ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ದಾಖಲಾತಿ ಅವಧಿಯನ್ನು ವಿಸ್ತರಣೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ದಂಡಶುಲ್ಕ ರಹಿತವಾಗಿ ಜುಲೈ 11ರವರೆಗೆ ದಾಖಲಾತಿ ದಿನಾಂಕ ವಿಸ್ತರಿಸಲಾಗಿದೆ.
ಈ ಹಿಂದೆ ದಾಖಲಾತಿ ದಿನಾಂಕವನ್ನು ದಂಡ ಶುಲ್ಕವಿಲ್ಲದೆ ಜೂನ್ 15ರವರೆಗೆ ಮತ್ತು ದಂಡ ಶುಲ್ಕದೊಂದಿಗೆ ಜೂ.30ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಸಿಬಿಎಸ್ಇ ಮತ್ತು ಐಸಿಎಸ್ ಸಿ ಬೋರ್ಡ್ ಗಳಲ್ಲಿ 10ನೇ ತರಗತಿಯ ಫಲಿತಾಂಶ ಪ್ರಕಟಣೆ ವಿಳಂಬವಾದ ಕಾರಣ ದಾಖಲಾತಿ ದಿನಾಂಕ ವಿಸ್ತರಿಸಲು ಪೋಷಕರು ಒತ್ತಾಯಿಸಿದ್ದರು. ಹೀಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.
ದಾಖಲಾತಿ ವಿಸ್ತರಣೆ ದಿನಾಂಕವು ಪ್ರಥಮ ಪಿಯುಸಿ ಗೆ ಮಾತ್ರ ಅನ್ವಯವಾಗಲಿದ್ದು, ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕ ಈ ಹಿಂದಿನ ಸೂಚನೆಯಂತೆಯೇ ಇರಲಿದೆ.
ಇದನ್ನೂ ಓದಿ:ನಾಡಹಬ್ಬವಾಗಿ ಕಯ್ಯಾರ ಜನ್ಮದಿನ ಮುಂದಿನ ವರ್ಷದಿಂದ ಆಚರಣೆ: ಡಾ| ಸೋಮಶೇಖರ್
ಪ್ರಥಮ ಪಿಯುಸಿ ದಾಖಲಾತಿಗೆ ದಂಡ ಶುಲ್ಕವಿಲ್ಲದೆ ಜುಲೈ 11 ಕೊನೆಯ ದಿನಾಂಕವಾಗಿರಲಿದೆ. 670 ರೂ ದಂಡದೊಂದಿಗೆ ಜುಲೈ 18ರವರೆಗೆ ದಾಖಲಾತಿ ಮಾಡಬಹುದು. ವಿಶೇಷ ದಂಡ 2890 ರೂ ಗಳೊಂದಿಗೆ ಜುಲೈ 25ರವರೆಗೆ ಪ್ರಥಮ ಪಿಯುಸಿಗೆ ದಾಖಲಾತಿ ಮಾಡಬಹುದಾಗಿದೆ.