ಹುಬ್ಬಳ್ಳಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಯಿಂದ 18,050 ಕೋಟಿ ರೂ. ರಾಜಸ್ವ ನಿರೀಕ್ಷಿಸಲಾಗಿದ್ದು, ಈವರೆಗೆ 11,271 ಕೋಟಿ ರೂ. ಸಂಗ್ರಹವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು. ನವನಗರದ ಅಬಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಈವರೆಗೆ ಶೇ.78ರಷ್ಟು ರಾಜಸ್ವ ಸಂಗ್ರಹಗೊಂಡಿದೆ. ಕಳೆದ ವರ್ಷ 16,510 ಕೋಟಿ ರೂ. ರಾಜಸ್ವ ಸಂಗ್ರಹಗೊಂಡಿತ್ತು ಎಂದರು.ಕಳ್ಳಭಟ್ಟಿ ಸಾರಾಯಿ ಹಾವಳಿ ತಡೆಯುವ ಹಾಗೂ ನೆರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಸ್ಪಿರಿಟ್ ಸಾಗಾಣಿಕೆ ತಡೆಯುವ ಕುರಿತು ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ಇಲಾಖೆ ವತಿಯಿಂದ 60,000 ಲೀಟರ್ ಸ್ಪಿರಿಟ್ ಸಾಗಿಸುತ್ತಿದ್ದ ವಾಹನವನ್ನು ಪತ್ತೆ ಮಾಡಿ 7 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಕಳ್ಳಭಟ್ಟಿ ಸಾರಾಯಿ ಮೇಲೆ ನಿಯಂತ್ರಣ ಸಾಧಿಸಲಾಗಿದೆ.
ಅಲ್ಲೊಂದು ಇಲ್ಲೊಂದು ಕಳ್ಳಭಟ್ಟಿ ತಯಾರಿಸುವ ಪ್ರಕರಣಗಳು ಕಂಡು ಬರುತ್ತಿದೆ. ಕಮರಿಪೇಟೆಯಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಂಡಿಲ್ಲ. ಅಕ್ರಮ ಮದ್ಯ ತಯಾರಿಕೆ, ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶದಲ್ಲಿ ಎಲ್ಲಿಯೂ ಪಾನ ನಿಷೇಧ ಯಶಸ್ವಿಗೊಂಡಿಲ್ಲ. ಪಾನ ನಿಷೇಧ ಮಾಡುವ ಪ್ರಸ್ತಾಪ ಸದ್ಯಕ್ಕೆ ನಮ್ಮ ಸರಕಾರದ ಮುಂದಿಲ್ಲ. ಪಾನ ನಿಷೇಧ ಮಾಡಿದ ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಮತ್ತೆ ಮದ್ಯ ಮಾರಾಟ ಆರಂಭಿಸಲಾಗಿದೆ. ಗುಜರಾತ್‌ನಲ್ಲಿ ಪಾನ ನಿಷೇಧಗೊಳಿಸಿದರೂ ಕಿರಾಣಿ ಅಂಗಡಿ ಹಾಗೂ ಪಾನ್‌ಶಾಪ್‌ಗ್ಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಪಾನ ನಿಷೇಧದಿಂದ ಯಾವುದೇ ಉಪಯೋಗವಿಲ್ಲ ಎಂದರು.
ಮದ್ಯಪಾನ ಸಂಯಮ ಮಂಡಳಿ ಹಾಗೂ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೈಗೊಂಡ ಜಾಗೃತಿ ಕಾರ್ಯಕ್ರಮಗಳಿಂದ ಮನ ಪರಿವರ್ತನೆಯಾಗಿ ಮದ್ಯಪಾನದಿಂದ ವಿಮುಖರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 1994ರಿಂದ ಹೊಸ ಮದ್ಯ ಮಾರಾಟ ಅಂಗಡಿಗಳಿಗೆ ಪರವಾನಗಿ ನೀಡುತ್ತಿಲ್ಲ. ಹೊಸ ಪರವಾನಗಿ ನೀಡುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದರು.