Advertisement

ಮುಖ್ಯಾಧಿಕಾರಿಗಳ ಗೈರಿಗೆ ಪುರಸಭೆ ಸದಸ್ಯರ ತೀವ್ರ ಆಕ್ರೋಶ

03:17 PM Jul 12, 2017 | |

ಬಸವನಬಾಗೇವಾಡಿ: ವಾರ್ಡ್‌ಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದ ಪುರಸಭೆ ಸಾಮಾನ್ಯ ಸಭೆಗೆ ಮುಖ್ಯಾಧಿಕಾರಿ ಗೈರಾಗಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಂಗಳವಾರ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರಾದ ಪರಶುರಾಮ ಅಡಗಿಮನಿ, ಪ್ರವೀಣ ಪವಾರ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಚರ್ಚಿಸಬೇಕಾಗಿದೆ. ಹಲವಾರು ಬಾರಿ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕುರಿತು ಗಂಭೀರ ಚರ್ಚೆಯ ಅಗತ್ಯವಿದೆ. ಇಂತಹ ಮಹತ್ವದ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಸಭೆಗೆ ಗೈರಾಗಿರುವುದು ಸರಿಯಲ್ಲ. ನಮ್ಮ ಸಮಸ್ಯೆಗಳ ಬಗ್ಗೆ  ಉತ್ತರ ನೀಡುವರು ಯಾರು? ಸಭೆಯನ್ನು ಒಂದು ವಾರ ಮುಂದೂಡುವಂತೆ ಆಗ್ರಹಿಸಿದಾಗ ಉಳಿದ ಬಿಜೆಪಿ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

ನಿಮ್ಮ ಯಾವುದೇ ಸಮಸ್ಯೆಯಿದ್ದರೂ ನಾನು ಪರಿಹರಿಸುವುದಾಗಿ ಸದಸ್ಯರಿಗೆ ಪುರಸಭೆ ಅಧ್ಯಕ್ಷ ಬಸವರಾಜ ತುಂಬಗಿ ಭರವಸೆ ನೀಡಿದರು. ಏಪ್ರಿಲ್‌ ಮತ್ತು ಮೇ ತಿಂಗಳ ಜಮಾ ಖರ್ಚಿನ ಮಾಹಿತಿ ಪುಸ್ತಕವನ್ನು ಒಂದು ವಾರ ಮುಂಚೆ ನೀಡಬೇಕು.
ಇಂದಿನ ಸಭೆಯಲ್ಲಿ ಜಮಾ ಖರ್ಚಿನ ಮಾಹಿತಿ ಪುಸ್ತಕ ನೀಡಿರುವುದೇಕೆ ? ಈ ಬಗ್ಗೆ ಅಧ್ಯಯನ ಮಾಡುವುದಾದರೂ ಹೇಗೆ ? ಪ್ರಶ್ನೆ ಯಾವಾಗ ಕೇಳಬೇಕು ? ಬರಿ ಹಾರಿಕೆಯ ಉತ್ತರ ನೀಡಿದರೆ ಸಾಲದು ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಪಟ್ಟಣದಲ್ಲಿ ಕೆಲವು ತಿಂಗಳದಿಂದ
ಪ್ರಮುಖ ರಸ್ತೆಯಲ್ಲಿ ವಿದ್ಯುತ್‌ ದೀಪವಿಲ್ಲ.

ಬಸವನಬಾಗೇವಾಡಿ ಪಟ್ಟಣ ಕತ್ತಲಲ್ಲಿದೆ. ಈ ಬಗ್ಗೆ ಸಂಬಂಧಿದ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ಹೇಳಿದರೂ ಬೀದಿ ದೀಪ ಹಾಕುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಬಿಜೆಪಿ ಸದಸ್ಯ ಶ್ರೀಕಾಂತ ನಾಯಕ ವಿಷಯ ಪ್ರಸ್ತಾಪಿಸಿದರು. ಪ್ರಮುಖ ರಸ್ತೆಯಲ್ಲಿ ಅಲ್ಲದೇ ಪಟ್ಟಣದ ವಿವಿಧ ವಾರ್ಡ್‌ಗಳಲ್ಲೂ ಕೂಡಾ ವಿದ್ಯುತ್‌ ತಂತಿಗಳು ಮತ್ತು ಬೋರ್ಡ್‌ ಕೆಟ್ಟಿವೆ. ವಿದ್ಯುತ್‌ ಕಂಬದ ಬಳಿ ಹೋದರೆ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ಹಲವು ಬಾರಿ ಮುಖ್ಯಾಧಿಕಾರಿಗಳಿಗೆ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಸದಸ್ಯ ಪರಶುರಾಮ ಅಡಗಿಮನಿ ಹೇಳಿದರು. ಕೆಲವು ಬಡಾವಣೆಗಳ ಉದ್ಯಾನವನದ 
ಜಾಗೆಯಲ್ಲಿ ಕೆಲ ಸಾರ್ವಜನಿಕರು ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ತೆರವುಗೊಳಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಸದಸ್ಯ ವಿಶ್ವನಾಥ ನಿಡಗುಂದಿ ಮಾತನಾಡಿ, ಪಟ್ಟಣದ ಕೆಲವು ಬಡಾವಣೆಗಳ ಉದ್ಯಾನವನದ ಜಾಗೆಯಲ್ಲಿ ಅಕ್ರಮವಾಗಿ ಮನೆ ಹಾಕಿಕೊಂಡಿದ್ದಾರೆ. ತಾರತಮ್ಯ ಮಾಡದೇ ಮನೆ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಬೇಕು. ಹಾರಿಕೆ ಉತ್ತರ ನೀಡದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. 

Advertisement

ಇಂದಿನ ಸಭೆ ಕೇವಲ ಕಾಟಾಚಾರಕ್ಕೆ ನಡೆದಂತೆ ಭಾಸವಾಗಿದ್ದು, ಕೆಲ ಸದಸ್ಯರ ಮಧ್ಯೆ ನೀವು ಕಳಪೆ ಮಟ್ಟದ ಕಾಮಗಾರಿ ಮಾಡಲಾಗಿದೆ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಳಪೆ ಕಾಮಗಾರಿ ಕುರಿತು ಸಮಗ್ರ ತನಿಖೆ ನಡೆಯಲಿ.
ಅಭಿವೃದ್ಧಿ ಕಾರ್ಯ ಹಾಗೂ ಇತರೆ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಯುವ ಬದಲು ಪರಸ್ಪರ ಆರೋಪ-ಪ್ರತ್ಯಾರೋಪವೇ ಸಭೆಯಲ್ಲಿ ಕೇಳಿಬಂದಿತು. ಆಡಳಿತ ಹಾಗೂ ವಿರೋಧ ಪಕ್ಷದವರ ಮಾತಿನ ಚಕಮಕಿಯಿಂದ ಸಭೆಯ ಬಹು ಸಮಯ ವ್ಯರ್ಥಗೊಂಡಿತಲ್ಲದೇ ಪುರಸಭೆ ಮುಖ್ಯಾಧಿಕಾರಿಗಳು ಸಭೆಗೆ ಹಾಜರಾಗಿ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಇಲ್ಲದಿದ್ದರೆ ಸಾಮಾನ್ಯ ಸಭೆ ನಡೆಸುವುದು ವ್ಯರ್ಥವಾಗುತ್ತದೆ ಎಂದು ಸದಸ್ಯರು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next