ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಕನಸುಗಳನ್ನು ಕಾಣುವ ಹಕ್ಕಿದೆ. ಹಾಗೆಯೇ ವಿದ್ಯಾರ್ಥಿ ಯಾದವನು ತಮ್ಮ ಜೀವನದಲ್ಲಿ ಬಲಿಷ್ಠವಾದ ಕನಸನ್ನು ಕಾಣುತ್ತಾ ಮುಂದೆ ಸಾಗಬೇಕು. ಕನಸು ಕಂಡರೆ ಸಾಲದು ಅದನ್ನು ನನಸು ಮಾಡಲು ಕಠಿನ ಪರಿಶ್ರಮ ಪಡಬೇಕು. ಪ್ರಯತ್ನವಿಲ್ಲದಿದ್ದರೆ ಯಾವುದನ್ನು ಕೂಡ ಸಾಧಿಸಲು ಸಾಧ್ಯವಿಲ್ಲ.
ಕನಸು ನನಸು ಮಾಡುವ ಹಾದಿಯಲ್ಲಿ ಅನೇಕ ರೀತಿಯ ಸವಾಲುಗಳು ಎದುರಾಗಬಹುದು. ಉದಾಹರಣೆಗೆ ಇತ್ತೀಚಿಗೆ ನಾವು ನೋಡುವ, ಕೇಳುವ ಘಟನೆಯೆಂದರೆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂತೆಂದು ಆತ್ಮಹತ್ಯೆ ಮಾಡಿಕೊಳ್ಳುವುದು. ಇದು ಒಬ್ಬ ಉತ್ತಮ ವಿದ್ಯಾರ್ಥಿಯಾದವನ ಲಕ್ಷಣವಲ್ಲ. ಇನ್ನೂ ಅನೇಕ ಅವಕಾಶಗಳಿರುತ್ತವೆ. ಅವುಗಳ ಕಡೆ ಯೋಚಿಸದೇ ಕೇವಲ ಕಡಿಮೆ ಅಂಕ ಬಂತು ಅಲ್ಲಿಗೆ ನನ್ನ ಜೀವನವೇ ಮುಗಿಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುವುದು ಅತೀ ದೊಡ್ಡ ತಪ್ಪು.
ಯಾಕೆಂದರೆ “ಸೋಲೇ ಗೆಲುವಿನ ಮೆಟ್ಟಿಲು’ ಎಂಬ ಮಾತಿನಂತೆ ಇಲ್ಲಿ ಕಡಿಮೆ ಅಂಕ ಬಂದದ್ದು ಸೋಲಲ್ಲ ಅದು ಗುರಿಯನ್ನು ತಲುಪಲು ಇನ್ನೊಂದು ಅವಕಾಶ ಎಂದು ಭಾವಿಸಿ ವಿದ್ಯಾರ್ಥಿ ಮುನ್ನಡೆಯಬೇಕು. ಆಗ ಆತ ತನ್ನ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ. ಆತ್ಮಹತ್ಯೆಯೇ ಸೋಲಿಗೆ ಪರಿಹಾರ ಎಂದುಕೊಳ್ಳುವುದು ತಪ್ಪು.
ಯಾಕೆಂದರೆ ಆತ್ಮಹತ್ಯೆ ಮಾಡಿಕೊಂಡರೆ ಮುಂದೆ ಕನಸನ್ನು ನನಸು ಮಾಡಲು ಯಾವ ಅವಕಾಶವೂ ದೊರೆಯುವುದಿಲ್ಲ. ಸ್ವಾಮಿ ವಿವೇಕಾನಂದರೇ ಹೇಳಿರುವಂತೆ “ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಅಂದರೆ ಸೋತೆ ಎಂದು ಭಾವಿಸಿ, ನನ್ನಿಂದ ಸಾಧ್ಯವಿಲ್ಲ ಎಂದು ಕುಳಿತುಕೊಳ್ಳುವ ಬದಲು ನನ್ನಿಂದ ಅಸಾಧ್ಯವಾದದ್ದು ಯಾವುದು ಇಲ್ಲ ಎಲ್ಲವೂ ಸಾಧ್ಯ ಎಂಬ ಛಲವನ್ನು ಇಟ್ಟುಕೊಂಡು ಮುಂದೆ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆದ್ದರಿಂದ ವಿದ್ಯಾರ್ಥಿಗಳಾದ ನಾವು ನಮ್ಮ ಅಮೂಲ್ಯವಾದ ಜೀವನವನ್ನು ಕೇವಲ ಒಂದು ನಕರಾತ್ಮಕ ಯೋಚನೆಯಿಂದ ಹಾಳುಮಾಡಿಕೊಳ್ಳುವುದಕ್ಕಿಂತ ಸಕಾರಾತ್ಮಕವಾಗಿ ಯೋಚನೆ ಮಾಡಿ ಪ್ರಯತ್ನ ಪಟ್ಟರೆ ಜೀವನದಲ್ಲಿ ನಮ್ಮ ಗುರಿಯನ್ನು ತಲುಪಬಹುದು.
-ದೀಪ್ತಿ ಕೋಟ್ಯಾನ್
ಚಾರ್ಮಾಡಿ