Advertisement

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

03:51 PM Oct 31, 2024 | Team Udayavani |

ಉದಯವಾಣಿ ಸಮಾಚಾರ
ಯಲಬುರ್ಗಾ:ಎಲ್ಲ ಕ್ಷೇತ್ರಗಳಲ್ಲಿ ಆಗುತ್ತಿರುವಂತೆ ಕೃಷಿ ಕ್ಷೇತ್ರದಲ್ಲಿಯೂ ಈಚೆಗೆ ಸಾಕಷ್ಟು ಬದಲಾವಣೆ ‌ ಕಂಡು ಬರುತ್ತಿವೆ.
ಸಾಂಪ್ರದಾಯಿಕ ಬೆಳೆಗಳಿಗೆ ಅಂಟಿಕೊಂಡಿರುವ ರೈತ ಸಮೂಹ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದೆ. ಚೆಂಡು ಹೂ ಕೃಷಿ ಇದಕ್ಕೆ ತಾಜಾ ಉದಾಹರಣೆ.!

Advertisement

ಯಲಬುರ್ಗಾ ತಾಲೂಕಿನ ರೈತರು ಸಾಂಪ್ರದಾಯಿಕ ಬೆಳೆ ಜತೆಗೆ ವಿವಿಧ ವಾಣಿಜ್ಯ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಪಾರಂಪರಿಕ ಆಹಾರ ಧಾನ್ಯಗಳ ಜತೆಯಲ್ಲೇ ತಾಲೂಕಿನಲ್ಲಿ ಪುಷ್ಪ ಕೃಷಿ ದಿನದಿಂದ ದಿನಕ್ಕೆ ತನ್ನ ಕ್ಷೇತ್ರ ಹಿಗ್ಗಿಸಿಕೊಳ್ಳುತ್ತಿದೆ. ಸೇವಂತಿಗೆ, ಗಲಾಟಿ, ಕನಕಾಂಬರ, ಸುಗಂದರಾಜ, ಚೆಂಡು ಮಲ್ಲಿಗೆ, ಕಾರ್ನಿಸೆನ್‌, ಗುಲಾಬಿ, ಗ್ಲಾಡಿಯೋಲಸ್‌ ಮುಂತಾದವುಗಳಿಗೆ ಈಗ ಚೆಂಡು ಹೂ ಕೃಷಿ ಸೇರಿಕೊಂಡಿದೆ.

ಈ ಭಾಗದ ಪುಷ್ಪ ಕೃಷಿಗೆ ನೆರೆಯ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ರೈತರ ಪ್ರಭಾವ ಬೀರಿದೆ. ವಿಶೇಷವಾಗಿ ತಾಲೂಕಿನ ಮಸಾರಿ
ಭಾಗದಲ್ಲಿ ಬಹುತೇಕ ಜಮೀನುಗಳಲ್ಲಿ ಹೂವುಗಳು ಕಂಗೊಳಿಸುತ್ತಿವೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹೂವಿಗೆ ಬೇಡಿಕೆ
ಹೆಚ್ಚಿರುತ್ತದೆ. ಇದಕ್ಕೆ ಪೂರಕವೆಂಬಂತೆ ತಾಲೂಕಿನ ರೈತರ ತೋಟಗಳಲ್ಲಿ ಹೂ ಬಿಟ್ಟಿರುವುದು ರೈತರ ಸಂತಸ ಮತ್ತಷ್ಟು ಇಮ್ಮಡಿಗೊಳಿಸಿದೆ.

