ನವದೆಹಲಿ: “ಒಬ್ಬ ರೈತನ ಮಗನಾಗಿ ಇಂತಹ ದೊಡ್ಡ ಜವಾಬ್ದಾರಿಯ ಹೊಣೆ ಹೊರಲಿದ್ದೇನೆ ಎಂಬ ವಿಷಯವನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ”…ಇದು ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನ್ಕರ್ ಸೋಮವಾರ (ಜುಲೈ 18) ನಾಮಪತ್ರ ಸಲ್ಲಿಸಿದ ನಂತರ ನೀಡಿದ ಪ್ರತಿಕ್ರಿಯೆಯಾಗಿದೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಸಂಬಂಧಿಯನ್ನೇ ಚಾಕುವಿನಿಂದ ಇರಿದು ಕೊಲೆಗೈದ…
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾಗುತ್ತಿರುವ ಕುರಿತು ನಿಮಗೆ ಏನು ಅನ್ನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಧನ್ಕರ್, ನಾನು ನಮ್ರತೆಯ, ರೈತ ಕುಟುಂಬದಲ್ಲಿ ಜನಿಸಿದವನು. ಪ್ರಾಥಮಿಕ ಶಿಕ್ಷಣ ಪಡೆಯಲು ಹೆಣಗಾಡಿದ್ದು, ಪ್ರತಿದಿನ ಶಾಲೆಗೆ ಹೋಗಲು ಆರು ಕಿಲೋ ಮೀಟರ್ ದೂರದವರೆಗೆ ನಡೆದುಕೊಂಡು ಹೋಗುತ್ತಿದ್ದೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ನನ್ನಂತಹ ಸಾಮಾನ್ಯ ವ್ಯಕ್ತಿಗೂ ಇಂತಹ ದೊಡ್ಡ ಹುದ್ದೆ ದೊರೆಯಲು ಕಾರಣರಾದ ನಮ್ಮ ಸಂವಿಧಾನ ರಚಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಧನ್ಕರ್ ಹೇಳಿದರು. ಪಶ್ಚಿಮಬಂಗಾಳದ ಮಾಜಿ ಗವರ್ನರ್ ಜಗದೀಪ್ ಧನ್ಕರ್ ಆಗಸ್ಟ್ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ವಿರುದ್ಧ ಸ್ಪರ್ಧಿಸಲಿದ್ದಾರೆ.