Advertisement

Doddaballapur: ಘಾಟಿ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದಲ್ಲಿ ವಿಜೃಂಭಣೆಯ ಬ್ರಹ್ಮ ರಥೋತ್ಸವ

05:56 PM Jan 16, 2024 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.ರಾಜ್ಯದ ವಿವಿದೆಡೆಗಳಿಂದ ಹಾಗೂ ನೆರೆ ರಾಜ್ಯದಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ರಥಕ್ಕೆ ಹೂವು ಹಣ್ಣು ಸಮರ್ಪಿಸಿ ಧನ್ಯತೆ ಮೆರೆದರು.

Advertisement

ದೇವಾಲಯದಲ್ಲಿ ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಹೂ ಅಲಂಕಾರ, ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ವಿದ್ಯುತ್ ದೀಪಾಲಂಕಾರದ ಕಟೌಟ್‍ಗಳು ಗಮನ ಸೆಳೆದವು. ಬೆಳಗಿನ ಜಾವ ಸ್ವಾಮಿಗೆ ವಿವಿಧ ಅಭಿಷೇಕ ಮಾಡಿ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಮಧ್ಯಾಹ್ನ 12.30 ಗಂಟೆಗೆ ಬ್ರಹ್ಮ ರಥೋತ್ಸವವು ನೆರವೇರಿತು. ಶ್ರೀ ಸುಬ್ರಹ್ಮಣ್ಯಸ್ವಾಮಿಯ ದರ್ಶನ ಪಡೆಯಲು ಬೆಳಗಿನಿಂದಲೇ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಷಷ್ಠಿಯ ದಿನದಂದು ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೊಡ್ಡಬಳ್ಳಾಪುರ,ಚಿಕ್ಕಬಳ್ಳಾಪುರ,ಕೋಲಾರ,ಗೌರಿಬಿದನೂರು ಬೆಂಗಳೂರು ಕಡೆಗಳಿಂದ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಭಕ್ತ ಮಂಡಲಿಗಳಿಂದ ಅರವಂಟಿಗೆ ಹಾಗೂ ಅನ್ನ ಸಂತರ್ಪಣೆಗಳನ್ನು ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಫೆ.14 ರವರೆಗೆ ರಾಜಬೀದಿ ಉತ್ಸವಗಳಿವೆ. ಫೆ.14 ರಂದು ತೆಪ್ಪೋತ್ಸವ, ಫೆ.15ರಂದು ಕುಮಾರ ಷಷ್ಠಿಯಿದೆ.

ಘಾಟಿ ಕ್ಷೇತ್ರ ವಿಶೇಷ :

Advertisement

ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ನರಸಿಂಹಸ್ವಾಮಿ ಮೂರ್ತಿಗಳು ಏಕಶಿಲೆಯಲ್ಲಿರುವ ಬಹು ಅಪರೂಪದ ದೃಶ್ಯವಿರುವ ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ಪೌರಾಣಿಕ ಹಿನ್ನಲೆಯಿಂದಲೂ ಮಹತ್ವ ಪಡೆದಿದೆ. ತಾರಕಾಸುರ ಸಂಹಾರಕ್ಕಾಗಿ ಸ್ವಾಮಿಯು ಅಪರಿಮಿತ ಶಕ್ತಿ ಗಳಿಸಲು ಘೋರ ತಪಸ್ಸು ಮಾಡಲು ಸರ್ಪ ರೂಪವನ್ನು ತಾಳಿ, ಕೊನೆಗೆ ನಿಜರೂಪ ಪಡೆಯಲು ನರಸಿಂಹಸ್ವಾಮಿಯನ್ನು ಆಲಂಗಿಸಿ ಇಬ್ಬರೂ ಈ ಕ್ಷೇತ್ರದಲ್ಲಿಯೇ ನೆಲೆಸಲು ಪ್ರೇರಣೆಯಾಗಿದೆ ಎಂದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ. ಸ್ವಾಮಿಗೆ ಸರ್ಪರೂಪದಿಂದ ನಿಜರೂಪ ಪ್ರಾಪ್ತಿಯಾಗಲು ಪಾರ್ವತಿ ಷಷ್ಠಿ ವ್ರತವನ್ನು ಕೈಗೊಳ್ಳುವ ಹಿನ್ನಲೆಯಲ್ಲಿ ಷಷ್ಠಿ ದಿನವು ಸ್ವಾಮಿಯ ವಿಶೇಷ ಪೂಜೆಗೆ ಪ್ರಶಸ್ತವಾಗಿದೆ. ಜಾತ್ರೆಯ ಒಂದು ತಿಂಗಳ ನಂತರ ಬರುವ ಕುಮಾರ ಷಷ್ಠಿಯ ದಿನದಂದೂ ಸಹ ಸಹಸ್ರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಹಾಗೂ ದನಗಳ ಜಾತ್ರೆಗೆ ಘಾಟಿ ಕ್ಷೇತ್ರ ಪ್ರಸಿದ್ದಿಯಾಗಿದ್ದು,

ಕ್ಷೇತ್ರದಲ್ಲಿ ಕಳೆದ 15ದಿನಗಳ ಹಿಂದೆಯಷ್ಟೇ ದನಗಳ ಜಾತ್ರೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next