64 ಹೆಕ್ಟೆರ್‌ ಬೆಳೆ: ತಾಲೂಕಿನಲ್ಲಿ ತೋಟಗಾರಿಕೆ  ಇಲಾಖೆ ಮಾಹಿತಿ ಪ್ರಕಾರ 64 ಹೆಕ್ಟೆರ್‌ನಲ್ಲಿ 95 ರೈತರು ಚೆಂಡು ಹೂ ಕೃಷಿ ಮಾಡುತ್ತಿದ್ದಾರೆ. ತಾಲೂಕಿನ ನರಸಾಪೂರ, ಲಿಂಗನಬಂಡಿ, ಕಲಕಬಂಡಿ, ಮುರುಡಿ, ಮಾಟಲದಿನ್ನಿ, ಚೆಂಡಿ ನಾಳ, ಕೆಂಪಳ್ಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಕೊಪ್ಪಳ, ಕುಷ್ಟಗಿ, ಗಜೇಂದ್ರಗಡ, ಹೊಸಪೇಟೆ, ಇಳಕಲ್‌ ಮಾರುಕಟ್ಟೆಗಳಿಗೆ
ವ್ಯಾಪಾರ ಮಾಡಲು ತೆರಳುತ್ತಾರೆ. ಎಕರೆಗೆ ಕನಿಷ್ಟ ಎಂಟು ಟನ್‌ ಹೂ ಸಿಗಲಿದೆ. ಎಕರೆಗೆ ಮೂರು ತಿಂಗಳಲ್ಲಿ ಒಂದು ಲಕ್ಷ ಆದಾಯ ಖಚಿತ ಎನ್ನುತ್ತಾರೆ ಬೆಳೆಗಾರರು. ಬಯಲು ಸೀಮೆ ರೈತರು ಸಾಂಪ್ರದಾಯಿಕ ಕೃಷಿ ಜತೆಗೆ ಚೆಂಡು ಹೂವನ್ನು ಅಪ್ಪಿಕೊಳ್ಳಲು ಆರಂಭಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಉತ್ಕೃಷ್ಟವಾಗಿ ಬೆಳೆದು ಲಾಭ ತಂದುಕೊಡುವುದರಿಂದ ಪ್ರತಿ ವರ್ಷ ಚೆಂಡು ಹೂವು ಹಬ್ಬದ ವೇಳೆ ಬೆಳೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಸಾಗಿದೆ.

ದೀಪಾವಳಿ ಹಬ್ಬವಂದರೇ ಪುಷ್ಪ ಕೃಷಿಕರಿಗೆ ಎಲ್ಲಿಲ್ಲದ ಸಂಭ್ರಮ. ಲಕ್ಷಗಟ್ಟಲೇ ಹಣ ಎಣಿಸಿಕೊಳ್ಳುವ ಮೂಲಕ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ. ಕಡಿಮೆ ಶ್ರಮಖರ್ಚಿನೊಂದಿಗೆ ಅದಾಯ ತರುತ್ತಿರುವ ಪುಷ್ಪ ಕೃಷಿ ತಮ್ಮ ಬಾಳನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ. ರೈತರ ತೋಟಗಳಿಗೆ ವ್ಯಾಪಾರಿಗಳು ದಾಂಗುಡಿ ಇಟ್ಟಿದ್ದಾರೆ. ಕ್ವಿಂಟಲ್‌ ಗಟ್ಟಲೇ ನೇರ ಖರೀದಿ ಮಾಡುತ್ತಿದ್ದಾರೆ. ಕ್ವಿಂಟಲ್‌ಗೆ 6 ಸಾವಿರ ರೂ. ದರವಿದೆ.

Advertisement

ಅಲ್ಪ ಭೂಮಿಯಲ್ಲಿ ಚೆಂಡು ಹೂ ಬೆಳೆಯುತ್ತಿದ್ದೇವೆ. ಇದರಿಂದ ಆದಾಯಕ್ಕೆ ಕೊರತೆ ಇಲ್ಲ. ಸುತ್ತಲಿನ ಗ್ರಾಮಗಳಲ್ಲಿ ಹೂವು ಕೃಷಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ.
*ಸಣ್ಣಬಸವನಗೌಡ
ಮಾಲಿಪಾಟೀಲ, ನರಸಾಪೂರದ, ಹೂ ಬೆಳೆಗಾರ

ಮಸಾರಿ ಭಾಗದ ರೈತರು ಪುಷ್ಪ ಕೃಷಿ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಪುಷ್ಪ ಕೃಷಿ ಕೈಗೊಳ್ಳಲು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಹಾಯಧನ ದೊರೆಯಲಿದೆ. ರೈತರು ಪ್ರಯೋಜನೆ ಪಡೆಯಲು ಮುಂದಾಗಬೇಕು.

ನಿಂಗನಗೌಡ ಪಾಟೀಲ, ಸಹಾಯಕ
ನಿರ್ದೇಶಕ ತೋಟಗಾರಿಕೆ ಇಲಾಖೆ, ಯಲಬುರ್ಗಾ

*ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next