Advertisement

ಅಭ್ಯರ್ಥಿಗಳ ಗೆಲ್ಲಿಸಲು ಮುಖಂಡರ ಕಸರತ್ತು

09:33 PM Oct 29, 2019 | Team Udayavani |

ಕೊಳ್ಳೇಗಾಲ: ಚುನಾವಣಾ ಆಯೋಗ ಪಟ್ಟಣದ 19ನೇ ವಾರ್ಡಿಗೆ ಉಪ ಚುನಾವಣೆ ದಿನಾಂಕ ನಿಗದಿ ಮಾಡಿ ಆದೇಶದ ಪ್ರಕಟಣೆ ಹೊರಡಿಸುತ್ತಿದ್ದಂತೆ ಯಾವುದೇ ಚಟುವಟಿಕೆ ಇಲ್ಲದೇ ಎಲೆಮರೆಕಾಯಿಯಂತಿದ್ದ ವಿವಿಧ ರಾಜಕೀಯ ಮುಖಂಡರು ಚುಟುವಟಿಕೆಯಲ್ಲಿ ತೊಡಗಿ ಚುನಾವಣೆ ರಂಗೇರಿದೆ.

Advertisement

ಪಟ್ಟಣದ 19ನೇ ವಾರ್ಡಿನ ಸುಧಾ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ಕ್ಯಾನ್ಸರ್‌ನಿಂದ ನಿಧನರಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿ ಪ್ರಕಟಣೆ ಹೊರಡಿಸಿದ ಪರಿಣಾಮ ರಾಜಕೀಯ ಪಕ್ಷದ ಮುಖಂಡರಲ್ಲಿ ಸಂಚಲನ ಉಂಟಾಗಿ, ಗೆಲ್ಲುವ ಕುದುರೆಯನ್ನು ಕಣಕ್ಕಿಳಿಸಲು ಎಲ್ಲಿಲ್ಲದ ಸರ್ಕಸ್‌ನಲ್ಲಿ ನಡೆಸುತ್ತಿದ್ದಾರೆ.

ಕಳೆದ ವರ್ಷ ನಗರಸಭೆಗೆ ನಡೆದ ಚುನಾವಣೆಯಲ್ಲಿ ಪಟ್ಟಣದ 31 ವಾರ್ಡುಗಳ ಪೈಕಿ ಕಾಂಗ್ರೆಸ್‌ 11, ಬಿಜೆಪಿ 7, ಬಿಎಸ್ಪಿ 9, ಪಕ್ಷೇತರ 4 ಸ್ಥಾನಗಳನ್ನು ಹೊಂದಿ ಆಯ್ಕೆಗೊಂಡಿದ್ದರು. ಚುನಾವಣಾ ಆಯೋಗ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ ವೇಳೆ ಅಧ್ಯಕ್ಷರ ಸ್ಥಾನ ಬಿಸಿಎಂ ಬಿ ಮಹಿಳೆ ಎಂದು ಘೋಷಣೆಯಾಗಿತ್ತು.

ಆದರೆ ಕಾಂಗ್ರೆಸ್‌ನಲ್ಲಿ 19ನೇ ವಾರ್ಡಿನಲ್ಲಿ ಜಯಗಳಿಸಿದ್ದ ಸುಧಾ ಅಧ್ಯಕ್ಷರಾಗಲು ಏಕೈಕ ಅಭ್ಯರ್ಥಿಯಾಗಿ ಗದ್ದುಗೆ ಏರುವ ಹಂತದಲ್ಲಿ ಕ್ಷೇತ್ರದ ಶಾಸಕರು ಮೀಸಲಾತಿ ಬದಲಾವಣೆಗೆ ನ್ಯಾಯಾಲಯದ ಮೆಟ್ಟಿಲು ಏರಿದ ಕಾರಣ ಇದುವರೆಗೂ ಅಧ್ಯಕ್ಷರ ಆಯ್ಕೆಗೆ ಕಂಟಕ ಉಂಟಾಗಿ, ಅಧ್ಯಕ್ಷೆಯಾಗಬೇಕಾಗಿದ್ದ ಅಭ್ಯರ್ಥಿ ಅನಾರೋಗ್ಯದಿಂದ ಮೃತಪಟ್ಟು, ಸ್ಥಾನ ತೆರವಾಗುವಂತೆ ಆಗಿತ್ತು.

