ನವದೆಹಲಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಂಗಳವಾರ(ಜ.7) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
2013ರಲ್ಲಿ ತನ್ನದೇ ಗುರುಕುಲದ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು, ಅಂದಿನಿಂದ ದೇವಮಾನವ ಜೋಧ್‌ಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು ಈ ನಡುವೆ ವಯೋಸಹಜ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಸಾರಾಮ್‌ಗೆ ಮಾರ್ಚ್ 31 ರವರೆಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಕೋರ್ಟ್ ಆದೇಶದ ಮೇರೆಗೆ ಅತ್ಯಾಚಾರದ ಅಪರಾಧಿ ಅಸಾರಾಂನನ್ನು ಜೋಧ್‌ಪುರ ಕೇಂದ್ರ ಕಾರಾಗೃಹದಿಂದ ಭಗತ್ ಕಿ ಕೋಠಿಯಲ್ಲಿ ನಿರ್ಮಿಸಲಾದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಸಾರಾಂ ಹೃದ್ರೋಗಿಯಾಗಿದ್ದು, ಹೃದಯಾಘಾತಕ್ಕೂ ಒಳಗಾಗಿದ್ದರು ಎನ್ನಲಾಗಿದೆ ಈ ನಡುವೆ ಕೋರ್ಟ್ ಚಿಕಿತ್ಸೆಗಾಗಿ ಜಾಮೀನು ನೀಡಿದೆ, ಜಾಮೀನಿನ ಅವಧಿಯಲ್ಲಿ ಅವರ ಮೇಲ್ವಿಚಾರಣೆಯನ್ನು ಮಾಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಕಳೆದ ತಿಂಗಳು ಡಿಸೆಂಬರ್ 18 ರಂದು 17 ದಿನಗಳ ಕಾಲ ಪೆರೋಲ್ ಮೇಲೆ ಹೊರಬಂದಿದ್ದ ಅವರು ಜನವರಿ 1 ರಂದು ಜೋಧ್‌ಪುರ ಜೈಲಿಗೆ ಮರಳಿದರು. ಈ ನಡುವೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ಸಾಕ್ಷ್ಯವನ್ನು ಹಾಳು ಮಾಡದಂತೆ ಮತ್ತು ಕೇಸಿಗೆ ಸಂಬಂಧಿಸಿ ಯಾರನ್ನೂ ಭೇಟಿಯಾಗದಂತೆ ನಿರ್ದೇಶನ ನೀಡಿದೆ ಅಲ್ಲದೆ ಅವರ ಮೇಲ್ವಿಚಾರಣೆ ನಡೆಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ನಿರ್ದೇಶನ ನೀಡಿದೆ.