Advertisement

ಎಲ್ಲರ ಮನಗೆಲ್ಲುವ ಸೂರ್ಯಕಿರಣ

11:50 AM Feb 16, 2017 | Team Udayavani |

ಬೆಂಗಳೂರು: “ಏರೋ ಇಂಡಿಯಾ ಮತ್ತು ಭಾರತೀಯ ವಾಯುಸೇನೆ ದಿನಾಚರಣೆ ಸಂದರ್ಭದಲ್ಲಿ ನೀಡುವ ವೈಮಾನಿಕ ಪ್ರದರ್ಶನಗಳು ಯಾವಾಗಲೂ ನಮಗೆ ಸವಾಲು. ಸ್ಮರಣೀಯ ಕ್ಷಣಗಳು,” ಈ ವರೆಗೆ 500 ಪ್ರದರ್ಶನಗಳನ್ನು ನೀಡಿದ, ವೈಮಾನಿಕ ಪ್ರದರ್ಶನದ ಪ್ರಮುಖ ಆಕರ್ಷಣೆಯೂ ಆಗಿರುವ “ಸೂರ್ಯಕಿರಣ್‌’ ತಂಡದ ನಾಯಕ ಅಜಿತ್‌ ಕುಲಕರ್ಣಿ ಅವರ ಯಶಸ್ಸಿನ ನುಡಿಗಳಿವು. 

Advertisement

“ನಾಗರಿಕ ಪರಿಸರ… ಅಂದರೆ, ಜನರ ಮುಂದೆ ನಡೆಸುವ ವಿಮಾನಗಳ ಕಸರತ್ತು ಯಾವಾಗಲೂ ಸವಾಲಿನದ್ದು. ಅದರಲ್ಲೂ ಆಗಸ್ಟ್‌ 8 ದೇಶದ ವಾಯುಸೇನೆಗೆ ಗೌರವ ಸಲ್ಲಿಸುವ ದಿನ. ಅಂತಹ ಸಂದರ್ಭದಲ್ಲಿ ಪ್ರದರ್ಶನ ನೀಡುವುದು ಅತ್ಯಂತ ಸವಾಲಿನ ಕೆಲಸ. ಅದೇ ರೀತಿ, ದೇಶ-ವಿದೇಶಗಳಿಂದ ಬಂದ ಗಣ್ಯರ ಮನಗೆಲ್ಲುವ ಪ್ರದರ್ಶನಗಳನ್ನು ನೀಡುವುದು ಕೂಡ. ಇವೆರಡರಲ್ಲೂ “ಸೂರ್ಯಕಿರಣ್‌’ ಇದುವರೆಗೆ ಯಶಸ್ವಿಯಾಗಿದೆ,” ಎಂದು ಹೇಳಿದರು.  

“ಎರಡು ವರ್ಷಗಳ ಹಿಂದೆ ನಾನು ಸೂರ್ಯಕಿರಣ್‌ ತಂಡಕ್ಕೆ ಸೇರ್ಪಡೆಗೊಂಡೆ. ಸೂರ್ಯಕಿರಣ್‌ ಅತ್ಯಂತ ವೇಗವಾಗಿ ಹಾರುವ ಮತ್ತು ಅತಿ ಹೆಚ್ಚು ಸಾಮರ್ಥ್ಯದ ವಿಮಾನ. ಹೀಗಾಗಿಯೇ ಇವುಗಳನ್ನು ಓಡಿಸುವುದು ತುಂಬಾ ಖುಷಿ ಕೂಡ. ಈ ಮೊದಲು ಎಂಐಜಿ-29 ಓಡಿಸಿದ್ದೆ. ಆದರೆ, ಅದಕ್ಕಿಂತ ಹೆಚ್ಚು ಖುಷಿ ಕೊಟ್ಟಿದ್ದು ಸೂರ್ಯಕಿರಣ್‌,” ಎನ್ನುತ್ತಾರೆ ಮೂಲತಃ ಪುಣೆಯ ಅಜಿತ್‌ ಕುಲಕರ್ಣಿ. 

