Advertisement

ರೈತರಿಗೆ ಬೆಲೆ ಖುಷಿ; ಭತ್ತ, ರಾಗಿ ಸೇರಿ 14 ಖಾರಿಫ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

10:30 AM Jun 09, 2022 | Team Udayavani |

ಹೊಸದಿಲ್ಲಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭ ವಾಗುತ್ತಲೇ ಕೇಂದ್ರ ಸರಕಾರ ರೈತರಿಗೆ ಖುಷಿ ನೀಡುವ ನಿರ್ಧಾರ ಕೈಗೊಂಡಿದೆ. ಭತ್ತ, ರಾಗಿ ಸಹಿತ 14 ಖಾರಿಫ್ ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Advertisement

2022-23ನೇ ಬೆಳೆ ವರ್ಷಕ್ಕೆ ಸಂಬಂಧಿ ಸಿದ ನಿರ್ಧಾರ ಇದಾಗಿದೆ. ಸರಕಾರದ ಈ ಕ್ರಮದಿಂದಾಗಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಸಿಗಲಿದೆ. “ಬೀಜದಿಂದ ಮಾರುಕಟ್ಟೆಯ ವರೆಗೆ’ ಎಂಬ ತತ್ವದ ಅನ್ವಯ ಮೋದಿ ಸರಕಾರ ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ. ಅದರ ಅನ್ವಯ ರೈತರ ಆದಾಯ ಹೆಚ್ಚಿಸಲಾಗುವುದು.

ಕನಿಷ್ಠ ಬೆಂಬಲ ಏರಿಕೆ ಮಾಡಿದ ಕಾರಣ ಕೊಯ್ಲಿನ ಬಳಿಕ ರೈತರಲ್ಲಿ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಧನಾತ್ಮಕ ಚಿಂತನೆ ಮೂಡಲಿದೆ ಎಂದು ಸಂಪುಟ ಸಭೆ ಬಳಿಕ ಸಚಿವ ಅನು ರಾಗ್‌ ಠಾಕೂರ್‌ ಪ್ರತಿಪಾದಿಸಿದ್ದಾರೆ.

14 ಖಾರಿಫ್ ಬೆಳೆಗಳಿಗೆ ನೀಡಲಾಗುವ ಬೆಂಬಲ ಬೆಲೆಯನ್ನು ಪರಿಷ್ಕರಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಮೆಕ್ಕೆ ಜೋಳಕ್ಕೆ ಪ್ರತೀ ಕ್ವಿಂಟಾಲ್‌ಗೆ 92 ರೂ.ಗಳಿಂದ 523 ರೂ. ವರೆಗೆ ಏರಿಕೆ ಮಾಡಲಾಗಿದೆ. ಪ್ರತೀ ಕ್ವಿಂಟಾಲ್‌ ಭತ್ತಕ್ಕೆ 100 ರೂ., ಪ್ರತೀ ಕ್ವಿಂಟಾಲ್‌ ಉದ್ದಿನ ಬೇಳೆ ಮತ್ತು ನೆಲಗಡಲೆಗೆ 300 ರೂ. ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದ ಭತ್ತಕ್ಕೆ ಕ್ವಿಂಟಾಲ್‌ಗೆ 1,940 ರೂ. ಗಳಿಂದ 2,040 ರೂ.ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಎ ವರ್ಗದ ಭತ್ತಕ್ಕೆ 1,960 ರೂ.ಗಳಿಂದ 2,060 ರೂ.ಗಳಿಗೆ ಬೆಂಬಲ ಬೆಲೆ ಹೆಚ್ಚಿಸಲಾಗಿದೆ.

