Advertisement

ಬಿಸಿಲನಾಡಿನ ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಸಂಕಷ್ಟ

06:00 AM Nov 21, 2018 | |

ಬಳ್ಳಾರಿ: ಬಿಸಿಲುನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ದಿನೇ ದಿನೆ ಹೆಚ್ಚುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಬಂದ್‌ ಆಗಿದ್ದು, ಇರುವ ಒಂದೆರಡು ಕಾರ್ಖಾನೆಗಳೂ ಕಬ್ಬು ಖರೀದಿಸುತ್ತಿಲ್ಲ. ಕಳೆದ ಎರಡು ವರ್ಷಗಳ ಹಿಂದಷ್ಟೇ ಹೊಸಪೇಟೆಯ ಐಎಸ್‌
ಆರ್‌ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು, ಇದೀಗ ಸಿರುಗುಪ್ಪದ ದೇಶನೂರು ಬಳಿಯ ಎನ್‌ಎಸ್‌ಎಲ್‌ (ನೂಜಿವೀಡು ಸೀಡ್ಸ್‌ ಲಿಮಿಟೆಡ್‌) ಸಕ್ಕರೆ ಕಾರ್ಖಾನೆ ಸಹ ಕಬ್ಬನ್ನು ಖರೀದಿಸಲು ನಿರಾಕರಿಸುತ್ತಿದ್ದು, ಕಬ್ಬು ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಕಟಾವಿಗೆ ಬಂದಿರುವ ಲಕ್ಷಾಂತರ ಟನ್‌ ಕಬ್ಬನ್ನು ಎಲ್ಲಿಗೆ ಸಾಗಿಸಬೇಕೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

Advertisement

ನಾಲ್ಕು ಕಾರ್ಖಾನೆ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಶಕಗಳಿಂದಲೂ 4 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಹತ್ತು ವರ್ಷದ ಹಿಂದೆಯೇ ಬೀಗ ಬಿದ್ದಿದೆ. ಹೊಸಪೇಟೆಯ ಐಎಸ್‌ಆರ್‌, ಸಿರುಗುಪ್ಪ ತಾಲೂಕಿನಲ್ಲಿರುವ ಎನ್‌ಎಸ್‌ಎಲ್‌, ಮೈಲಾರದಲ್ಲಿರುವ ಮೈಲಾರ ಶುಗರ್ಸ್‌ ಲಿಮಿಟೆಡ್‌ ಹೀಗೆ ಒಟ್ಟು ಮೂರು ಕಾರ್ಖಾನೆಗಳು
ಕಾರ್ಯನಿರ್ವಹಿಸುತ್ತಿದ್ದವು. ಕಳೆದ ಎರಡು ವರ್ಷಗಳ ಹಿಂದೆ ಸುಮಾರು 4 ಲಕ್ಷ ಟನ್‌ ಕಬ್ಬು ನುರಿಯುತ್ತಿದ್ದ ಹೊಸಪೇಟೆಯ
ಐಎಸ್‌ಆರ್‌ ಕಾರ್ಖಾನೆ ನಷ್ಟದ ಹಿನ್ನೆಲೆಯಲ್ಲಿ ಬಂದ್‌ ಆಗಿದೆ. ನಾಲ್ಕರಲ್ಲಿ ಎರಡು ಕಾರ್ಖಾನೆಗಳು ಮುಚ್ಚಿದರೂ ಇನ್ನೆರಡು ಇವೆ ಎಂದು ಕೊಂಡ ರೈತರು ಈ ಬಾರಿ ದೊಡ್ಡ ಸಂಕಷ್ಟಕ್ಕೆ ಈಡಾಗಿದ್ದಾರೆ.

25 ಕೋಟಿ ರೂ. ಬಾಕಿ: ಹೊಸಪೇಟೆಯ ಐಎಸ್‌ಆರ್‌ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ರೈತರು 50 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದರಲ್ಲದೆ ಪ್ರತಿವರ್ಷ ಇದೇ ಕಾರ್ಖಾನೆಗೆ ಕಬ್ಬು ನೀಡುತ್ತಿದ್ದರು. ಆದರೆ ಕಳೆದ ಒಂದು ದಶಕದಿಂದ ಕಾರ್ಖಾನೆ ಮಾಲೀಕರು, ಬೆಳೆಗಾರರಿಗೆ ಸಮರ್ಪಕವಾಗಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಆ ಮೊತ್ತ ಇದೀಗ ಸುಮಾರು 25 ಕೋಟಿ ರೂ. ದಾಟಿದೆ. ಉತ್ಪಾದನೆ ವೆಚ್ಚ ಹೆಚ್ಚಿದ್ದರಿಂದ ಕಾರ್ಖಾನೆ ನಷ್ಟದಲ್ಲಿದೆ ಎಂದು ಮಾಲೀಕರು ಕಾರಣ ನೀಡುತ್ತಿದ್ದಂತೆ ರೈತರೇ ತಮ್ಮ ಪಹಣಿ ಪತ್ರ ನೀಡಿ ಬ್ಯಾಂಕ್‌ ಮೂಲಕ 5 ಕೋಟಿ ರೂ. ಸಾಲ ಕೊಡಿಸಿದ್ದಾರೆ. ಆದರೂ, ಮಾಲೀಕರು ಕಳೆದ 2 ವರ್ಷಗಳ ಹಿಂದೆ ಕಾರ್ಖಾನೆ ಮುಚ್ಚಿದ್ದಾರೆ.