ಒಂದೆಡೆ ಭವಿಷ್ಯದಲ್ಲಿ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೆ, ಮತ್ತೂಂದೆಡೆ ವೈಮಾನಿಕ ಕ್ಷೇತ್ರದಲ್ಲೂ ಅಷ್ಟೇ ಅಭಿವೃದ್ಧಿ ಸಾಧಿಸುವ ಸ್ಪಷ್ಟ ಸೂಚನೆಗಳು ಕಾಣುತ್ತಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪೈಲಟ್‌ ಆಗಲಿಚ್ಛಿಸುವವರು ಹೆಚ್ಚು ಏಕಾಗ್ರತೆ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು. 

ಬೆಂಗಳೂರು ನನ್ನ ಫೇವರಿಟ್‌ : “ಆರು ವಿಮಾನಗಳಿರುವ ಸೂರ್ಯಕಿರಣ್‌ ತಂಡದಲ್ಲಿ ಒಟ್ಟಾರೆ 10 ಸದಸ್ಯರಿದ್ದಾರೆ. ನಮ್ಮ ತಂಡಕ್ಕೆ ಬೆಂಗಳೂರು ಅಚ್ಚುಮೆಚ್ಚು. ಅದರಲ್ಲೂ ವೈಯಕ್ತಿಕವಾಗಿ ಬೆಂಗಳೂರು ನನ್ನ ಫೇವರಿಟ್‌. ಇಲ್ಲಿನ ಎಂಟಿಆರ್‌ ಮತ್ತು ಕೋಷಿಸ್‌ ಹೋಟೆಲ್‌ಗ‌ಳಿಗೆ ನಾನು ಆಗಾಗ್ಗೆ ಭೇಟಿ ನೀಡುತ್ತೇನೆ,” ಎಂದು “ಸೂರ್ಯಕಿರಣ್‌’ ತಂಡದ ನಾಯಕ ಅಜಿತ್‌ ಕುಲಕರ್ಣಿ ಹೇಳಿದ್ದಾರೆ. 

Advertisement

ವಾಯುಸೇನೆಯೇ ಹೆಚ್ಚು ಸುರಕ್ಷಿತ: ಇದೇ ವೇಳೆ ಮಾತಿಗಿಳಿದ ಅಜಯ್‌ ದಸರಥಿ, “”ಸಾಮಾನ್ಯವಾಗಿ ಅಸುರಕ್ಷತೆ ಆತಂಕದಿಂದ ಪೋಷಕರು ಮಕ್ಕಳನ್ನು ವಾಯುಸೇನೆಗೆ ಕಳುಹಿಸಲು ಇಷ್ಟಪಡುವುದಿಲ್ಲ ಎಂಬ ಆರೋಪ ಇದೆ. ಆದರೆ, ಸಾಮಾನ್ಯ ನಾಗರಿಕ ಪರಿಸರಕ್ಕಿಂತ ವಾಯುಸೇನೆಯೇ ಹೆಚ್ಚು ಸುರಕ್ಷಿತ ಎಂಬುದು ನನ್ನ ಅಭಿಪ್ರಾಯ” ಎಂದರು. 

“ಆರು ತಿಂಗಳ ಹಿಂದಷ್ಟೇ ನಾನು ಸೂರ್ಯಕಿರಣ್‌ ಸೇರಿದ್ದೇನೆ. ಇದಕ್ಕೂ ಮುನ್ನ ಸು-30 ಓಡಿಸಿದ ಅನುಭವ ಹೊಂದಿದ್ದೇನೆ. ಎಲ್ಲೂ ನನಗೆ ಅಸುರಕ್ಷತೆ ಕಾಡಿಲ್ಲ. ಇಲ್ಲಿ ಒಂದು ಕುಟುಂಬದಂತೆ ಎಲ್ಲರೂ ಇರುತ್ತಾರೆ. 500ನೇ ಪ್ರದರ್ಶನ ನೀಡುತ್ತಿರುವ ಸೂರ್ಯಕಿರಣ್‌ ತಂಡದಲ್ಲಿ ನಾನು ಇದ್ದಿದ್ದು ಹೆಚ್ಚು ಖುಷಿ ಕೊಟ್ಟಿದೆ,” ಎಂದು ತಿಳಿಸಿದರು. 

“ಚಿಕ್ಕವನಿದ್ದಾಗಿಂದಲೂ ಯುದ್ಧವಿಮಾನದ ಪೈಲಟ್‌ ಆಗಬೇಕು ಎಂದು ಕನಸು ಕಂಡಿದ್ದೆ. ಈ ನಿಟ್ಟಿನಲ್ಲಿ ತಯಾರಿ ಕೂಡ ಮಾಡಿಕೊಂಡಿದ್ದೆ. ಇಷ್ಟೊಂದು ಜನರ ನಡುವೆ ಪ್ರದರ್ಶನ ನೀಡುತ್ತಿರುವುದು ಹೆಚ್ಚು ತೃಪ್ತಿ ತಂದಿದೆ,” ಎಂದು ಹೇಳಿದರು. 

ಅಜಯ್‌ ಮೂಲಬೇರು ಕರ್ನಾಟಕ: ಅಂದಹಾಗೆ ಅಜಯ್‌ ದಸರಥಿ ಅವರು ಹುಟ್ಟಿ ಬೆಳೆದಿದ್ದು ಚೆನ್ನೈ ಆದರೂ, ಅವರ ಮೂಲ ಬೇರು ಕರ್ನಾಟಕ. ಅಜಯ್‌ ಅವರ ತಂದೆ ಮೂಲತಃ ಕರ್ನಾಟಕದವರು ಮತ್ತು ತಾಯಿ ತಮಿಳುನಾಡಿನವರು. ಅಜಯ್‌ ಕನ್ನಡ ಕೂಡ ತಕ್ಕಮಟ್ಟಿಗೆ ಮಾತನಾಡುತ್ತಾರೆ. 

ಏರೋ ಇಂಡಿಯಾದಲ್ಲಿ ಅಂಚೆ ಕೇಂದ್ರ: ಏರೊ ಇಂಡಿಯಾ ನಡೆಯುತ್ತಿರುವ ಯಲಹಂಕದ ವಾಯು ನೆಲೆಯಲ್ಲಿ ಅಂಚೆ ಇಲಾಖೆ ವಿಶೇಷ ಕೇಂದ್ರವನ್ನು ತೆರದಿದೆ. ಈ ಕೇಂದ್ರವು ಫೆ.18ರವರೆಗೆ ತೆರೆದಿರುತ್ತದೆ. ಈ ಕೇಂದ್ರದಲ್ಲಿ ಹಳೆಯ ಸ್ಟಾಂಪ್‌, ಗ್ರೀಟಿಂಗ್‌ ಕಾರ್ಡ್‌, ಸಚಿತ್ರ ಅಂಚೆ ಕಾರ್ಡ್‌, ಮಗ್‌, ಬುಕ್‌ ಮಾರ್ಕ್‌ ಇತ್ಯಾದಿಗಳ ಮಾರಾಟ ಹಾಗೂ ಪ್ರದರ್ಶನ ಇರುತ್ತದೆ. ಜೊತೆಗೆ “ಮೈ ಸ್ಟಾಂಪ್‌’ ಕೌಂಟರ್‌ ಸಹ ಇರುತ್ತದೆ ಎಂದು ಬೆಂಗಳೂರು ಪ್ರಧಾನ ಅಂಚೆ ಕಚೇರಿ ಪ್ರಕಟಣೆ ತಿಳಿಸಿದೆ.

ಉದ್ಯಮಗಳಿಗೆ ಪ್ರೋತ್ಸಾಹಿಸುವ ಒಪ್ಪಂದಕ್ಕೆ ಸಹಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಂಬಂಧ ಸರ್ಕಾರೇತರ ಸಂಸ್ಥೆಯಾದ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಫ್ರಾನ್ಸ್‌ ಮೂಲದ ಟಿಗ್ರೋ ಸಂಸ್ಥೆಗಳು ಬುಧವಾರ ಒಪ್ಪಂದಕ್ಕೆ ಸಹಿ ಹಾಕಿವೆ.  “ಏರೋ ಇಂಡಿಯಾ 2017′ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ ನೀಡುವುದು ಮತ್ತು ಅಗತ್ಯವಿರುವ ಉಪಕರಣಗಳ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉದ್ಯಮಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿರುವುದು ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. 

