ಚೆನ್ನೈ: ಶ್ರೀಲಂಕಾದ ತಮಿಳರಿಗೆ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಕೊಡಿಸುವ ಜಾಲವೊಂದನ್ನು ತಮಿಳುನಾಡಿನ ಕೇಂದ್ರೀಯ ಅಪರಾಧ ವಿಭಾಗದ ಅಧಿಕಾರಿಗಳು ಭೇದಿಸಿದ್ದಾರೆ. ನಕಲಿ ವಿಳಾಸ ಹಾಗೂ ಗುರುತಿನ ದಾಖಲೆ ಸೃಷ್ಟಿಸಿ, ಇವರಿಗೆ ಒದಗಿಸಲಾಗುತ್ತಿತ್ತು. ಟ್ರಾವೆಲ್ ಏಜೆಂಟರು, ಅಂಚೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಗುಪ್ತಚರ ವಿಭಾಗದ ಅಧಿಕಾರಿಗಳೂ ಈ ಜಾಲದಲ್ಲಿದ್ದಾರೆ ಎಂಬುದು ತಿಳಿದುಬಂದಿದೆ.
ಸುಮಾರು ಮೂರು ದಶಕಗಳಿಂದಲೂ ಈ ದಂಧೆ ಜಾರಿಯಲ್ಲಿತ್ತು ಎನ್ನಲಾಗಿದೆ. ಶುಕ್ರವಾರ ಈ ಸಂಬಂಧ 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅಲ್ಲದೆ ನಕಲಿ ಪಾಸ್‌ಪೋರ್ಟ್ ಪಡೆಯಲು ಯತ್ನಿಸುತ್ತಿದ್ದ ಇಬ್ಬರು ಶ್ರೀಲಂಕಾ ಪ್ರಜೆಗಳನ್ನೂ ಬಂಧಿಸಲಾಗಿದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಿಂದ 3 ರಿಂದ 5 ಲಕ್ಷ ರೂ. ಹಣ ಪಡೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಗುಪ್ತಚರ ದಳವು ಪೊಲೀಸ್ ಪೇದೆ ಕೆ.ಮುರುಗನ್ ಎಂಬುವವರನ್ನು ಬಂಧಿಸಿದಾಗ ಈ ಜಾಲ ಪತ್ತೆಯಾಗಿದೆ. ಆಸ್ಟ್ರೇಲಿಯಾಗೆ ಪ್ರಯಾಣಿಸಲು ಸಾಧ್ಯವಾಗದ ಶ್ರೀಲಂಕನ್ನರು ಈ ಅಕ್ರಮ ಹಾದಿ ಹಿಡಿಯುತ್ತಿದ್ದರು ಎನ್ನಲಾಗಿದೆ.
ಮೂಲ ದಾಖಲೆಗಳಂತೆಯೇ ಇರುವ ನಕಲಿ ದಾಖಲೆಗಳನ್ನು ಇವರು ಸೃಷ್ಟಿಸುತ್ತಿದ್ದರು. ಪಾಸ್‌ಪೋರ್ಟ್ ಪರಿಶೀಲನೆಗೆ ಬಂದಾಗ ಪೊಲೀಸರಿಗೆ ಲಂಚ ನೀಡಿ ವಿಳಾಸ ಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದರು. ಅದೇ ರೀತಿ ಪಾಸ್‌ಪೋರ್ಟ್ ಅಂಚೆಯ ಮೂಲಕ ವಿಲೇವಾರಿ ಯಾಗುವಾಗ ಅಲ್ಲಿನ ಅಂಚೆ ಪೇದೆಗೆ ಲಂಚ ನೀಡಿ ಪಾಸ್‌ಪೋರ್ಟ್ ತೆಗೆದುಕೊಳ್ಳುತ್ತಿದ್ದರು. ಇದು ಕೇವಲ ಚೆನ್ನೈ ನಗರದ ಕೆಲ ಭಾಗಗಳಲ್ಲಿ ಮಾತ್ರವಲ್ಲ, ಚೆನ್ನೈ ಹೊರವಲಯದಲ್ಲಿ ಯಾವುದೇ ಅಂಚೆ ಕಚೇರಿ ಹಾಗೂ ಪೊಲೀಸ್ ಸ್ಟೇಷನ್‌ನಲ್ಲಿ ಲಂಚದ ವ್ಯವಹಾರ ನಡೆಯುತ್ತದೆ ಎಂದಾದರೂ ಅಲ್ಲಿನ ವಿಳಾಸ ನೀಡಿ ಪಾಸ್‌ಪೋರ್ಟ್ ಪಡೆ ಯುತ್ತಿದ್ದರು. ಪಾಸ್‌ಪೋರ್ಟ್ ಸಿಗುತ್ತಿದ್ದಂತೆ ವಿದೇಶಕ್ಕೆ ಹೋಗುವ ವೀಸಾವನ್ನೂ ಶ್ರೀಲಂಕನ್ನರು ಪಡೆಯುತ್ತಿದ್ದರು ಎಂಬುದು ತಿಳಿದು ಬಂದಿದೆ.