ಮತ್ತಷ್ಟು ಕಾವು: ಪಟ್ಟಣದ 19ನೇ ವಾರ್ಡಿನಲ್ಲಿ ಬಿಸಿಎಂ ಬಿ ಮಹಿಳೆಗೆ ಸೇರಿದ ಅಭ್ಯರ್ಥಿ ಯಾವ ಪಕ್ಷದಿಂದ ಗೆಲ್ಲುತ್ತಾರೋ ಅವರೇ ಅಧ್ಯಕ್ಷರಾಗುವ ಸೂಚನೆ ಇದ್ದು, ಅಧ್ಯಕ್ಷರ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ವಾರ್ಡಿಗೆ ಬಂದಿರುವ ಉಪ ಚುನಾವಣೆ ಮತ್ತಷ್ಟು ಕಾವು ಪಡೆಯುತ್ತಿದೆ.

Advertisement

ಮತದಾರರ ವಿವರ: ಪಟ್ಟಣದ 19ನೇ ವಾರ್ಡಿನ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಲಿಂಗಾಯತರು 450, ಮುಸ್ಲಿಂ 230, ಪ.ಜಾತಿ 80, ಕ್ರಿಶ್ಚಿಯನ್‌ 30, ದೇವಾಂಗ 20, ಈಡಿಗ 40, ಆಚಾರ್‌ 70, ಉಪ್ಪಾರ 30, ಬ್ರಾಹ್ಮಣ 50 ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 1300 ಮತದಾರರು ಇರುವ ಕ್ಷೇತ್ರವಾಗಿದೆ. ಲಿಂಗಾಯತ ಸಮಾಜ ಒಲೈಸಿದ ಅಭ್ಯರ್ಥಿ ಗೆಲುವು ಖಚಿತವಾಗಿದೆ.

ನ.12ಕ್ಕೆ ಚುನಾವಣೆ: ನ.12ಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿಯಾಗಿದ್ದು, ಅ.31ರಂದು ನಾಮಪತ್ರ ಸಲ್ಲಿಸುವ ಕೊನೆ ದಿನದ್ದು, ನ.2ರಂದು ನಾಮಪತ್ರ ಪರಿಶೀಲನೆ, ನ.4ರಂದು ನಾಮಪತ್ರ ವಾಪಸ್‌ ಪಡೆಯಲು ಅವಕಾಶವಿದ್ದು, ನ.12ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ.

ಕಳೆದ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾದಿಸಿದ್ದ ಹಿನ್ನೆಲೆ ಸ್ಥಾನ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿ, ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಸಮೂಹ ನಾಯಕತ್ವದಲ್ಲಿ ಹೋರಾಟ ನಡೆಸಿ ಕಳೆದುಕೊಂಡಿರುವ ಸ್ಥಾನವನ್ನು ಮತ್ತೆ ಪಡೆದು ಕೊಳ್ಳುವ ತಂತ್ರಗಾರಿಕೆಯಲ್ಲಿ ತೊಡಗಿ ಮೇಲಿಂದ ಮೇಲೆ ರಹಸ್ಯ ಸಭೆಗಳನ್ನು ನಡೆಸಿ, ಇಬ್ಬರು ಅಭ್ಯರ್ಥಿಗಳನ್ನು ಸಿದ್ಧಪಡಿಸಿಕೊಂಡು ಬಲಿಪಾಡ್ಯಮಿ ದಿನ ಸಂಜೆ ವೇಳೆಗೆ ಅಭ್ಯರ್ಥಿ ಘೋಷಣೆಗೆ ಸಿದ್ಧಪಡಿಸಿಕೊಂಡಿದ್ದಾರೆ.

