Advertisement

ದಿಲ್ಲಿ : ರೈತರ ರಣಕಹಳೆ: ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದ ರೈತರು

06:00 AM Dec 01, 2018 | Team Udayavani |

ಹೊಸದಿಲ್ಲಿ: ಸಾಲ ಮನ್ನಾ, ಪಿಂಚಣಿ, ಬೆಳೆಗಳಿಗೆ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಸಹಿತ ದೇಶದ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ರೈತರು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಆಲ್‌ ಇಂಡಿಯಾ ಕಿಸಾನ್‌ ಸಂಘರ್ಷ ಕೋ-ಆರ್ಡಿನೇಶನ್‌ ಕಮಿಟಿ (ಎಐಕೆಎಸ್‌ಸಿಸಿ) ಒಕ್ಕೂಟದಡಿ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ತಮಿಳು ನಾಡು, ಪಶ್ಚಿಮ ಬಂಗಾಲ ಹಾಗೂ ಉತ್ತರ ಪ್ರದೇಶಗಳ ರಾಜ್ಯಗಳ 207 ಸಂಘಟನೆ ಗಳಿಗೆ ಸೇರಿದ 35,000 ರೈತರು, 21 ರಾಜಕೀಯ ಪಕ್ಷಗಳ ಪ್ರಮುಖ ನಾಯಕರು, ವೈದ್ಯರು, ವಕೀಲರು, ಕಲಾವಿದರುಳ್ಳ “ನೇಶನ್‌ ಫಾರ್‌ ಫಾರ್ಮರ್ಸ್‌’ ಸಂಘಟನೆಯ ಸುಮಾರು 600-700 ಸದಸ್ಯರು ಪಾಲ್ಗೊಂಡಿದ್ದರು.

Advertisement

ಪ್ರತಿಭಟನೆಯ ಹಾದಿ
ಪ್ರತಿಭಟನೆಗಾಗಿ ಗುರುವಾರವೇ ದಿಲ್ಲಿಗೆ ಆಗಮಿಸಿದ್ದ ಸಾವಿರಾರು ರೈತರು, ರಾಮಲೀಲಾ ಮೈದಾನದಲ್ಲಿ ರಾತ್ರಿ ಕಳೆ ದಿದ್ದರು. ಭದ್ರತೆಗಾಗಿ 3,500 ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ ಜಂತರ್‌ ಮಂತರ್‌ನಲ್ಲಿ ಜಮಾಯಿಸಿದ ಅವರು, ಅಲ್ಲಿ ಬೃಹತ್‌ ರ್ಯಾಲಿಯಲ್ಲಿ ಪಾಲ್ಗೊಂಡರು. ಅನಂತರ ಸಂಸತ್ತಿನತ್ತ ಜಾಥಾ ಹೊರಟ ರೈತ ಸಾಗರಕ್ಕೆ ಸಂಸತ್‌ ರಸ್ತೆಯಲ್ಲಿ ಸಾಗಲು ಅನುಮತಿ ನಿರಾಕರಿಸಲಾಯಿತು. ಇದ ರಿಂದ ರೊಚ್ಚಿಗೆದ್ದ ರೈತರು, ಸಂಸತ್‌ ಮಾರ್ಗ ಪೊಲೀಸ್‌ ಠಾಣೆಯ ಬಳಿಯೇ ಪ್ರತಿ ಭಟನೆಗೆ ಕುಳಿತರು. ಅಲ್ಲಿ ವಿವಿಧ ರೈತ ಸಂಘಗಳ ಹಲವಾರು ನಾಯಕರು ಭಾಷಣ ಮಾಡಿದರು. ಕೊನೆಗೂ ಸಂಸತ್‌ ಮಾರ್ಗಕ್ಕೆ ಪ್ರವೇಶ ಪಡೆದ ರೈತರು ಅಲ್ಲಿ ದೊಡ್ಡ ಜಾಥಾ ನಡೆಸಿದರು. ಈ ವೇಳೆ, ತಮಿಳುನಾಡು ರೈತರು ಬೆತ್ತಲೆ ಪ್ರತಿಭಟನೆ ನಡೆಸಿದರಲ್ಲದೆ, ಆತ್ಮಹತ್ಯೆ ಮಾಡಿ ಕೊಂಡ ರೈತರ ತಲೆಬುರುಡೆಗಳನ್ನೇ ತಮ್ಮ ಮಾನ ಮುಚ್ಚಿಕೊಳ್ಳಲು ಬಳಸಿ ಕೊಂಡರು. ಆತ್ಮಹತ್ಯೆ ಮಾಡಿಕೊಂಡ ತೆಲಂ  ಗಾಣದ ರೈತರ ಪತ್ನಿಯರು ತಮ್ಮ ಪತಿ  ಯರ ಭಾವಚಿತ್ರಗಳನ್ನು ಕೊರಳಿಗೆ ಹಾಕಿಕೊಂಡು ಶಾಂತಿಯುತವಾಗಿ ಜಾಥಾದಲ್ಲಿ ಪಾಲ್ಗೊಂಡಿದ್ದರು. 

