ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ತಗ್ಗಿಸಲು ರಸ್ತೆ ಅಗಲೀಕರಣ ಮಾಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಯೋಜನಾ ವರದಿಯನ್ನು ಕೂಡಲೇ ಸಿದ್ಧಪಡಿಸುವುದಾಗಿಯೂ ಅವರು ಹೇಳಿದ್ದಾರೆ. ಇದರ ಜತೆಗೆ ಏರ್‌ಪೋರ್ಟ್ ಕಡೆಯಿಂದ ಬರುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ, ಪರಿಹಾರ ಸಿಕ್ಕಂತಾಗುತ್ತದೆ ಎಂದು ನಗರ ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಿಂತಿದ್ದ ಯೋಜನೆಗಳು ಶೀಘ್ರ ಜಾರಿ
ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ನಿಯಂತ್ರಿಸಲು ಬಿಬಿಎಂಪಿಯಿಂದ ರಸ್ತೆ ವಿಸ್ತರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಉಕ್ಕಿನ ಸೇತುವೆ ಯೋಜನೆಗೂ ಮೊದಲು ಪಾಲಿಕೆಯಿಂದ ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆಗಳ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಭೂ ಸ್ವಾಧೀನ ವಿಚಾರದಲ್ಲಿ ಗೊಂದಲಗಳು ಏರ್ಪಟ್ಟ ಹಿನ್ನೆಲೆಯಲ್ಲಿ ಯೋಜನೆ ಜಾರಿಯಾಗುವುದು ವಿಳಂಬವಾಗಿದೆ.
ಸದ್ಯ ಎಲ್ಲ ಗೊಂದಲಗಳು ಬಗೆಹರಿದ್ದು, ಶೀಘ್ರದಲ್ಲಿಯೇ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸುಪ್ರೀಂ ಕೋಟ್ ಹಾಗೂ ಹೈಕೋರ್ಟ್ ರಸ್ತೆ ವಿಸ್ತರಣೆ ಮಾಡುವಂತೆ ಪಾಲಿಕೆಗೆ ಆದೇಶಿಸಿವೆ. ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಲಾಗಿದೆ. ಹಾಗಾಗಿ ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಂಡು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಾಗುವುದು. ಇದರೊಂದಿಗೆ ಹೆಚ್ಚಿನ ಮರಗಳಿಗೆ ಹಾನಿಯಾಗದಂತೆ ಯೋಜನೆ ಕೈಗೊಳ್ಳಲಾಗುವುದು.
ಸದ್ಯ ದಂಡು ರೈಲ್ವೆ ನಿಲ್ದಾಣದಿಂದ ಮೇಖ್ರೀ ವೃತ್ತ ಹಾಗೂ ಬಿಡಿಎಯಿಂದ ಮೇಖ್ರೀ ವೃತ್ತದವರಿಗೆ ಪಾಲಿಕೆಯಿಂದ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮೇಖ್ರೀ ವೃತ್ತದಿಂದ ಹೆಬ್ಟಾಳದವರೆಗಿನ ರಸ್ತೆಯನ್ನು ಪರಿಶೀಲಿಸಿ ಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು. ಆ ನಂತರದಲ್ಲಿ ಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮೇಖ್ರೀ ವೃತ್ತದಿಂದ ಹೆಬ್ಟಾಳದವರೆಗಿನ ರಸ್ತೆ ಬದಿಯಲ್ಲಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆ ತಲೆದೂರುವುದಿಲ್ಲ. ಹೀಗಾಗಿ ಮೊದಲು ಎರಡೂ ರಸ್ತೆಗಳ ವಿಸ್ತರಣೆ ಪೂರ್ಣಗೊಳಿಸಿ ಆನಂತರದಲ್ಲಿ ಸಾಧ್ಯತಾ ವರದಿಗೆ ಮುಂದಾಗುತ್ತೇವೆ.
* ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