ಎಚ್‌ಎಎಲ್‌ನಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಲು ಕೇಂದ್ರದ ಜತೆ ಮಾತುಕತೆ
ಬೆಂಗಳೂರು:
ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಈ ಹಿಂದಿನಂತೆ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸುವ ಆಲೋಚನೆ ಇದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಎಚ್‌ಎಎಲ್‌ ಮುಖ್ಯಸ್ಥ ಡಾ.ಸುವರ್ಣ ರಾಜು ಹೇಳಿದ್ದಾರೆ. 

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2017ರಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “”ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭ ಮಾಡುವ ಸಂಬಂಧ ಸರ್ಕಾರದ ಜತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆಯಲು ಪ್ರಯತ್ನ ನಡೆಸಲಾಗುವುದು,” ಎಂದು ತಿಳಿಸಿದರು.

“ಕೇಂದ್ರ ಸರ್ಕಾರ ನೂತನ ಪ್ರಾದೇಶಿಕ ಸಂಪರ್ಕ ಯೋಜನೆ ಜಾರಿಗೊಳಿಸಿ ದೇಶ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಿಂದ ಎಚ್‌ಎಎಲ್‌ ನಿಲ್ದಾಣವನ್ನು ಕೈಬಿಡಲಾಗಿದೆ. ಈ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು,” ಎಂದರು.

“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನಿರ್ಮಿಸುವ ವೇಳೆ ರಾಜ್ಯ ಸರ್ಕಾರವು ಮುಂದಿನ 25 ವರ್ಷಗಳಲ್ಲಿ 150 ಕಿ.ಮೀ ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣ ಅಥವಾ ಅಸ್ತಿತ್ವದಲ್ಲಿರುವ ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದೆ. ಈ ಕಾರಣಕ್ಕಾಗಿ ಎಚ್‌ಎಎಲ್‌ನಲ್ಲಿ ಸದ್ಯ ಯಾವುದೇ ವಾಣಿಜ್ಯ ಚಟುವಟಿಕೆ ನಡೆಯುತ್ತಿಲ್ಲ.

ಆದರೆ, ಮುಂದಿನ ದಿನಗಳಲ್ಲಿ ವಾಣಿಜ್ಯ  ಚಟುವಟಿಕೆ ಕಾರ್ಯ ನಡೆಸಲು ಯತ್ನಿಸಲಾಗುವುದು,” ಎಂದು ತಿಳಿಸಿದರು. ಅತ್ಯಾಧುನಿಕ ಹಗುರ ಯುದ್ಧ ವಿಮಾನ ತಯಾರಿಕೆಗೆ ಸಂಬಂಧಿಸಿದಂತೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಎಚ್‌ಎಎಲ್‌ನಿಂದ ಉತ್ತಮ ವಿನ್ಯಾಸದ ಒಟ್ಟು 17 ಬಗೆಯ ಏರ್‌ಕ್ರಾಫ್ಟ್ ಮತ್ತು ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಪ್ರಸ್ತಕ ಸಾಲಿನಲ್ಲಿ ಎಚ್‌ಎಎಲ್‌ಗೆ 1400 ಕೋಟಿ ನೆರವು ನೀಡಿದೆ. ಏರ್‌ಕ್ರಾಫ್ಟ್ಗಳ ಅಭಿವೃದ್ಧಿಗೆ ಈಗಾಗಲೇ ಸಾವಿರ ಕೋಟಿ ರೂ. ನೀಡಲು ಕ್ಯಾಬಿನೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಕೇಂದ್ರದ ನೆರವಿನಿಂದಾಗಿ ಎಚ್‌ಎಎಲ್‌ ದೇಶದ ಮೊದಲ ಏರೋ ಇಂಜಿನ್‌ ಅಭಿವೃದ್ಧಿಪಡಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ,” ಎಂದು ವಿವರಿಸಿದರು. 

