Advertisement

ನಷ್ಟದ ಕಂಪೆನಿಗಳಿಂದ 1 ಲಕ್ಷ ಕೋಟಿ ನಿರೀಕ್ಷೆ 

11:09 AM May 21, 2018 | Team Udayavani |

ಹೊಸದಿಲ್ಲಿ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ಸವಾಲಾಗಿರುವ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ತಗ್ಗಿಸಲು ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ನಷ್ಟ ಅನುಭವಿಸುತ್ತಿದ್ದ ಭೂಷಣ್‌ ಸ್ಟೀಲ್ಸ್‌ನ ಶೇ.72.65ರಷ್ಟು ಪಾಲನ್ನು ಟಾಟಾ ಸಮೂಹ ಸಂಸ್ಥೆ 36 ಸಾವಿರ ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ಇದೇ ಮಾದರಿ ಮೂಲಕ ಮುಂದಿನ ದಿನಗಳಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿದೆ ಕೇಂದ್ರ ಸರಕಾರ.

Advertisement

ಭಾರತೀಯ ರಿಸರ್ವ್‌ ಬ್ಯಾಂಕ್‌ ಜಾರಿ ಮಾಡಿದ ದಿವಾಳಿ ಘೋಷಣೆ ನೀತಿ (ಐಬಿಸಿ)ಯ ಅನ್ವಯ 12 ಪ್ರಮುಖ ಪ್ರಕರಣಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಭೂಷಣ್‌ ಸ್ಟೀಲ್ಸ್‌, ಭೂಷಣ್‌ ಪವರ್‌, ಎಸ್ಸಾರ್‌ ಸ್ಟೀಲ್‌, ಜೇಪಿ ಇನ್ಫ್ರಾಟೆಕ್, ಲಾಂಕೋ ಇನ್ಫ್ರಾಟೆಕ್‌ ಲಿಮಿಟೆಡ್‌, ಮೊನ್ನೆಟ್‌ ಇಸಾ#ಟ್‌ ಆ್ಯಂಡ್‌ ಎನರ್ಜಿ, ಜ್ಯೋತಿ ಸ್ಟ್ರಕ್ಚರ್ಸ್‌ ಲಿಮಿಟೆಡ್‌, ಇಲೆಕ್ಟ್ರೋ ಸ್ಟೀಲ್‌ ಲಿಮಿಟೆಡ್‌, ಆ್ಯಮ್ಟೆಕ್‌ ಲಿಮಿಟೆಡ್‌ ಸೇರಿದಂತೆ ಒಟ್ಟು 12 ಕಂಪೆನಿಗಳಿಂದ ಒಟ್ಟು 1.75 ಲಕ್ಷ ಕೋಟಿ ರೂ. ಸಂಗ್ರಹದ ಲೆಕ್ಕಾಚಾರ ಹಾಕಿಕೊಂಡಿದೆ. 

ಕೋಲ್ಕತಾದಲ್ಲಿರುವ ರಾಷ್ಟ್ರೀಯ ಕಂಪೆನಿ ಕಾಯ್ದೆ ಮೇಲ್ಮನವಿ ಪ್ರಾಧಿಕಾರದ ಶಾಖೆ ಇಲೆಕ್ಟ್ರೋ ಸ್ಟೀಲ್‌ನ ಷೇರುಗಳನ್ನು ವೇದಾಂತ ಸ್ಟೀಲ್‌ಖರೀದಿ ಮಾಡುವ ಪ್ರಸ್ತಾಪಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಹೀಗೆ ಲಾಭದಲ್ಲಿರುವ ಕಂಪೆನಿಗಳು ನಷ್ಟದಲ್ಲಿರುವ ಕಂಪೆನಿಗಳ ಪಾಲು ಖರೀದಿ ಮಾಡುವ ಪ್ರಕ್ರಿಯೆಯಿಂದ ದೇಶದ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ತಲೆನೋವಾಗಿರುವ ಅನುತ್ಪಾದಕ ಆಸ್ತಿ ಪ್ರಮಾಣ ತಗ್ಗಿಸಲು ಕೊಂಚವಾದರೂ ನೆರವಾಗಲಿದೆ ಎನ್ನುವುದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳ ಅಂಬೋಣ. 

ಪಿಎನ್‌ಬಿಗೆ ಅನುಕೂಲ
ನೀರವ್‌ ಮೋದಿ, ಮೆಹುಲ್‌ ಚೋಸ್ಕಿ 13 ಸಾವಿರ ಕೋಟಿ ರೂ. ವಂಚಿಸಿ ಪರಾರಿಯಾದ ಬಳಿಕ ಸಂಕಷ್ಟಕ್ಕೆ ಒಳಗಾಗಿರುವ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ ಭೂಷಣ್‌ ಸ್ಟೀಲ್‌ ಅನ್ನು ಟಾಟಾ ಸಮೂಹ ಸಂಸ್ಥೆ ಖರೀದಿ ಮಾಡಿರುವುದು ಕೊಂಚ ಅನುಕೂಲವಾಗಲಿದೆ. ಆ ಕಂಪೆನಿ ಬ್ಯಾಂಕ್‌ಗೆ 3,857.49 ಕೋಟಿ ರೂ. ಮರು ಪಾವತಿಸಬೇಕಿದೆ. ಇದರಿಂದ, ಬ್ಯಾಂಕ್‌ಗೆ 3,050 ಕೋಟಿ ರೂ.ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next