ಬೆಂಗಳೂರು: ರೈತರು ಬೆಳೆದ ಹಣ್ಣು ಸಂರಕ್ಷಿಸಿ ಸಂಗ್ರಹಿಸಲು ಹಾಪ್‌ಕಾಮ್ಸ್ ವತಿಯಿಂದ ಶೀಥಲಗೃಹ ಹಾಗೂ ಉಪ ಉತ್ಪನ್ನಗಳ ತಯಾರಿಕೆಯ ಸಂಸ್ಕರಣ ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ 9.5 ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು, ಆ ಜಮೀನು ಹಾಪ್‌ಕಾಮ್ಸ್‌ಗೆ ಹಸ್ತಾಂತರಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.
ನಗರದ ಹಡ್ಸನ್ ವೃತ್ತದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಮಂಗಳವಾರ ದ್ರಾಕ್ಷಿ, ಕಲ್ಲಂಗಡಿ ಮಾರಾಟ ಮೇಳಕ್ಕೆ ಚಾಲನೆ ನೀಡಿದ ರಾಮಲಿಂಗಾರೆಡ್ಡಿ, ಹಾಪ್‌ಕಾಮ್ಸ್ ರೈತರ ಸಂಸ್ಥೆ. ಈ ಸಂಸ್ಥೆಯಿಂದ ರೈತರು ಬೆಳೆದ ಹಣ್ಣು ಸಂರಕ್ಷಣೆಗೆ ಶೀಥಲಗೃಹ ಹಾಗೂ ಜಾಮ್ ಸೇರಿದಂತೆ ಇತರೆ ಉತ್ಪನ್ನ ತಯಾರಿಸುವ ಸಂಸ್ಕರಣೆ ಕೇಂದ್ರ ಸ್ಥಾಪಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ನೂರಾರು ವಿಧದ ದ್ರಾಕ್ಷಿಯ ತಳಿಗಳು ಇದ್ದು, ಅವುಗಳಲ್ಲಿ ಕೆಲವೊಂದನ್ನು ಮಾತ್ರ ನಾವು ಬೆಳೆಯುತ್ತಿದ್ದೇವೆ. ಅಂತೆಯೇ 350 ಮಾವಿನ ತಳಿಗಳಿದ್ದು, ಬೇಡಿಕೆ ಇರುವಂತಹ 15 ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಹಣ್ಣು, ತರಕಾರಿ ನೀಡುವ ಉದ್ದೇಶದಿಂದ ಹಾಪ್‌ಕಾಮ್ಸ್ ಉತ್ತಮ ಸೇವೆ ನೀಡುತ್ತಿದ್ದು, ಗ್ರಾಹಕರು ದ್ರಾಕ್ಷಿ, ಕಲ್ಲಂಗಡಿ ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಶೇ.10ರಷ್ಟು ರಿಯಾಯಿತಿ ಮಾರಾಟ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸುತ್ತಮುತ್ತಲ ಭಾಗದಲ್ಲಿ ದ್ರಾಕ್ಷಿ ಫಸಲು ಬಂದಿಲ್ಲ. ಆದರೆ, ಬಿಜಾಪುರ, ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರಿಂದ ಹಾಪ್‌ಕಾಮ್ಸ್ ನೇರವಾಗಿ ದ್ರಾಕ್ಷಿ ಖರೀದಿಸಿ, ನಗರದ ಗ್ರಾಹಕರಿಗೆ ಶೇ.10ರ ರಿಯಾಯಿತಿ ದರದಲ್ಲಿ ನೀಡಲಿದೆ. ಫೆ.14ರಿಂದ ಮಾರ್ಚ್ ಅಂತ್ಯದವರೆಗೆ ಮೇಳ ನಡೆಯಲಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಬಿಬಿಎಂಪಿ ಸದಸ್ಯ ಆರ್.ವಸಂತ್‌ಕುಮಾರ್, ವೈನ್ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜೆ ಇದ್ದರು.
ಮಾವು ಮೇಳಕ್ಕೆ ಸಿದ್ಧತೆ
ಹಾಪ್‌ಕಾಮ್ಸ್ ಮತ್ತು ಮಾವು ಅಭಿವೃದ್ಧಿ ನಿಗಮ ಜಂಟಿಯಾಗಿ ಏಪ್ರಿಲ್ ಮೊದಲ ವಾರದಲ್ಲಿ ಮಾವು ಮತ್ತು ಇತರ ಹಣ್ಣುಗಳ ಮೇಳ ನಡೆಸಲು ಚಿಂತನೆ ನಡೆದಿದೆ. ಮೊದಲು ಕೇವಲ ಒಂದೆರಡು ಕಡೆಗಳಲ್ಲಿ ಮಾತ್ರ ಮಾವು ಮೇಳ ನಡೆಯುತ್ತಿತ್ತು. ಈ ಬಾರಿ ನಗರದ 50 ಕಡೆಗಳಲ್ಲಿ ಮೇಳ ಆಯೋಜಿಸಲಾಗುವುದು ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷ ಎಲ್.ಗೋಪಾಲಕೃಷ್ಣ ತಿಳಿಸಿದ್ದಾರೆ.