ನವದೆಹಲಿ: ರಾಜ್ಯಸಭೆಯಲ್ಲಿ ಸುಗಮವಾಗಿ ಕಲಾಪ ನಡೆಸಲು ಸಭಾಧ್ಯಕ್ಷ ಜಗದೀಪ್ ಧನ್‌ಕರ್ ಅವರೇ ದೊಡ್ಡ ಅಡ್ಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಆರೋಪಿಸಿದ್ದಾರೆ.
ಉಪರಾಷ್ಟ್ರಪತಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಧನ್‌ಕರ್ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಅವರು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಧನ್‌ಕರ್ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಪಕ್ಷಪಾತ ಮಾಡುವ ಮೂಲಕ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿಯೇ ಅವರ ವಿರುದ್ಧ ನಾವು ಅವಿಶ್ವಾಸ ಗೊತ್ತುವಳಿ ಮಂಡಿಸಲು ತೀರ್ಮಾನಿಸಿ, ನೋಟಿಸ್ ನೀಡಿದ್ದೇವೆ. ಈ ವಿಷಯದಲ್ಲಿ ವಿಪಕ್ಷಗಳು ಒಟ್ಟಾಗಿ ಇರಲಿವೆ. ಪ್ರತಿ ಬಾರಿ ಆಡಳಿತ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸದಲ್ಲೇ ಧನಕರ್ ಅವರು ತೊಡಗಿದ್ದರು ಎಂದಿದ್ದಾರೆ.
ಧನ್‌ಕರ್ ಒಬ್ಬ ಹೆಡ್‌ಮಾಸ್ಟರ್: ಮುಖ್ಯೋಪಧ್ಯಾಯರೊಬ್ಬರು ಶಾಲೆಯನ್ನು ನಿಯಂತ್ರಿಸುವಂತೆ ರಾಜ್ಯಸಭೆಯನ್ನು ನಿಯಂತ್ರಿಸಲು ಧನ್‌ಕರ್ ಅವರು ಪ್ರಯತ್ನಿಸುತ್ತಾರೆ. ಹೀಗಾಗಿ ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಕೊಡದೆ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರಾಜಕೀಯವಿಲ್ಲ: ಯಾವುದೇ ರಾಜಕೀಯ ದುರುದ್ದೇಶದಿಂದ ನಾವು ಧನ್‌ಕರ್ ಅವರ ವಿರುದ್ಧ ಈ ಗೊತ್ತುವಳಿಯನ್ನು ಮಂಡಿಸಿಲ್ಲ. ರಾಜ್ಯಸಭೆಯಲ್ಲಿ ಅವರು ನಡೆದುಕೊಳ್ಳುತ್ತಿದ್ದ ರೀತಿಯಿಂದ ನಾವು ರೋಸಿಹೋಗಿದ್ದೆವು. ಧನಕರ್ ಅವರ ನಡೆ ಕೇವಲ ನಿಯಮ ಮೀರಿದ್ದಷ್ಟೇ ಅಲ್ಲ. ಅದು ಸಂವಿಧಾನದ ಉಲ್ಲಂಘನೆಯೂ ಆಗಿದೆ. ಹೀಗಾಗಿ ಜನರು ಕಾಂಗ್ರೆಸ್‌ನ ನಡೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಖರ್ಗೆ ಹೇಳಿದ್ದಾರೆ.
ಸೋರೋಸ್ ಪ್ರಕರಣ ಮುಚ್ಚಲು ಈ ನಡೆ: ಬಿಜೆಪಿ
ರಾಜ್ಯಸಭೆ ಸಭಾಪತಿ ಜಗದೀಪ್ ಧನ್‌ಕರ್‌ಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಜಾಟ್ ಸಮುದಾಯಕ್ಕೆ ಅವಮಾನ ಮಾಡುತ್ತಿವೆ. ಅಮೆರಿಕ-ಹಂಗೆರಿ ಮೂಲದ ಉದ್ಯಮಿ ಜಾರ್ಜ್ ಸೊರೊಸ್ ಕಂಪನಿಯ ಜತೆ ಗಾಂಧಿ ಕುಟುಂಬಕ್ಕಿರುವ ಸಂಬಂಧದ ಆರೋಪವನ್ನು ಮುಚ್ಚಿಹಾಕಲು ಈ ನಡೆಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಬಿಜೆಪಿ ಹೇಳಿದೆ.