Advertisement

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

12:46 AM Dec 23, 2024 | Team Udayavani |

ಮಂಡ್ಯ: 30 ವರ್ಷಗಳ ಅನಂತರ 3ನೇ ಬಾರಿಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಅದ್ದೂರಿ ವಿದಾಯ ಹೇಳಿದೆ. ಮೂರೂ ದಿನದಲ್ಲಿ ಒಟ್ಟು 7 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಕನ್ನಡ ತೇರನ್ನು ಎಳೆಯುವಲ್ಲಿ ಕೈಜೋಡಿಸಿದ್ದಾರೆ.

Advertisement

ಹಿಂದಿ ಹೇರಿಕೆಗೆ ವಿರೋಧ, ತಂತ್ರಜ್ಞಾನದಲ್ಲಿ ಕನ್ನಡ ಸೇರಿದಂತೆ ಹಲವು ಕನ್ನಡದ ಅಸ್ಮಿತೆಗಾಗಿ ಹಲವು ಆಯಾಮಗಳಲ್ಲಿ ಚರ್ಚೆ ನಡೆದಿವೆ. ರಾಷ್ಟ್ರಕವಿ ಘೋಷಣೆ, ಶಿಕ್ಷಕರ ನೇಮಕ ಸೇರಿದಂತೆ 5 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂದಿನ ಸಮ್ಮೇಳನ ಗಣಿನಾಡು ಬಳ್ಳಾರಿಯಲ್ಲಿ ನಿಗದಿಯಾಗಿದ್ದು, ಎಲ್ಲರ ದೃಷ್ಟಿ ಅತ್ತ ನೆಟ್ಟಿದೆ.

ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಾಗಿರುವ ಮಂಡ್ಯದ ಸಮ್ಮೇಳನಕ್ಕೆ ಅಪೂರ್ವ ಬೆಂಬಲ ಸಿಕ್ಕಿದೆ. ಇಡೀ ಜಿಲ್ಲೆಯ ಜನರು ಸಮ್ಮೇಳನ ಯಶಸ್ಸಿಗೆ ಕೈಜೋಡಿಸಿದ್ದು ವಿಶೇಷವಾಗಿತ್ತು.

ಪುಸ್ತಕ ಮಳಿಗೆಗಳಿಗೆ 1.5 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 65 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ. ಆದರೆ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ಪೇಮೆಂಟ್‌ಗಳಿಗೆ ತೊಡಕಾಗಿದ್ದು, ಶೇ. 30ರಷ್ಟು ಪುಸ್ತಕ ಮಾರಾಟ ಕುಸಿತ ಕಂಡಿದೆ. ಮುಂದಿನ ಸಮ್ಮೇಳನಗಳಲ್ಲಾದರೂ ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ನಿವಾರಣೆ ಮಾಡಬೇಕು ಎಂದು ಪ್ರಕಾಶಕರು, ಪುಸ್ತಕ ಮಳಿಗೆಯವರು ಆಗ್ರಹಿಸಿದ್ದಾರೆ.

ದಿನವಿಡೀ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯ ಕ್ರಮಗಳು, ಸಂಗೀತ ರಸಸಂಜೆ ಗಮನ ಸೆಳೆದವು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಗಮಿಸಿ ಕನ್ನಡ ಜಾತ್ರೆಯನ್ನು ಕಣ್ತುಂಬಿಕೊಂಡರು. ವಾಣಿಜ್ಯ ಮಳಿಗೆಗಳಲ್ಲಿಯೂ ಭರ್ಜರಿ ವ್ಯಾಪಾರ ನಡೆದಿದೆ.

Advertisement

6 ಲಕ್ಷಕ್ಕೂ ಅಧಿಕ ಮಂದಿಗೆ ಊಟ
ವಿವಿಧೆಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿಗೆ ಜಿಲ್ಲೆಯ ಆತಿಥ್ಯದಲ್ಲೂ ಯಾವುದೇ ಲೋಪವಾಗದಂತೆ ಆಯೋಜಕರು ನೋಡಿಕೊಂಡರು. ಸಾರ್ವಜನಿಕರಿಗಾಗಿ ತೆರೆದಿದ್ದ 100 ಊಟದ ಕೌಂಟರ್‌ಗಳಲ್ಲಿ 3 ದಿನಗಳ ಕಾಲ ಬೆಳಗ್ಗೆ, ಮಧ್ಯಾಹ್ನ, ರಾತ್ರಿಯಂತೆ ಸುಮಾರು 6 ಲಕ್ಷಕ್ಕೂ ಅಧಿಕ ಮಂದಿ ಮಂಡ್ಯದ ಆತಿಥ್ಯ ಸ್ವೀಕರಿಸಿದ್ದಾರೆ. ಮೊದಲ ದಿನ ಅಂದಾಜು 3 ಲಕ್ಷ, ಎರಡನೇ ದಿನ 2.30 ಲಕ್ಷ, ಮೂರನೇ ದಿನ ಮಧ್ಯಾಹ್ನದವರೆಗೆ 1.75 ಲಕ್ಷ ಮಂದಿ ಹಾಗೂ ಸಂಜೆ ಸುಮಾರು 1.50 ಲಕ್ಷ ಮಂದಿ ಊಟ ಮಾಡಿದ್ದಾರೆಂದು ಅಂದಾಜಿಸಲಾಗಿದೆ ಎಂದು ಅಡುಗೆ ಗುತ್ತಿಗೆದಾರ ಅನಿಲ್‌ ತಿಳಿಸಿದರು. ದಕ್ಷಿಣ ಹಾಗೂ ಉತ್ತರ ಕರ್ನಾಟಕ ಶೈಲಿಯ ಊಟ ಬಡಿಸಲಾಗಿತ್ತು.

-ಎಚ್‌. ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next