ಬೆಂಗಳೂರು: ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ನಿವೃತ್ತ ಅಧಿಕಾರಿ ಮತ್ತು ನೌಕರರ ನಿವೃತ್ತಿ ವೇತನ ಹಾಗೂ ಸೌಲಭ್ಯಗಳ ನಿಗದಿ ಮತ್ತು ಬಿಡುಗಡೆ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನನ್ವಯ ಮುಂಬಡ್ತಿ ಅಥವಾ ಹಿಂಬಡ್ತಿಗೊಳಗಾಗಿ ವಯೋನಿವೃತ್ತಿ ಹೊಂದಿರುವ ಅಧಿಕಾರಿ ಹಾಗೂ ನೌಕರರಿಗೆ ನಿವೃತ್ತಿ ವೇತನ ನಿಗದಿಪಡಿಸಿ ಇದುವರೆಗೂ ನಿವೃತ್ತಿ ಸೌಲಭ್ಯಗಳನ್ನು ಬಿಡುಗಡೆ ಮಾಡಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್, ಕಾನೂನು ಮತ್ತು ಆರ್ಥಿಕ ಇಲಾಖೆಯ ಸಹಮತಿ ಪಡೆದು ಬಿ.ಕೆ. ಪವಿತ್ರಾ ಪ್ರಕರಣದ ನಂತರ ನಿವೃತ್ತಿ ಹೊಂದುವ ಮತ್ತು ಹೊಂದಿರುವ ಅಧಿಕಾರಿ, ನೌಕರರಿಗೆ ನಿವೃತ್ತಿ ಸೌಲಭ್ಯಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶದಲ್ಲಿ ಸೂಚಿಸಿದ್ದಾರೆ.
“ಬಿ.ಕೆ ಪವಿತ್ರಾ ಪ್ರಕರಣದಲ್ಲಿ 2017ರ ಫೆ.9ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಇನ್ನೂ ನಿವೃತ್ತಿ ವೇತನ ನಿಗದಿ ಮಾಡದಿರುವ ಪ್ರಕರಣಗಳಲ್ಲಿ ಮಾತ್ರ, ಮುಂಬಡ್ತಿಗೊಂಡ ಅಧಿಕಾರಿ ಅಥವಾ ನೌಕರರು ವಯೋನಿವೃತ್ತರಾದ ಪ್ರಕರಣಗಳಲ್ಲಿ ಮುಂಬಡ್ತಿ ಹೊಂದಿದ ಹುದ್ದೆಯಲ್ಲಿ ತಾತ್ಕಾಲಿಕ ನಿವೃತ್ತಿ ವೇತನ ನಿಗದಿಗೊಳಿಸಬೇಕು. ಹಿಂಬಡ್ತಿಗೊಂಡು ನಿವೃತ್ತರಾದ ಎಲ್ಲ ಅಧಿಕಾರಿ, ನೌಕರರು ಹಿಂಬಡ್ತಿಗೊಳ್ಳುವುದಕ್ಕೆ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಯಲ್ಲಿ ತಾತ್ಕಾಲಿಕ ನಿವೃತ್ತಿ ವೇತನವನ್ನು ನಿಗದಿಗೊಳಿಸಿ ಸುಪ್ರೀಂಕೋರ್ಟ್ ಆದೇಶದನ್ವಯ ಮುಂಬಡ್ತಿ ಮತ್ತು ಹಿಂಬಡ್ತಿಯಿಂದ ಪಾವತಿಸಬೇಕಾದ ವ್ಯತ್ಯಾಸದ ಮೊತ್ತವನ್ನು ಡಿ.ಸಿ.ಆರ್.ಜಿ ಮೊತ್ತದಿಂದ ಕಡಿತಗೊಳಿಸಬೇಕು. ನಿವೃತ್ತಿ ವೇತನ ಬಿಡುಗಡೆ ಮಾಡಲು ಅಗತ್ಯ ಮುಚ್ಚಳಿಕೆಯನ್ನು ಮುಂಬಡ್ತಿ, ಹಿಂಬಡ್ತಿಗೊಂಡು ನಿವೃತ್ತರಾದ ನೌಕರರಿಂದ ಪಡೆದು ತಾತ್ಕಾಲಿಕ ನಿವೃತ್ತಿ ವೇತನ ನಿಗದಿಪಡಿಸಿ ಬಿಡುಗಡೆ ಮಾಡುವುದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಸುಪ್ರಿಂಕೋರ್ಟ್‌ನ ಆದೇಶ ಪಾಲಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂಬುದರ ಭಾಗವಾಗಿ ಈ ಆದೇಶ ಹೊರಡಿಸಲಾಗಿದೆ. ಈ ಆದೇಶದಿಂದ ಎಷ್ಟು ಮಂದಿಗೆ ಅನುಕೂಲ ಅಥವಾ ಅನನುಕೂಲ ಆಗುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಏಕೆಂದರೆ, ಸರ್ಕಾರದ ಯಾವುದೇ ಆದೇಶಗಳು ಸುಪ್ರೀಂಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಡುತ್ತವೆ. ಅಷ್ಟಕ್ಕೂ ಸೆ.5ರಂದು ಪ್ರಕರಣ ವಿಚಾರಣೆಗೆ ಬರಲಿದ್ದು, ಆ ದಿನದ ವಿಚಾರಣೆಯ ಫಲಿತಾಂಶದ ಮೇಲೆ ಈ ಆದೇಶ ಅವಲಂಬಿತವಾಗಿದೆ ಎಂದು ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಬಿ.ಕೆ. ಪವಿತ್ರಾ ಹೇಳುತ್ತಾರೆ.