ತೆಕ್ಕಟ್ಟೆ: ರೈತರು ತೆಂಗು ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ. ನೈಸರ್ಗಿಕ ರಸಗೊಬ್ಬರಗಳ ಬಗ್ಗೆ ಮಾಹಿತಿ ಪಡೆದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕುಂದಾಪುರ ಕೋಕೋನಟ್ ಫೆಡರೇಶನ್ ಇದರ ಅಧ್ಯಕ್ಷ ವೆಂಕಟೇಶ್ ಹೆಬ್ಟಾರ್ ಹೊಸ್ಕೋಟೆ ಹೇಳಿದರು.
ಅರಾಟೆ ಹೊಸಾಡಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿ, ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಕುಂದಾಪುರ ಇವರ ಸಹಯೋಗದಲ್ಲಿ ಹೊಸಾಡು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಇದರ ಸದಸ್ಯರಿಗೆ ರಸಗೊಬ್ಬರ ಹಾಗೂ ರಸಸಾರ ವಿತರಣಾ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಮುಂದುವರಿದ ಆಧುನಿಕತೆಯ ನಡುವೆಯೂ ತೆಂಗು ಬೆಳೆ ಹಾಗೂ ಅದರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅದರದೆಯಾದ ಬೇಡಿಕೆಗಳಿವೆ. ಈ ನಿಟ್ಟಿನಲ್ಲಿ ರೈತರು ತೆಂಗು ಬೆಳೆಯತ್ತ ಹೆಚ್ಚು ಚಿತ್ತ ಹರಿಸುವಂತೆ ತಿಳಿಸಿದರು.
ಹೊಸಾಡು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಇದರ ಅಧ್ಯಕ್ಷ ಎಚ್. ರಮೇಶ್ ಆಚಾರ್ಯ ಅರಾಟೆ ಅಧ್ಯಕ್ಷತೆ ವಹಿಸಿದರು.
ಕುಂದಾಪುರ ಕೋಕೋನಟ್ ಫೆಡರೇಶನ್‌ನ ಕಾರ್ಯದರ್ಶಿ ಸೀತಾರಾಮ ಗಾಣಿಗ ಹಾಲಾಡಿ, ಕುಂದಾಪುರ ಕಿಸಾನ್ ಸಂಘದ ಸದಸ್ಯ ಮಹಾಬಲ ಬಾಯರಿ , ಹೊಸಾಡು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಇದರ ಉಪಾಧ್ಯಕ್ಷ ಕೃಷ್ಣ ಚಂದನ್, ಕಾರ್ಯದರ್ಶಿ ಕರುಣಾಕರ ಶೆಟ್ಟಿ ಹಾಡಿಮನೆ ಅರಾಟೆ ಹಾಗೂ ಹೊಸಾಡು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎಚ್.ರಮೇಶ್ ಆಚಾರ್ಯ ಅರಾಟೆ ಸ್ವಾಗತಿಸಿ, ಪ್ರದೀಪ್ ಆಚಾರ್ಯ ಅರಾಟೆ ನಿರೂಪಿಸಿ, ವಂದಿಸಿದರು.