ರೋಮೆ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ಘಟನೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಫೆಬ್ರುವರಿ 26ರಂದು ಮುಂಜಾನೆ ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಶ್ ಎ ಮುಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರದ ಬಾಂಬ್ ದಾಳಿ ನಡೆಸಿತ್ತು. ಏತನ್ಮಧ್ಯೆ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ನಿಜಕ್ಕೂ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ? ಯಾವೆಲ್ಲ ಪ್ರಮುಖ ಉಗ್ರರು ಹತರಾಗಿದ್ದಾರೆ? ಎಷ್ಟು ಕೆಜಿ ಬಾಂಬ್ ಹಾಕಲಾಗಿತ್ತು..ಹೀಗೆ ಆ ಹಿನ್ನೆಲೆಯಲ್ಲಿ ಫಸ್ಟ್ ಪೋಸ್ಟ್ ಜಾಲತಾಣಕ್ಕೆ ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ಮಾಹಿತಿಯ ಸಂಕ್ಷಿಪ್ತ ವಿವರ ಓದಿ…
ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಭಾರತೀಯ ಸೇನೆ ದಾಳಿ ನಡೆಸಿದ ಕೆಲವೇ ಹೊತ್ತಿನಲ್ಲಿ ನಾವು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವು. ಆದರೆ ಅಷ್ಟರಲ್ಲಿ ಪಾಕ್ ಸೇನೆ ದಾಳಿ ನಡೆದ ಪ್ರದೇಶವನ್ನು ಸುತ್ತುವರಿದು ತನ್ನ ಸುಪರ್ದಿಗೆ ತೆಗೆದುಕೊಂಡು ಬಿಟ್ಟಿತ್ತು. ಸ್ಥಳೀಯ ಪೊಲೀಸರಿಗೂ ಒಳಪ್ರವೇಶಿಸಲು ಅವಕಾಶ ಕೊಟ್ಟಿರಲಿಲ್ಲ. ಅಷ್ಟೇ ಅಲ್ಲ ಮೆಡಿಕಲ್ ಸ್ಟಾಪ್ ಮತ್ತು ಆ್ಯಂಬುಲೆನ್ಸ್ ಸಿಬ್ಬಂದಿಗಳ ಮೊಬೈಲ್ ಫೋನ್ ಗಳನ್ನೂ ಕೂಡಾ ಸೇನೆ ವಶಪಡಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.
35 ಶವಗಳನ್ನು ನೋಡಿದ್ದೇನೆ:
ಭಾರತೀಯ ವಾಯುಪಡೆಯ ದಾಳಿಯಲ್ಲಿ ಪಾಕ್ ಐಎಸ್ ಐನ ನಿವೃತ್ತ ಅಧಿಕಾರಿ, ಕರ್ನಲ್ ಸಲೀಂ ಸಾವಿಗೀಡಾಗಿದ್ದ. ಕರ್ನಲ್ ಝರಾರ್ ಝಾಕ್ರಿ ಘಟನೆಯಲ್ಲಿ ಗಾಯಗೊಂಡಿದ್ದ, ಜೈಶ್ ಎ ಮುಹಮ್ಮದ್ ಸಂಘಟನೆಯ ತರಬೇತುದಾರ ಮುಫ್ತಿ ಮೋಯಿನ್, ಐಇಡಿ ತಜ್ಞ ಉಸ್ಮಾನ್ ಗನಿ ಬಾಂಬ್ ದಾಳಿಗೆ ಬಲಿಯಾಗಿದ್ದ ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.
ತಾತ್ಕಾಲಿಕವಾಗಿ ನಿರ್ಮಿಸಿದ್ದ ಮರದ ಕಟ್ಟಡದಲ್ಲಿದ್ದ ಸುಮಾರು 12 ಮಂದಿ ಜೈಶ್ ಸಂಘಟನೆಯ ಆತ್ಮಾಹುತಿ ತರಬೇತುದಾರರು ಕೂಡಾ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ.
ದಾಳಿ ನಡೆದ ಕೆಲ ಹೊತ್ತಿನಲ್ಲಿ ಪಾಕ್ ಸೇನೆ ಆ್ಯಂಬುಲೆನ್ಸ್ ಗಳಲ್ಲಿ ಉಗ್ರರ ಶವಗಳನ್ನು ಸಾಗಿಸಿತ್ತು. ತಾನು ಸುಮಾರು 35 ಉಗ್ರರ ಶವಗಳನ್ನು ಕಂಡಿರುವುದಾಗಿ ತಿಳಿಸಿದ್ದಾನೆ. ಸಾವನ್ನಪ್ಪಿದವರಲ್ಲಿ ಕೆಲವು ಈ ಹಿಂದೆ ಪಾಕ್ ಸೇನೆಯಲ್ಲಿ ಸೇವೆ ಸಲ್ಲಿಸಿರುವುದಾಗಿಯೂ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ. ಭಾರತ ಬಾಂಬ್ ಎಸೆದಿದ್ದು ಬಾಲಕೋಟ್ ನ ಜಾಬಾ ಗ್ರಾಮಕ್ಕೆ ಸೇರಿದ್ದು, ಈ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರಿಗೂ ಗಾಯಗಳಾಗಿತ್ತು ಎಂದು ವರದಿ ತಿಳಿಸಿದೆ.