ತೆಲಂಗಾಣದಲ್ಲಿ ವೈಮಾನಿಕ ತರಬೇತಿಗೆ ಒಡಂಬಡಿಕೆ 
ಬೆಂಗಳೂರು:
ದೇಶದ ಯುವಕರಿಗೆ ವೈಮಾನಿಕ ಪ್ರಕ್ರಿಯೆಗಳ ಬಗ್ಗೆತರಬೇತಿ ನೀಡಲು ಹೈದರಾಬಾದ್‌ನಲ್ಲಿ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಫಾರ್‌ ಏರೊಸ್ಪೇಸ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ ಸ್ಥಾಪಿಸುವ ಸಂಬಂಧ ಏರೋ ಇಂಡಿಯಾ ಪ್ರದರ್ಶನದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತೆಲಂಗಾಣ ಸರ್ಕಾರ ಮತ್ತು ನ್ಯಾಷನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಇಂಡಿಯಾ ಹಾಗೂ ಫ್ರಾನ್ಸ್‌ನ ಏರೊಕ್ಯಾಂಪಸ್‌ ಸಹಕಾರದೊಂದಿಗೆ  ಈ ಕೇಂದ್ರ ಅಭಿವೃದ್ಧಿ ಪಡಿಸಲಾಗುವುದು.  

ಈ ಕೇಂದ್ರವು ಹೈದರಾಬಾದ್‌ನಲ್ಲಿರುವ ಬೇಗಂಪೇಟ್‌ ವಿಮಾನನಿಲ್ದಾಣದಲ್ಲಿ ಸ್ಥಾಪಿತವಾಗಧಿಲಿದ್ದು, 10ನೇ ತರಗತಿ ಉತ್ತೀರ್ಣರಾದವರವರಿಂದ ಹಿಡಿದು ಪರಿಣಿತ ವೈಮಾನಿಕ ಸಿಬ್ಬಂದಿಯವರೆಗಿನ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದೆ. ಅಭ್ಯರ್ಥಿಗಳು ವಿಮಾನ ಉತ್ಪಾದನೆ, ಲಾಗಿಸ್ಟಿಕ್ಸ್‌, ನಿರ್ವಹಣೆ, ರಿಪೇರಿ ಮತ್ತು ಓವರ್‌ಔಲ್‌ (ಎಂಆರ್‌ಒ),ನಿರ್ವಹಣೆ ಮತ್ತು ವಿಶೇಷ ವೈಮಾನಿಕ ಪ್ರಕ್ರಿಯೆಗಳ ತರಬೇತಿ ಪಡೆಯಲಿದ್ದಾರೆ. ಸೆಂಟರ್‌ ಸ್ಥಾಪನೆಗೆ ತೆಲಂಗಾಣ ಸರ್ಕಾರ ಭೂಮಿ ಒದಗಿಸಲಿದೆ. 

ಕೇಂದ್ರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್‌ ಪ್ರತಾಪ್‌ ರೂಡಿ, “”ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನಾಂಗಕ್ಕೆ ಅಗತ್ಯವಿರುವ ಕೌಶಲ ತರಬೇತಿ ನೀಡಿ ಅವರ ಅವಕಾಶವನ್ನು ಸಮೃದ್ಧಗೊಳಿಸುವ ಉದ್ದೇಶದಿಂದ ಈ ಕೇಂದ್ರವು ವಿಮಾನ ನಿರ್ವಹಣೆಯ ತರಬೇತಿಯನ್ನು ಮಾತ್ರ ನೀಡದೆ,  ವೈಮಾನಿಕ ಉದ್ಯಮದಲ್ಲಿನ ಉತ್ಪಾದನೆ ಮತ್ತು ಜೋಡಣೆಯನ್ನು ಸಹ ಮಾಡಲಿದೆ,” ಎಂದು ತಿಳಿಸಿದರು.

ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ. ತಾರಕ ರಾಮರಾವ್‌ ಮಾತನಾಡಿ, “”ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಅನ್ನು ಸ್ಥಾಪಿಸಲು ತೆಲಂಗಾಣ ಮುಂಚೂಣಿಯಲ್ಲಿದೆ. ವೈಮಾನಿಕ ಕ್ಷೇತ್ರದಲ್ಲಿ ಸಮಗ್ರ ಹಾಗೂ ಯಶಸ್ಸು ಸಾಧಿಸಲು ಬೇಕಾಗಿರುವ ಕೌಶಲ್ಯ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದ್ದೇವೆ,” ಎಂದರು.