ಕಬ್ಬು ಒಣಗುವ ಭೀತಿ: ಐಎಸ್‌ಆರ್‌ ಕಾರ್ಖಾನೆ ಸ್ಥಗಿತಗೊಂಡ ನಂತರ ಹೊಸಪೇಟೆ ಭಾಗದ ರೈತರು ಸಹ ಎನ್‌ಎಸ್‌ಎಲ್‌
ಕಾರ್ಖಾನೆಯನ್ನೇ ನಂಬಿಕೊಂಡಿದ್ದರು. ಇದರೊಂದಿಗೆ ನೆರೆಯ ಆಂಧ್ರಪ್ರದೇಶದ ಕೆಲ ಭಾಗಗಳಿಂದಲೂ ಇಲ್ಲಿಗೆ ಕಬ್ಬು ಬರುತ್ತಿದ್ದು, ಕಾರ್ಖಾನೆಗೆ ಕಬ್ಬಿನ ಕೊರತೆಯೇ ಇಲ್ಲ. ಆದರೆ ಕಾರ್ಖಾನೆ ಮಾಲೀಕರೇ ಸುಸ್ತಿ ಬಾಕಿದಾರರಾಗಿದ್ದು, ನಷ್ಟದ ನೆಪವೊಡ್ಡಿ ಕಬ್ಬು ಖರೀದಿ ನಿಲ್ಲಿಸಿದ್ದಾರೆ. ಅಲ್ಲದೆ ಬೇರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುವಂತೆ ರೈತರಿಗೆ ತಿಳಿಸಿದ್ದಾರೆ. ಇದರಿಂದ ಕಾರ್ಖಾನೆ ವ್ಯಾಪ್ತಿಯ 7500 ಎಕರೆಯಲ್ಲಿ ಬೆಳೆಯಲಾದ ಸುಮಾರು 2.50 ಲಕ್ಷ ಟನ್‌ ಕಬ್ಬು ಒಣಗುವ ಭೀತಿ ಎದುರಾಗಿದೆ. ಕಾರ್ಖಾನೆ ಮಾಲೀಕರ ನಿರ್ಧಾರದಿಂದ ಬೆಳೆಗಾರರು ಈ ಬಾರಿ ನಷ್ಟ ಅನುಭವಿಸಬೇಕಾಗಿದೆ. ಅಲ್ಲದೆ ಈ ಕಾರ್ಖಾನೆಯಿಂದ ರೈತರಿಗೆ ಸುಮಾರು 3 ಕೋಟಿ ರೂ. ಬಾಕಿ ಪಾವತಿಯಾಗಬೇಕಿದೆ. ಸದ್ಯ ಇಡೀ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಮೈಲಾರದಲ್ಲಿರುವ ಮೈಲಾರ ಶುಗರ್ಸ್‌ ಲಿಮಿಟೆಡ್‌ ಕಾರ್ಖಾನೆಯೊಂದೇ ಆಶಾಕಿರಣವಾಗಿದ್ದು, ಕಟಾವು ಮಾಡಿದ ಕಬ್ಬನ್ನು ಅಲ್ಲಿ ಅಥವಾ ಬೇರೆ ಜಿಲ್ಲೆಯ ಕಾರ್ಖಾನೆಗಳಿಗೆ ಸಾಗಿಸಬೇಕಿದೆ.

ಇಂದು ಸಭೆ
ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನ.21ರ ರಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಅವರು ಸಭೆ ಕರೆದಿದ್ದು, ಅಂದು ಸಮಸ್ಯೆ ಇತ್ಯರ್ಥವಾಗಲಿದೆಯೇ ಕಾದು ನೋಡಬೇಕಾಗಿದೆ.

Advertisement

ಕಳೆದ ಹಲವು ವರ್ಷಗಳಿಂದ ರೈತರ ಕಬ್ಬನ್ನು ಖರೀದಿಸುವ ಜತೆಗೆ ಉತ್ತಮ ಸಹಕಾರ ನೀಡುತ್ತಾ ಬಂದಿದ್ದ ಎನ್‌ಎಸ್‌ಎಲ್‌ ಕಾರ್ಖಾನೆ ಮಾಲೀಕರು ಇದೀಗ ಏಕಾಏಕಿ ಸುಸ್ತಿಬಾಕಿ ಆಗಿದ್ದು, ಕಬ್ಬನ್ನು ಖರೀದಿಸಲು ಆಗಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಹಳೆಯ 3 ಕೋಟಿ ರೂ. ಬಾಕಿ ಹಣ ನೀಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಬೇರೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
● ಬೆಳಗುರ್ಕಿ ಹನಮಂತಗೌಡ, ರೈತ ಹೋರಾಟಗಾರ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next