ಹಾವೇರಿ: ಜಿಲ್ಲೆಯಿಂದ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಅವರನ್ನು ಸ್ವಾಗತಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಧಿಕಾರಿಗಳ ವರ್ಗಾವಣೆಗಳು ಸರ್ವೇಸಾಮಾನ್ಯ. ಇದೊಂದು ಜೀವನದ ಜರ್ನಿ ಇದ್ದ ಹಾಗೆ. ಒಂದೇ ಕಡೆ ಇರದೇ ಸರ್ಕಾರದ ಮಾರ್ಗಸೂಚಿಯಂತೆ ನಿರ್ದೇಶನ ನೀಡಿದ ಜಿಲ್ಲೆಗೆ ತೆರಳಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಸಿವಿಲ್ ಸರ್ವಿಸ್ ಇದೊಂದು ಜೆಂಟ್‌ಲಿಸ್ಟ್ ಜಾಬ್ ಎಂದರು.
ಹಾವೇರಿ ಜಿಲ್ಲಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಲೋಕಸಭಾ ಚುನಾವಣೆ ಸಂದರ್ಭವಿತ್ತು. ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದರು. ಅದರಂತೆಯೇ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು. ನಂತರ ಜಿಲ್ಲೆಯಲ್ಲಿ ಪ್ರವಾಹ ಬಂದು ಸಾಕಷ್ಟು ತೊಂದರೆಯಾಯಿತು. ಅದನ್ನೂ ಯಶಸ್ವಿಯಾಗಿ ನಿಭಾಯಿಸಲಾಯಿತು. ನಂತರದಲ್ಲಿ ಪ್ರವಾಹದಿಂದ ಬೆಳೆ ಹಾನಿ, ಮನೆ ಹಾನಿ ಪರಿಹಾರ ಕಾರ್ಯದ ಜೊತೆಗೆ ಅನಿರೀಕ್ಷಿತವಾಗಿ ಕೋವಿಡ್ ವೈರಾಣು ಎದುರಾಯಿತು. ಈ ಎಲ್ಲವನ್ನೂ ಜಿಲ್ಲಾಡಳಿತದಿಂದ ಸಾಧ್ಯವಾಗುವಷ್ಟು ಇಲ್ಲಿಯವರೆಗೆ ನಿಯಂತ್ರಣ ಮಾಡಲಾಗಿದೆ ಎಂದರು.
ಇಲ್ಲಿಯವರೆಗಿನ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಧುನಿಕ ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ವಿಶೇಷವಾಗಿ ಹಾವೇರಿಯಲ್ಲಿ ನನ್ನ ಅನುಭವ ಕಲಿಕೆಗೆ ಸಾಕಷ್ಟು ಅವಕಾಶಗಳು ದೊರೆತವು. ಎಲ್ಲರನ್ನೂ ಸ್ಮರಿಸುತ್ತೇನೆ ಎಂದು ಹೇಳಿದರು. ನೂತನ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ, ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದೆ. ಎಲ್ಲಾ ಅಧಿಕಾರಿಗಳು ಅವರಿಗೆ ಉತ್ತಮ ಸಹಕಾರ ನೀಡಿದ್ದೀರಿ. ಅದರಂತೆಯೇ ನನಗೂ ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಜಿಲ್ಲೆಯ ಎಲ್ಲ ಅಧಿಕಾರಿಗಳ ಮಾರ್ಗದರ್ಶನವೂ ಬೇಕಾಗಿದೆ. ನಿಮ್ಮ ಸಹಕಾರ ಶಾರ್ಪ್ ಆಗಿರಬೇಕು. ಟೀಕೆಗಳಿಗೆ ಅಧಿಕಾರಿಗಳು ಯಾರೂ ಕಿವಿಗೊಡದೇ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಎಲ್ಲರೂ ಆದ್ಯತೆ ನೀಡಬೇಕು. ನಾನು ಈ ಜಿಲ್ಲೆಯ ಬಗ್ಗೆ ಹೆಚ್ಚಿನ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬಯಸಿದ್ದೇನೆ. ಎಲ್ಲರ ನಿರೀಕ್ಷೆಯಂತೆ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಚೈತ್ರಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಇತರ ಅಧಿಕಾರಿಗಳು ಕೃಷ್ಣ ಬಾಜಪೇಯಿ ಅವರ ಸೇವೆಯನ್ನು ಸ್ಮರಿಸಿದರು. ಉಪ ವಿಭಾಗಾಧಿಕಾರಿಗಳಾದ ಡಾ| ದಿಲೀಷ್ ಶಶಿ ಹಾಗೂ ಅನ್ನಪೂರ್ಣಾ ಮುದಕಮ್ಮವರ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.