ವಿವಿಧ ಪಕ್ಷದ ಮುಂಚೂಣಿಯಲ್ಲಿರುವ ಅಭ್ಯರ್ಥಿಗಳು: ಆಡಳಿತರೂಢ ಬಿಜೆಪಿಯಿಂದ ಪಂಕಜಾ ಜಿ.ಪಿ.ಶಿವಕುಮಾರ್‌, ಪದ್ಮವೀರಣ್ಣ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಎಂಟು ಜನರು ಅರ್ಜಿ ಸಲ್ಲಿಸಿದ್ದು, ನಗರಸಭಾ ಮಾಜಿ ಸದಸ್ಯೆ ಸುಮಾಸುಬ್ಬಣ್ಣ, ಪ್ರಿಯಾಂಕ ಮಹದೇವಸ್ವಾಮಿ ಹೆಸರು ಚಾಲ್ತಿಯಲ್ಲಿದೆ.

ಬಿಎಸ್ಪಿಯಿಂದ ಗೆದ್ದು ಶಾಸಕರಾದ ಎನ್‌.ಮಹೇಶ್‌ ಪಕ್ಷದಿಂದ ಉಚ್ಚಾಟನೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸರಸ್ವತಿರನ್ನು ಕಣಕ್ಕೆ ಇಳಿಸಲು ಸಜ್ಜಾಗಿದ್ದಾರೆ. ಬಿಎಸ್ಪಿ ವತಿಯಿಂದಲೂ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾದು ನೋಡುವ ತಂತ್ರವನ್ನು ಅನುಸರಿಸಿದೆ. ಜೆಡಿಎಸ್‌ನಿಂದ ನಾಜಿಯಾ ಬಾನು, ನಸೀಮಾ, ಸಲ್ಮಾ ಅಸ್ಮತ್‌ ಅವರಲ್ಲಿ ಒಬ್ಬರನ್ನು ಕಣಕ್ಕೆ ಇಳಿಸುವ ತಂತ್ರದಲ್ಲಿ ತೊಡಗಿದ್ದಾರೆ.

19ನೇ ವಾರ್ಡಿಗೆ ಉಪ ಚುನಾವಣೆ ನಿಗದಿಯಾಗಿದ್ದು, ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ, ಶತಾಯಗತಾಯ ಹೋರಾಟ ನಡೆಸಿ, ಗೆಲುವು ಸಾಧಿಸುವುದೇ ನನ್ನ ಗುರಿ.
-ಎನ್‌.ಮಹೇಶ್‌, ಶಾಸಕ

ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ, ಅಭ್ಯರ್ಥಿಯ ಪರ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌, ಮಾಜಿ ಶಾಸಕರಾದ ಎಸ್‌.ಜಯಣ್ಣ, ಎಸ್‌.ಬಾಲರಾಜ್‌, ಜಿಲ್ಲೆಯ ಕಾಂಗ್ರೆಸ್‌ ಪ್ರಭಾವಿ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು.
-ಎ.ಆರ್‌.ಕೃಷ್ಣಮೂರ್ತಿ, ಮಾಜಿ ಶಾಸಕ

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 100ಕ್ಕೂ ನೂರರಷ್ಟು ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಪ್ರಧಾನಿ ಮೋದಿಯವರ ಆಡಳಿತ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರ ಆಡಳಿತ ವೈಖರಿಯಿಂದ ಸ್ಥಾನವನ್ನು ಗೆದ್ದೇ ಗೆಲ್ಲುವ ವಿಶ್ವಾಸವಿದೆ.
-ಜಿ.ಎನ್‌.ನಂಜುಂಡಸ್ವಾಮಿ, ಮಾಜಿ ಶಾಸಕ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next