ಕೃಷಿ ಸ್ನೇಹಿಯೂ ಆಗಿರಲಿ: ದೇವೇಗೌಡ
ರೈತರ ಪ್ರತಿಭಟನೆಗೆ ಟ್ವಿಟರ್‌ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, “ವಿಶ್ವದ ಅತ್ಯಂತ ಉದ್ಯಮ ಸ್ನೇಹಿ ರಾಷ್ಟ್ರಗಳ ಸಾಲಿಗೆ ಸೇರಿರುವ ಭಾರತವು, ಉದ್ಯಮ ಸ್ನೇಹ ರಾಷ್ಟ್ರವಾಗುವುದರ ಜತೆಗೆ ಕೃಷಿ ಸ್ನೇಹಿ ರಾಷ್ಟ್ರವೂ ಆಗಬೇಕಿದೆ. ಇದು ಬಹಳ ಮುಖ್ಯ ನರೇಂದ್ರ ಮೋದಿಯವರೇ’ ಎಂದು ಬರೆದುಕೊಂಡಿದ್ದಾರೆ.

ಭಾಗವಹಿಸಿದ್ದ  ನೇತಾರರು
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಶರದ್‌ ಪವಾರ್‌, ಸೀತಾರಾಂ ಯೆಚೂರಿ, ಫಾರೂಕ್‌ ಅಬ್ದುಲ್ಲಾ, ಶರದ್‌ ಯಾದವ್‌, ದಿಲ್ಲಿ  ಸಿಎಂ ಅರವಿಂದ್‌ ಕೇಜ್ರಿವಾಲ್‌.

ಪ್ರಮುಖ ಬೇಡಿಕೆಗಳು
ರೈತರ ಬೆಳೆ ಸಾಲ ಮನ್ನಾ  ಮಾಡಬೇಕು.
ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನಿಗದಿಪಡಿಸಬೇಕು.
ರೈತರಿಗೆ 5,000 ರೂ.ಗಳ ಮಾಸಾಶನ ನೀಡಬೇಕು.
ಸ್ವಾಮಿನಾಥನ್‌ ವರದಿಯ ಅನುಷ್ಠಾನವಾಗಬೇಕು.
ಇವುಗಳ ಜಾರಿಗಾಗಿ ಸಂಸತ್‌ನ ವಿಶೇಷ ಅಧಿವೇಶನ ಕರೆಯಬೇಕು.

Advertisement

ಪ್ರಮುಖ 15 ಉದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವ ಸರಕಾರಕ್ಕೆ ರೈತರ ಸಾಲ ಮನ್ನಾ ಏಕೆ ಸಾಧ್ಯವಿಲ್ಲ? ರೈತರಿಂದ ಪಡೆದ ಹಣ ಅನಿಲ್‌ ಅಂಬಾನಿ ಜೇಬು ತುಂಬಿದೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಜೇಬುಗಳ್ಳರಂತೆ ಜನರನ್ನು ಸರಕಾರ ದರೋಡೆ ಮಾಡುತ್ತಿದೆ. ಆದರೆ ಹಿಂದಿರುಗಿಸುವಾಗ ಪುಡಿಗಾಸು ನೀಡುತ್ತಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಬಿಜೆಪಿಗೆ ಶ್ರೀರಾಮ ನೆನಪಾಗುತ್ತಾನೆ.
– ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಫ‌ಸಲ್‌ ವಿಮಾ ಯೋಜನೆಯ ನಿಜವಾದ ಅರ್ಥ “ಫ‌ಸಲು ಡಕಾಯಿತಿ’ ಯೋಜನೆ. ಆರಂಭದಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ನೀಡುವುದಾಗಿ ನಂಬಿಸಿ ರೈತರಿಂದ ಹಣ ಪಡೆಯಲಾಯಿತು. ಪರಿಹಾರ ನೀಡುವಾಗ ಷರತ್ತು ವಿಧಿಸಲಾಯಿತು.
– ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಮುಖ್ಯಮಂತ್ರಿ

ರೈತರ ಲೂಟಿ, ಶೋಷಣೆಯ ವಿರುದ್ಧವೇ ಇಂಥದ್ದೊಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ದೇಶದ ಜನರ ಬೆಂಬಲವಿದೆ. 
– ಯೋಗೇಂದ್ರ ಯಾದವ್‌, ಸ್ವರಾಜ್‌ ಇಂಡಿಯಾ

ಎರಡು ವರ್ಷಗಳಿಂದ ರೈತರ ಆತ್ಮಹತ್ಯೆ ವಿವರಗಳನ್ನು ಪ್ರಕಟಿಸದೆ ಮುಚ್ಚಿಡಲಾಗುತ್ತಿದೆ. ವಾಸ್ತವದಲ್ಲಿ, ರೈತರ ಸದ್ಯದ ಪರಿಸ್ಥಿತಿ ಭೀಕರ ಬರಗಾಲಕ್ಕಿಂತಲೂ ಘೋರವಾಗಿದೆ.
– ಪಿ. ಸಾಯಿನಾಥ್‌, ಹಿರಿಯ ಲೇಖಕ

ರಾಹುಲ್‌, ಕೇಜ್ರಿವಾಲ್‌ ಹೊಸ ನಾಟಕ ಶುರು ಮಾಡಿದ್ದು, ಜನರನ್ನು ಗೊಂದಲಕ್ಕೀಡುವ ಮಾಡುವ ಪ್ರಯತ್ನ ಆರಂಭಿಸಿದ್ದಾರೆ.
– ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹೊಸದಿಲ್ಲಿಯಲ್ಲಿ  ರೈತರು ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next