ಗುಂಡ್ಲುಪೇಟೆ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ 157 ಕೋಟಿ ರೂ. ವೆಚ್ಚದಲ್ಲಿ ಕಬಿನಿಯಿಂದ ಗುಂಡ್ಲುಪೇಟೆಗೆ ಎಕ್ಸ್ ಪ್ರಸ್ ಲೈನ್ ಮೂಲಕ ನೀರು ತರುವ ವ್ಯವಸ್ಥೆ ಮಾಡಲಾಗಿದ್ದು, ಟೆಂಡರ್ ಹಂತ ಮುಗಿಸಿ ಇನ್ನೂ ಆರು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ಶಾಸಕ ಸಿ.ಎಸ್ .ನಿರಂಜನಕುಮಾರ್ ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4ರ ಯೋಜನೆಯಡಿ ಸುಮಾರು 10 ಕೋಟಿ ರೂ. ವೆಚ್ಚದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ನಂತರ ಪಟ್ಟಣದ ವೀರಮದಕರಿನಾಯಕ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಪಟ್ಟಣಕ್ಕೆ ದೊಡ್ಡ ಪ್ರಮಾಣದ ಅನುದಾನ: ಹಲವು ವರ್ಷದಿಂದ ಕೆಲಸ ಆಗಿಲ್ಲ ಎಂದು 23 ವಾರ್ಡ್ ಸದಸ್ಯರು ಹೇಳುತ್ತಿದ್ದರು. ಇಂದು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರಾಜಪಥ ರಸ್ತೆ ಕಾಂಕ್ರಿಟೀಕರಣವಾಗುತ್ತಿದೆ. ಜೊತೆಗೆ ವಿವಿಧ ವಾಡ್ ìಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ವಾರ್ಡ್‌ಗಳಲ್ಲಿ ಅವಶ್ಯಕತೆ ಇದ್ದ ಕಡೆ ಅನುದಾನ ಹಾಕಲಾಗಿದೆ. ಪಟ್ಟಣದ ಹೆದ್ದಾರಿಯಲ್ಲಿ ಮಾತ್ರ ಉತ್ತಮ ರಸ್ತೆ ಇತ್ತು. ಆದರೆ ಒಳ ಭಾಗದ ರಸ್ತೆಗಳು ಹಾಳಾಗಿದ್ದವು. ಹಿಂದಿನವರು ಇಚ್ಛಾಶಕ್ತಿ ಕೊರತೆಯಿಂದ ಕೆಲಸ ಮಾಡಿರಲಿಲ್ಲ. ಆದರೆ ನಾನು ಶಾಸಕರನಾದ ನಂತರ ಗುಂಡ್ಲುಪೇಟೆ ಪಟ್ಟಣಕ್ಕೆ ದೊಡ್ಡ ಪ್ರಮಾಣದ ಅನುದಾನ ತಂದಿದ್ದೇವೆ ಎಂದು ತಿಳಿಸಿದರು.
ಗುಂಡ್ಲುಪೇಟೆಯಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆಟೋದಲ್ಲಿ ಮನೆ ಮನೆಗೆ ತೆರಳಿ ಹಸಿ ಹಾಗೂ ಒಣ ಕಸವನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಯೂಜಿಡ್ ಲೈನ್, ಸ್ಲಂ ಬೋರ್ಡ್ ವತಿಯಿಂದ ಮನೆ ಕಟ್ಟುವವರಿಗೆ ಪುರಸಭೆಯಿಂದ ವಂತಿಕೆಯನ್ನು ಕೊಡಲಾಗುತ್ತಿದೆ. ಜೊತೆಗೆ ಸ್ಲಂನಲ್ಲಿ ವಾಸ ಮಾಡುವವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಈ ಮೂಲಕ ಎಲ್ಲಾ ಕೆಲಸಗಳು ವ್ಯವಸ್ಥಿತವಾಗಿ ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನುದಾನ ತಂದು ಕೆಲಸ ಮಾಡಬೇಕು: ಕೇವಲ ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ಅನುದಾನ ತಂದು ಕೆಲಸ ಮಾಡಬೇಕು. ಬಾಬೂಜಿ, ವಾಲ್ಮೀಕಿ ಭವನ ಅರ್ಧಕ್ಕೆ ನಿಂತಿದ್ದವು ಈಗ ಪೂರ್ಣ ಗೊಳ್ಳುತ್ತಿವೆ. ಆದರಿಂದ ನಾವು ಕೆಲಸ ಮಾಡಿ ಮಾತನಾಡುತ್ತಿದ್ಧೆವೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಇಂದು ಅನೇಕ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಪಟ್ಟಣಕ್ಕೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಅನೇಕ ಕೆಲಸಗಳು ನಮ್ಮ ಕಾಲದ್ದು ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. ಆದರೆ ಈಗ ನಾವು ಮಾಡಿದ್ದನ್ನು ಹಿಂದೆ ನಾವು ಮಾಡಿರುವುದು ಎನ್ನುವುದು ಮೂರ್ಖತನ. ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ರಾಜಕೀಯ ಮಾಡಿದ್ದರು. ಆದರೆ ಇಂದು ಎಲ್ಲಾ ಕೆರೆಗಳು ತುಂಬಿ ಕೋಡಿ ಬಿದ್ದಿದೆ. ಆ ಕಾರಣಕ್ಕೆ ಅಂತರ್ಜಲ ವೃದ್ಧಿಯಾಗಿ ಪಟ್ಟಣದಲ್ಲಿ ಎಲ್ಲೇ ಬೋರ್ ಹಾಕಿದರು ನೀರು ಬರುತ್ತಿದೆ ಎಂದು ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ವಿಶೇಷ ಕಾಳಜಿ: ಗಿರೀಶ್ : ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಕ್ಷೇತ್ರದ ಶಾಸಕರು ಮತ್ತು ಪಟ್ಟಣದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿವುಳ್ಳ ಸಿ.ಎಸ್ .ನಿರಂಜನಕುಮಾರ್ ಅವರು 80 ಕೋಟಿಗೂ ಹೆಚ್ಚು ಅನುದಾನ ಕೊಡಿಸಿದ್ದಾರೆ. ಗುದ್ದಲಿಪೂಜೆ ಮೂಲಕ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ದೊರೆತಿರುವುದು ಖುಷಿಯ ವಿಚಾರ ಎಂದರು.
ಇದಕ್ಕೂ ಮೊದಲು ಪಟ್ಟಣದ ಅಶ್ವಿನಿ ಬಡವಾಣೆಯಲ್ಲಿ 60 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ, ಕೆ.ಎಸ್ .ನಾಗರತ್ನಮ್ಮ ರಸ್ತೆ ಹಾಗೂ ಚರಂಡಿ ನಿರ್ಮಾಣ, ಬರಗಿ ಅಶ್ವಿನಿ ಬಡಾವಣೆಯ ಗಣೇಶ ದೇವಸ್ಥಾನದ ರಸ್ತೆ ನಿರ್ಮಾಣ, ಮಾರಿಗುಡಿ ಬೀದಿ-ಶಾರದಾಂಬೆ ದೇವಸ್ಥಾನದ ಹತ್ತಿರದ ರಸ್ತೆ ನಿರ್ಮಾಣ, ಕೊತ್ಪಾಲ್ ಚಾವಡಿ ಹತ್ತಿರ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಎಸ್ .ನಿರಂಜನಕುಮಾರ್ ಚಾಲನೆ ನೀಡಿದರು.