Advertisement

ಕರಾವಳಿಯಲ್ಲಿ ಭತ್ತದ ಕೃಷಿ ಹೆಚ್ಚಳ ನಿರೀಕ್ಷೆ; ಹಿಂಗಾರು ಹಂಗಾಮಿಗೆ ವರವಾದ ಮಳೆ

02:31 AM Dec 23, 2021 | Team Udayavani |

ಕುಂದಾಪುರ: ಮುಂಗಾರು ಹಂಗಾಮಿನ ಭತ್ತದ ಕೃಷಿಗೆ ಒಂದು ರೀತಿಯಲ್ಲಿ ಶಾಪವಾಗಿ ಪರಿಣಮಿಸಿದ್ದ ಮಳೆ, ಹಿಂಗಾರು ಹಂಗಾಮಿನಲ್ಲಿ ಮಾತ್ರ ವರವಾದಂತೆ ಕಂಡು ಬರುತ್ತಿದೆ. ಈ ಬಾರಿ ಕರಾವಳಿ ಜಿಲ್ಲೆಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿದ ಭತ್ತದ ನಾಟಿ ಕಾರ್ಯ ನಡೆಯುವ ಸಾಧ್ಯತೆಗಳಿವೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ಒಟ್ಟು 8,584 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಗುರಿ ಹೊಂದಲಾಗಿದೆ. ಈವರೆಗೆ ಉಡುಪಿಯಲ್ಲಿ 2,526 ಹೆಕ್ಟೇರ್‌ ಹಾಗೂ ದ.ಕ.ದಲ್ಲಿ 879 ಹೆ. ಸೇರಿ ಒಟ್ಟಾರೆ 3,405 ಹೆಕ್ಟೇರ್‌ ನಾಟಿ ಪೂರ್ಣಗೊಂಡಿದೆ. ಇನ್ನೂ ತಿಂಗಳ ಕಾಲ ಕೆಲವೆಡೆ ನಾಟಿ ಕಾರ್ಯ ನಡೆಯಲಿರುವುದರಿಂದ ಗುರಿ ಮೀರುವ ನಿರೀಕ್ಷೆಯಿದೆ.

Advertisement

ಹೆಚ್ಚಳಕ್ಕೆ ಕಾರಣ
ಹಿಂಗಾರು ಹಂಗಾಮಿನಲ್ಲಿ ಬಹುತೇಕ ಕಡೆ ಹೆಚ್ಚಾಗಿ ನೀರಿನ ಸಮಸ್ಯೆ ತಲೆದೋರುತ್ತದೆ. ಆದರೆ ಈ ಬಾರಿ ನಿರಂತರ ಮಳೆಯಿಂದಾಗಿ ಈ ಸಮಸ್ಯೆ ಇಲ್ಲ.

ಹೀಗಾಗಿ ಹೆಚ್ಚಿನ ರೈತರು ಎರಡನೇ ಬೆಳೆಗೆ ಮುಂದಾಗಿದ್ದಾರೆ. ಇದರ ಜತೆ ಮುಂಗಾರು ಹಂಗಾಮಿನಲ್ಲಿ ಉಂಟಾದ ನಷ್ಟ ಭರಿಸುವ ಉದ್ದೇಶವೂ ಇದೆ. ಇನ್ನು ದ್ವಿದಳ ಧಾನ್ಯ ಬೆಳೆಗೆ ಗದ್ದೆಗಳಲ್ಲಿ ನೀರಿದ್ದರೆ ಕಷ್ಟ. ಅದರ ಬದಲು ಭತ್ತವೇ ಉತ್ತಮ ಎನ್ನುವ ಯೋಚನೆಯೂ ಕೆಲವರಲ್ಲಿದೆ.

ಇದನ್ನೂ ಓದಿ:ಕುಂದಾಪುರ: ಕ್ರಿಸ್ಮಸ್‌ ಪ್ರಾರ್ಥನೆಗೆ ಶರತ್ತುಬದ್ಧ ಅನುಮತಿ

ದ್ವಿದಳ ಧಾನ್ಯ ಇಳಿಮುಖ
ಕರಾವಳಿ ಜಿಲ್ಲೆಗಳಲ್ಲಿ ಮುಂಗಾರಿನಲ್ಲಿ ಭತ್ತದ ಬೆಳೆಗೆ ಪ್ರಾಶಸ್ತ್ಯ ನೀಡಿದರೆ, ಹಿಂಗಾರು ಹಂಗಾಮಿನಲ್ಲಿ ಉದ್ದು, ಹೆಸರು, ಹುರುಳಿ, ಅವರೆ, ಅಲಸಂಡೆ, ಎಳ್ಳು ಮೊದಲಾದ ಧಾನ್ಯಗಳನ್ನು ಬೆಳೆಯುವತ್ತ ರೈತರು ಆಸಕ್ತಿ ತೋರುತ್ತಾರೆ. ಆದರೆ ಈ ಬಾರಿ ದ.ಕ. ಜಿಲ್ಲೆಯಲ್ಲಿ 20 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣದಲ್ಲಿ ಬೆಳೆದಿದ್ದರೆ, ಉಡುಪಿ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. 3,690 ಹೆ. ಗುರಿಯಿದ್ದು, ಈವರೆಗೆ 1,149 ಹೆ.ನಲ್ಲಿ ದ್ವಿದಳ ಧಾನ್ಯ ಬೆಳೆಯಲಾಗಿದೆ. ಇನ್ನು ಕುಂದಾಪುರ, ಬೈಂದೂರು, ಕೋಟ ಹೋಬಳಿಯಲ್ಲಿ ಮಾತ್ರ ಬೆಳೆಯುವ ನೆಲಗಡಲೆ 2 ಸಾವಿರ ಹೆಕ್ಟೇರ್‌ ಗುರಿಯಿದ್ದು, ಈವರೆಗೆ ಕೇವಲ 150 ಹೆಕ್ಟೇರ್‌ ಬಿತ್ತನೆಯಾಗಿದೆ.

Advertisement

ಮುಂಗಾರಿನಲ್ಲಿ ನಷ್ಟ 237 ಹೆ.ಗೂ ಅಧಿಕ
ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ನವೆಂಬರ್‌ ತನಕ ಒಟ್ಟು 85.096 ಹೆಕ್ಟೇರ್‌ ಭತ್ತದ ಬೆಳೆ ಹಾನಿಯಾಗಿದೆ. ಅಂತೆಯೇ ಉಡುಪಿ ಜಿಲ್ಲೆ ಯಲ್ಲಿ 319 ರೈತರ 152.02 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿಯಾಗಿದೆ.

ಹೆಚ್ಚಳ ಸಾಧ್ಯತೆ
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಭತ್ತದ ಕೃಷಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆಗಾಗ ಸುರಿಯುವ ಮಳೆಯಿಂದಾಗಿ ಬಹುತೇಕ ಕಡೆ ನೀರಿನ ಸಮಸ್ಯೆ ಇಲ್ಲ. ಈಗಾಗಲೇ ಅಗತ್ಯದಷ್ಟು ಬಿತ್ತನೆ ಬೀಜ ವಿತರಿಸಲಾಗಿದೆ. ನಾಟಿ ಕಾರ್ಯವೂ ಭರದಿಂದ ನಡೆಯುತ್ತಿದೆ.
– ಎಚ್‌. ಕೆಂಪೇಗೌಡ, ಸೀತಾ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ ಹಾಗೂ ದ.ಕ.

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next