2020ರ ವೇಳೆಗೆ ಯುದ್ಧ ವಿಮಾನಗಳು ವಿದೇಶಕ್ಕೆ
“2020ರ ವೇಳೆಗೆ ಯುದ್ಧ ವಿಮಾನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕುರಿತು ಯೋಜನೆ ರೂಪಿಸಲಾಗಿದೆ.  ಎಚ್‌ಎಎಲ್‌ನಿಂದ ಭಾರತೀಯ ಸೇನೆಗೆ 40 ತೇಜಸ್‌ ಲಘು ಯುದ್ಧ ವಿಮಾನ (ಎಲ್‌ಸಿಎ) ತಯಾರಿಸಿ ಕೊಡುವ ಜವಾಬ್ದಾರಿಯನ್ನು ಸಂಸ್ಥೆ ಹೊಂದಿದ್ದು, ಈಗಾಗಲೇ 3 ತೇಜಸ್‌ಗಳನ್ನು ವಾಯು ಸೇನೆಗೆ ಹಸ್ತಾಂತರಿಸಲಾಗಿದೆ.

2015-16ನೇ ಸಾಲಿನಲ್ಲಿ ಎಚ್‌ಎಎಲ್‌ 7.14ರಷ್ಟು ಅಭಿವೃದ್ಧಿ ಸಾಧಿಸಿದ್ದು, ಒಟ್ಟು 16,736 ಕೋಟಿ ವಹಿವಾಟು ನಡೆಸಿದೆ. 2016-17ನೇ ಸಾಲಿನಲ್ಲಿ 17,100 ಕೊಟಿಯ ವಾಹಿವಾಟು ಗುರಿಯನ್ನು ಸಂಸ್ಥೆ ಹೊಂದಿದ್ದು, ಜನವರಿ ಅಂತ್ಯದ ವೇಳೆಗೆ 10,860 ಕೋಟಿ ವಹಿವಾಟು ದಾಖಲಾಗಿದೆ,” ಎಂದು ಎಚ್‌ಎಎಲ್‌ ಮುಖ್ಯಸ್ಥ ಡಾ.ಸುವರ್ಣ ರಾಜು ತಿಳಿಸಿದರು. 

ತ್ಯಾಜ್ಯ ವಿಲೇವಾರಿ ಹೊಣೆ ಬೆಂಗಳೂರಿನ ಕಂಪನಿಗೆ 
ಬೆಂಗಳೂರು ಮೂಲದ ರೆಡ್ಡಾನೇಚುರಾ ಸ್ಟಾರ್ಟ್‌ ಅಪ್‌ ಕಂಪೆನಿ, “ಏರೋ ಇಂಡಿಯಾ-2017′ ಉತ್ಪತ್ತಿಯಾಗುವ ಕಸವನ್ನು ನಿರ್ವಹಣೆ ಮಾಡುವ ಹೊಣೆ ಹೊತ್ತಿದೆ. ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ 30 ಟನ್‌ ಒಣತ್ಯಾಜ್ಯ ಮತ್ತು 10 ಟನ್‌ ಹಸಿ ತ್ಯಾಜ್ಯ ಸೇರಿದಂತೆ ಸುಮಾರು 40 ಟನ್‌ ತ್ಯಾಜ್ಯ ಉತ್ಪತ್ತಿಯಾಗುವ ನಿರೀಕ್ಷೆ ಇದೆ.

ಇದನ್ನು ಪ್ರತ್ಯೇಕಿಸಿ, ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿದೆ. ಈ ಸಂಬಂಧ 40 ಜನ ಸಿಬ್ಬಂದಿಯನ್ನು ಆ ಕಂಪೆನಿ ನಿಯೋಜಿಸಿದೆ. ಕಸ ನಿರ್ವಹಣೆಗಾಗಿ ಅಟೋಮೆಟಿಕ್‌ ಯಂತ್ರಗಳನ್ನು ಕಂಪೆನಿ ಹೊಂದಿದೆ. ಇದರ ನೆರವಿನಿಂದ ಕೇವಲ 24 ಗಂಟೆಗಳಲ್ಲಿ ಹಸಿತ್ಯಾಜ್ಯ ಕಾಂಪೋಸ್ಟ್‌ ಆಗಿ ಪರಿವರ್ತನೆಯಾಗುತ್ತದೆ. ಒಣತ್ಯಾಜ್ಯವನ್ನು ಸಂಸ್ಕರಣೆ ಮಾಡಿ ಮರುಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next