ವಾಣಿಜ್ಯ ಬೆಳೆಗಾರರಿಗೂ ಖುಷಿ
ಸಭೆಯ ನಿರ್ಧಾರಗಳು ವಾಣಿಜ್ಯ ಬೆಳೆ ಗಾರರಿಗೂ ಖುಷಿ ತರಲಿವೆ. ಮೀಡಿಯಂ ಸ್ಟೇಪಲ್‌ ಹತ್ತಿಯ ಬೆಂಬಲ ಬೆಲೆಯನ್ನು 5,726 ರೂ.ಗಳಿಂದ 6,080 ರೂ.ಗಳಿಗೆ ಹೆಚ್ಚಿಸಲಾಗಿದೆ. ತೊಗರಿಗೆ 6,300 ರೂ.ಗಳಿಂದ 6,600 ರೂ.ಗಳಿಗೆ ಹೆಚ್ಚಿಸಲಾಗಿದೆ. ಶೇಂಗಾದ ಬೆಂಬಲ ಬೆಲೆಯನ್ನು 5,550 ರೂ.ಗಳಿಂದ 5,850 ರೂ.ಗಳಿಗೆ ಹೆಚ್ಚಿಸಲಾಗಿದೆ. ಸೂರ್ಯಕಾಂತಿ ಬೀಜಕ್ಕೆ ಕಳೆದ ವರ್ಷ 6,015 ರೂ. ಇದ್ದ ಬೆಂಬಲ ಬೆಲೆಯನ್ನು 6,600 ರೂ.ಗೆ ಹೆಚ್ಚಿಸಲು ಸಂಪುಟ ತೀರ್ಮಾನಿಸಿದೆ. ಪ್ರತೀ ಕ್ವಿಂಟಾಲ್‌ ಸಾಸಿವೆಗೆ 7,307 ರೂ.ಗಳಿಂದ 7,830 ರೂ.ಗಳಿಗೆ ಪರಿಷ್ಕರಿಸಲಾಗಿದೆ.

Advertisement

ರೈತರ ಸಶಕ್ತೀಕರಣ: ಪ್ರಧಾನಿ ಮೋದಿ
ಖಾರಿಫ್ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಿದ್ದನ್ನು ಸ್ವಾಗತಿಸಿರುವ ಪ್ರಧಾನಿ ಮೋದಿ, ಇದು ರೈತರನ್ನು ಸಶಕ್ತೀಕರಣಗೊಳಿಸುವ ನಿರ್ಧಾರ ಎಂದು ಬಣ್ಣಿಸಿದ್ದಾರೆ. ರೈತರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ರೈತರ ಸಶಕ್ತೀಕರಣಕ್ಕಾಗಿ ಕೈಗೊಂಡ ನಿರ್ಧಾರ ಎಂದಿದ್ದಾರೆ.

ಹೊಸ ಸಂಸ್ಥೆಗೆ ಉಪಗ್ರಹಗಳ ಹೊಣೆ
ಹೊಸದಾಗಿ ರಚಿಸಲಾಗಿರುವ ನ್ಯೂಸ್ಪೇಸ್‌ ಇಂಡಿಯಾ ಲಿ. (ಎನ್‌ಎಸ್‌ಐಎಲ್‌)ಗೆ ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ 10 ಉಪಗ್ರಹಗಳನ್ನು ವರ್ಗಾಯಿಸಲು ತೀರ್ಮಾನಿ ಸಲಾಗಿದೆ. ಇದರ ಜತೆಗೆ ಸಂಸ್ಥೆ ಹೊಂದಿರುವ ಮೀಸಲು ನಿಧಿಯನ್ನು ಹಾಲಿ 1 ಸಾವಿರ ಕೋಟಿ ರೂ.ಗಳಿಂದ 7,500 ಕೋಟಿ ರೂ.ಗಳಿಗೆ ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಅನುರಾಗ್‌ ಠಾಕೂರ್‌ ಸಭೆಯ ಬಳಿಕ ತಿಳಿಸಿದ್ದಾರೆ. ಈ ನಿರ್ಧಾರದಿಂದಾಗಿ ಕಂಪೆನಿಗೆ ಆರ್ಥಿಕವಾಗಿ ಹೆಚ್ಚಿನ ಸ್ವಾತಂತ್ರ್ಯ ಲಭಿಸಲಿದೆ. ಇದರಿಂದಾಗಿ ಬಾಹ್ಯಾಕಾಶ ಮತ್ತು ಉಪಗ್ರಹ ಉಡಾವಣ ಕ್ಷೇತ್ರದಲ್ಲಿ ಹೆಚ್ಚಿನ ಸ್ವಾಯತ್ತೆ ಅದಕ್ಕೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next