Advertisement
ಮುಂದೊಂದು ದಿನ ಪದವಿ ಪತ್ರ ಗಿಟ್ಟಿಸಿಕೊಂಡು ಹೀಗೆ ಮನೆ ತಲುಪಿದವರಲ್ಲಿ ಯಾರು ಯಾರನ್ನು ಎಷ್ಟು ಕಾಲ ನೆನಪಿಸಿಕೊಳ್ಳುತ್ತಾರೋ? ಸಂಪರ್ಕದಲ್ಲಿರುತ್ತಾರೋ ಗೊತ್ತಿಲ್ಲ. ಬದುಕಿನ ಬಂಡಿ ನಿಲ್ಲುವುದೇ? ಇಲ್ಲವಲ್ಲ. ಈ ಎಲ್ಲಾ ಮಂದಿ ಒಂದು ದೊಡ್ಡ ಬಾಂಬ್ ಸಿಡಿದಂತೆ ಪ್ರಪಂಚದ ಮೂಲೆ ಮೂಲೆಗೂ ಚದುರಿ ಹೋಗಿ ಬಿಡುತ್ತಾರೆ. ತಮ್ಮ ತಮ್ಮ ಕಾಯಕಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಡೀ ಕ್ಲಾಸಿಗಾಗುವಾಗ ಬಹುತೇಕ ಮಂದಿಗೆ ಯಾರು ಎಲ್ಲಿದ್ದಾರೆಂದೇ ಅರಿಯದ ಸ್ಥಿತಿ. ಯಾರೂ ಅರಿಯುವ ಗೋಜಿಗೂ ಹೋಗುವವರಿಲ್ಲ!
Related Articles
Advertisement
ಹೀಗಾಗಿ, ಬಹಳ ಅಪರೂಪದ “ಪುನರ್ಮಿಲನ’ ಮಾದರಿ ಕಾರ್ಯಕ್ರಮವೊಂದು ಎಂಜಿಎಂ ಕಾಲೇಜಿನ ಗೀತಾಂಜಲಿ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ದೂರದ ಬೆಂಗಳೂರು, ಮುಂಬೈ, ಡೆಲ್ಲಿ ಸಹಿತ ವಿದೇಶಗಳಲ್ಲಿದ್ದವರೂ ಸೇರಿ ಕಾರು, ಬಸ್ಸು, ರೈಲು, ವಿಮಾನ ಏರಿ, ಹಾರಿ ಬಂದರೆ ಕಾಲೇಜು ಪಕ್ಕದ ಊರಿನಲ್ಲಿದ್ದವರು ದ್ವಿಚಕ್ರಿಗಳಾಗಿ, ಪಾದಾಚಾರಿಗಳಾಗಿ ಬಂದು ಸೇರಿಕೊಂಡರು. ಬೆಳಗಿನ ಉಪಾಹಾರದ ಬಳಿಕ ಪ್ರಾರ್ಥನೆ, ಕೇಕ್ ಕತ್ತರಿಸುವುದರೊಂದಿಗೆ, ಕಲಾಪ ಆರಂಭ.
ಸೇರಿದ ಗುರು-ಶಿಷ್ಯರಲ್ಲಿ ಅಳುಕಿಲ್ಲ, ಅಂಜಿಕೆಯಿರಲಿಲ್ಲ. ಶಿಷ್ಯರುಗಳು ಬಾಗಿ ಗುರುಗಳ ಪಾದಗಳಿಗೆರಗಿ ಶರಣಾದರೆ, ಗುರುಗಳು ಇಂದಿನ ದಿನ ಸುದಿನವೆಂದು ಬೀಗಿದರು. ಮನಸಾರೆ ಒಡನಾಡಿದರು. ಗುರುಗಳು ಹಾಡಿದರು, ಶಿಷ್ಯರು ಕುಣಿದರು. ಮನದಣಿಯೆ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ, ಕುಶಾಲು ತೋಪುಗಳನ್ನು ಹಾರಿಸುತ್ತಾ ನಕ್ಕು ಹಗುರಾದರು.
ಇಷ್ಟೆಲ್ಲವನ್ನೂ ಆಯೋಜಿಸಿದ ಶಿಷ್ಯರ ಕನಸುಗಳು ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ಅವರು “ಪುನರ್ಮಿಲನ’ 33 ವರ್ಷಗಳ ಬಳಿಕ 1984-2017 ಎಂಬ ನೂತನ ಹೊತ್ತಗೆಯನ್ನೂ ಬಿಡುಗಡೆಗೊಳಿಸಿದರು.
ಅದರಲ್ಲಿ ಎಲ್ಲಾ ಗೆಳೆಯರ ಭಾವಚಿತ್ರಗಳು, ಅವರವರ ವ್ಯಕ್ತಿಗತ ಸ್ಥಾನಮಾನ, ಕುಟುಂಬದ ವಿವರಗಳನ್ನು ನಮೂದಿಸಿದರು. 1984ರ ವಿದಾಯ ಪಾರ್ಟಿಯ ಚಿತ್ರ ಸಹಿತ ಇಂದಿನ ಗುರುವಂದನೆಯ ವರೆಗಿನ ಚಿತ್ರಗಳನ್ನು ಅದಕ್ಕೆ ಸೇರಿಸಿದರು.
ಸಂಜೆ ಭವ್ಯ ಹೊಟೇಲೊಂದರಲ್ಲಿ ಔತಣ ಕೂಟವನ್ನೂ ಏರ್ಪಡಿಸಿದ ಈ ಶಿಷ್ಯರುಗಳು ಖರ್ಚು ಭರಿಸಲು ವಂತಿಗೆ ವಸೂಲು ಮಾಡಿದ್ದರು. ಉಳಿಕೆ ಹಣವನ್ನು ಬಡ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿ ಮಾದರಿಯೆನಿಸಿದರು! ಈ ಸಂಗತಿ ಇತರರಿಗೂ ಸ್ಫೂರ್ತಿಯಾದರೆ ಎಷ್ಟು ಚೆನ್ನ!
ರಾಜಗೋಪಾಲ ರಾವ್ ಎಂಜಿಎಂ ಕಾಲೇಜು, ಉಡುಪಿ