ಹೊಸದಿಲ್ಲಿ : ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಎಲ್ಲ ನಾಲ್ವರು ಅಪರಾಧಿಗಳನ್ನು ಎರಡು ವಾರಗಳ ಒಳಗೆ ನೇಣಿಗೇರಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಗುರುವಾರ ವಜಾ ಮಾಡಿದೆ.
ವಕೀಲ ಎ ಎ ಶ್ರೀವಾಸ್ತವ ಅವರು ನಿರ್ಭಯಾ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ನಾಲ್ವರು ಅಪರಾಧಿಗಳಿಗೆ ಎರಡು ವಾರಗಳ ಒಳಗೆ ನೇಣು ಶಿಕ್ಷೆಯನ್ನು ಜಾರಿ ಮಾಡುವಂತೆ ಸರಕಾರಕ್ಕೆ ನಿರ್ದೇಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ನೇಣು ಶಿಕ್ಷೆ ಜಾರಿ ವಿಳಂಬದಿಂದಾಗಿ ದೇಶದಲ್ಲಿ ಅತ್ಯಾಚಾರಿಗಳಿಗೆ ಭಯವೇ ಇಲ್ಲವಾಗಿದೆ; ಪತ್ರಿಕೆಗಳಲ್ಲಿ ನಿರಂತರವಾಗಿ ಅತ್ಯಾಚಾರದ ವರದಿಗಳು ಪ್ರಕಟವಾಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಶ್ರೀವಾಸ್ತವ ಅವರು ತಮ್ಮ ಮನವಿಯಲ್ಲಿ ಹೇಳಿದ್ದರು.
ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಅಪರಾಧಿಗಳೆಂದರೆ ಮುಕೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್.
ಈ ಅಪರಾಧಿಗಳು ತಮ್ಮ ನೇಣು ಶಿಕ್ಷೆಯ ತೀರ್ಪಿನ ಪುನರ್ ಪರಿಶೀಲನೆ ಕೋರಿದ ಅರ್ಜಿ ವಜಾಗೊಂಡು ನಾಲ್ಕೂವರೆ ತಿಂಗಳೇ ಸಂದಿರುವುದರಿಂದ ಇನ್ನಷ್ಟು ತಡ ಮಾಡದೇ ಇವರನ್ನು ಎರಡು ವಾರಗಳ ಒಳಗೆ ನೇಣಿಗೇರಿಸುವಂತೆ ವಕೀಲ ಶ್ರೀವಾಸ್ತವ ಕೋರಿದ್ದರು.